ADVERTISEMENT

ಚಾಮರಾಜನಗರ ಲೋಕ ಅದಾಲತ್‌ | ಏಕಕಾಲದಲ್ಲಿ 572 ಮಂದಿಗೆ ಜನನ ಪ್ರಮಾಣ ಪತ್ರ

ಲೋಕ ಅದಾಲತ್‌ನಲ್ಲಿ ಆದೇಶ ನೀಡಿದ ನ್ಯಾಯಾಲಯ: ‘ನನ್ನ ಗುರುತು’ ಅಭಿಯಾನ ಸಾಥ್‌

ಬಾಲಚಂದ್ರ ಎಚ್.
Published 16 ಜುಲೈ 2025, 3:04 IST
Last Updated 16 ಜುಲೈ 2025, 3:04 IST
ಮೋನಾ ರೋತ್
ಮೋನಾ ರೋತ್   

ಚಾಮರಾಜನಗರ: ಜನನ ಪ್ರಮಾಣ ಪತ್ರ ಪಡೆಯಲಾಗದೆ ಆಧಾರ್ ಕಾರ್ಡ್‌ ಸಹಿತ ಸರ್ಕಾರದ ಎಲ್ಲ ಸೇವೆಗಳಿಂದ ವಂಚಿತರಾಗಿದ್ದ ಯಳಂದೂರು ತಾಲ್ಲೂಕಿನ ‌ಬಿಳಿಗಿರಿರಂಗನ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಹಾಡಿಗಳ ನಿವಾಸಿಗಳಿಗೆ ರಾಷ್ಟ್ರೀಯ ಲೋಕ ಅದಾಲತ್‌ ಮೂಲಕ ಜನನ ಪ್ರಮಾಣ ಪತ್ರಗಳು ದೊರೆಯುತ್ತಿವೆ.

572 ಮಂದಿಗೆ ಜನನ ಪ್ರಮಾಣ ಪತ್ರ: ಜುಲೈ 12ರಂದು ಯಳಂದೂರು ತಾಲ್ಲೂಕಿನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಏಕಕಾಲದಲ್ಲಿ 1 ವರ್ಷದಿಂದ 65 ವರ್ಷ ವಯೋಮಾನಕ್ಕೆ ಸೇರಿರುವ 572 ಮಂದಿಗೆ ಜನನ ಪ್ರಮಾಣ ಪತ್ರ ವಿತರಿಸುವಂತೆ ಸಿವಿಲ್ ನ್ಯಾಯಾಧೀಶರಾದ ರಂಜಿತ್ ಕುಮಾರ್ ಆದೇಶ ನೀಡಿದ್ದಾರೆ.

ದಾಖಲೆಗಳು ದೊರೆತಿದ್ದು ಹೇಗೆ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ನನ್ನ ಗುರುತು ಅಭಿಯಾನ’ ಅನುಷ್ಠಾನಗೊಂಡಿದ್ದು ಆಧಾರ್, ಜಾತಿ, ಆದಾಯ, ಜನನ ಪ್ರಮಾಣ ಪತ್ರ ಸೇರಿದಂತೆ ಸರ್ಕಾರದ 13 ಬಗೆಯ ದಾಖಲೆಗಳನ್ನು ಪರಿಶಿಷ್ಟ ಜಾತಿ, ವರ್ಗಗಳಿಗೆ ಸೇರಿದವರ ಮನೆಯ ಬಾಗಿಲಿಗೆ ವಿತರಿಸಲಾಗುತ್ತಿದೆ.

ADVERTISEMENT

ಅಭಿಯಾನದ ಭಾಗವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಈಚೆಗೆ ಅಧಿಕಾರಿಗಳು ಮನೆ–ಮನೆ ಸಮೀಕ್ಷೆ ನಡೆಸಿದಾಗ 1,637 ಮಂದಿ ಬಳಿ ಜನನ ಪ್ರಮಾಣ ಪತ್ರ ಇಲ್ಲದಿರುವುದು ಹಾಗೂ ಇವರ ಪೈಕಿ 29 ಜನರ ಬಳಿ ಸರ್ಕಾರದ ಒಂದೂ ದಾಖಲೆಗಳು ಇಲ್ಲದಿರುವುದು ಕಂಡುಬಂದಿತ್ತು.

ಬಹುತೇಕ ಅನಕ್ಷರಸ್ಥರು ಇರುವ ಆದಿವಾಸಿಗಳು ಶಾಲಾ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜನನ ಪ್ರಮಾಣ ಪತ್ರ ಪಡೆಯುವ ಗೋಜಿಗೆ ಹೋಗದೆ ಆಧಾರ್ ಕಾರ್ಡ್‌, ಪಡಿತರ ಚೀಟಿ ಸಹಿತ ಸರ್ಕಾರದ ಯಾವುದೇ ಸೇವೆ ಹಾಗೂ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ದಾಖಲೆಗಾಗಿ ಕಚೇರಿಗೆ ಅಲೆದು ಕೈಚೆಲ್ಲಿ ಕುಳಿತಿದ್ದರು.

ಈ ಸಮಸ್ಯೆಗೆ ಪರಿಹಾರವಾಗಿ ಅಧಿಕಾರಿಗಳು ಜನನ ಪ್ರಮಾಣ ಪತ್ರ ಇಲ್ಲದವರನ್ನು ಪತ್ತೆಹಚ್ಚಿ ಅವರು ಓದಿದ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಶಾಲಾ ದಾಖಲಾತಿಗಳ ವಿವರ ಪಡೆದರು. ಬಳಿಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹಾಗೂ ವಕೀಲರ ನೆರವು ಪಡೆದರು.

ಬಳಿಕ ಅಧಿಕಾರಿಗಳು ಹಾಗೂ ವಕೀಲರ ತಂಡ ಜನನ ಪ್ರಮಾಣ ಪತ್ರ ಇಲ್ಲದವರ ಮನೆಗಳಿಗೆ ತೆರಳಿ ಅವರಿಂದ ಅರ್ಜಿ ಹಾಕಿಸಿ, ತಹಶೀಲ್ದಾರ್ ಬಳಿ ಅಲಭ್ಯ ಪ್ರಮಾಣಪತ್ರ ಪಡೆದು ವಕಾಲತ್ತು ನಾಮೆಯ ಜೊತೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಯಿತು.

ಅದರಂತೆ, ಜುಲೈ 12ರಂದು ನಡೆದ ರಾಷ್ಟ್ರೀಯ ಅದಾಲತ್‌ನಲ್ಲಿ 572 ಮಂದಿಗೆ ಜನನ ಪ್ರಮಾಣ ಪತ್ರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ಶಶಿಕಲಾ ಮಾಹಿತಿ ನೀಡಿದರು.

ದಾಖಲೆಗಳ ಅಲಭ್ಯತೆಯಿಂದ ಜನನ ಪ್ರಮಾಣ ಪತ್ರ ಪಡೆಯಲಾಗದವರನ್ನು ಗುರುತಿಸಿ ಶಾಲಾ ದಾಖಲಾತಿ ಪಡೆದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಒಂದೇ ಬಾರಿಗೆ 572 ಮಂದಿಗೆ ದಾಖಲೆ ನೀಡುವಂತೆ ನ್ಯಾಯಾಧೀಶರು ಆದೇಶ ನೀಡಿರುವುದು ಸಂತಸ ತಂದಿದೆ.
ಶಶಿಕಲಾ ಬಿಳಿಗಿರಿ ರಂಗನಬೆಟ್ಟ ಪಂಚಾಯಿತಿ ಪಿಡಿಒ

‘ಕಾನೂನು ಸೇವಾ ಪ್ರಾಧಿಕಾರದ ನೆರವು’

‘ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಾರಿಗೆ ಬಂದಿರುವ ‘ನನ್ನ ಗುರುತು’ ಅಭಿಯಾನದಡಿ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿವಾಸಿಗಳಿಗೆ 13 ಬಗೆಯ ದಾಖಲೆಗಳನ್ನು ನೀಡಲಾಗುತ್ತಿದೆ ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹೇಳಿದರು. ‘ಸಮೀಕ್ಷೆ ವೇಳೆ ಬಹಳಷ್ಟು ಜನರ ಬಳಿ ಜನನ ಪ್ರಮಾಣ ಪತ್ರ ಇಲ್ಲದಿರುವುದು ಕಂಡುಬಂತು. ಜನನ ಪ್ರಮಾಣ ಪತ್ರ ಪಡೆದುಕೊಳ್ಳಲು ಅವರ ಬಳಿ ಯಾವ ದಾಖಲೆಗಳು ಇರಲಿಲ್ಲ. ಇದನ್ನು ಮನಗಂಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ಲೋಕ ಅದಾಲತ್‌ನಲ್ಲಿ ಜನನ ಪ್ರಮಾಣ ಪತ್ರ ಕೊಡಿಸಲಾಗುತ್ತಿದೆ’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.