ADVERTISEMENT

ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ ಇಂದಿನಿಂದ

22ರಂದು ಮಹಾ ರಥೋತ್ಸವ: 4.50 ಲಕ್ಷ ಲಾಡುಗಳ ತಯಾರಿಕೆ

ಎಚ್.ಬಾಲಚಂದ್ರ
Published 18 ಅಕ್ಟೋಬರ್ 2025, 9:01 IST
Last Updated 18 ಅಕ್ಟೋಬರ್ 2025, 9:01 IST
ಮಲೆ ಮಹದೇಶ್ವರನ ದೇಗುಲದಲ್ಲಿ ಅ.18ರಿಂದ ಆರಂಭವಾಗುವ ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೃಶ್ಯ
ಮಲೆ ಮಹದೇಶ್ವರನ ದೇಗುಲದಲ್ಲಿ ಅ.18ರಿಂದ ಆರಂಭವಾಗುವ ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೃಶ್ಯ   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರನ ಬೆಟ್ಟದಲ್ಲಿ ಅ.18ರಿಂದ 22ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ.

ಐದು ದಿನ ನಡೆಯುವ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆಯಲಿದ್ದಾರೆ. ಜಾತ್ರೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರ ತಲುಪುತ್ತಿದ್ದು ಎಲ್ಲೆಡೆ ಮಾದಪ್ಪನ ಸ್ಮರಣೆ ಅನುರಣಿಸುತ್ತಿದೆ. ದೇವಸ್ಥಾನಕ್ಕೆ ‌ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ.

18 ಹಾಗೂ 19ರಂದು ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ಉತ್ಸವಾದಿಗಳು ನೆರವೇರಲಿದೆ. 20ರಂದು ನರಕ ಚತುದರ್ಶಿ, 21ರಂದು ಅಮಾವಾಸ್ಯೆ ಪ್ರಯುಕ್ತ ಹಾಲರವೆ ಉತ್ಸವ ಜರುಗಲಿದೆ. 22ರಂದು ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ. ಈಗಾಗಲೇ ಸಂಪ್ರದಾಯದಂತೆ ಕಾಡಿನಿಂದ ಬಿದಿರು ತಂದು ಅಚ್ಚೆಗಳನ್ನು ಒಪ್ಪವಾಗಿ ಜೋಡಿಸಿ 56 ಅಡಿ ಎತ್ತರದ ರಥ ನಿರ್ಮಿಸಲಾಗಿದೆ.

ADVERTISEMENT

ರಥೋತ್ಸವದ ದಿನ ಗುರು ಬ್ರಹ್ಮೋತ್ಸವ, ಅನ್ನ ಬ್ರಹ್ಮೋತ್ಸವ ಹಾಗೂ ರಾತ್ರಿ ಮಹಾ ನೈವೇದ್ಯ ಸಮರ್ಪಣೆಯಾಗಲಿದ್ದು ಅದ್ದೂರಿ ತೆಪ್ಪೋತ್ಸವದ ಮೂಲಕ ದೀಪಾವಳಿ ಜಾತ್ರೆಗೆ ತೆರೆ ಬೀಳಲಿದೆ.

ಹಾಲರವೆ ಉತ್ಸವ:

ಹಾಲರವೆ ಉತ್ಸವ ಜಾತ್ರೆಯ ಪ್ರಮುಖ ವಿಧಿವಿಧಾನಗಳಲ್ಲೊಂದು. ಸ್ಥಳೀಯ ಬೇಡಗಂಪಣ ಸಮುದಾಯದ 10 ರಿಂದ 12 ವರ್ಷದೊಳಗಿನ 101 ಬಾಲೆಯರು ಹಸಿರು ಸೀರೆಯುಟ್ಟು ಹಾಲಹಳ್ಳದಿಂದ ಹಾಲರವಿ ಕಳಸವನ್ನು ತಲೆಮೇಲೆ ಹೊತ್ತು ಪಾದಯಾತ್ರೆ ಮೂಲಕ ದೇವಾಲಯಕ್ಕೆ ತರುತ್ತಾರೆ. ಹಾಲರವೆ ಮೆರವಣಿಗೆ ತಂಬಡಿಗೇರಿ ಗ್ರಾಮದ ಮುಖ್ಯದ್ವಾರ ಪ್ರವೇಶಿಸುವಾಗ ದೊಡ್ಡಪಾಲಿನ ಬೇಡಗಂಪಣ ಸಮುದಾಯದವರ ಕತ್ತಿ ಪವಾಡ ನಡೆಯುತ್ತದೆ.

ಸಾರಿಗೆ ವ್ಯವಸ್ಥೆ:

ಕರ್ನಾಟಕ ಮಾತ್ರವಲ್ಲದೆ ನೆರೆಯ ತಮಿಳುನಾಡಿನಿಂದಲೂ ಹೆಚ್ಚಿನ ಭಕ್ತರು ಮಲೆ ಮಹದೇಶ್ವರನ ಬೆಟ್ಟಕ್ಕೆ ಬರುವುದರಿಂದ ಉಭಯ ರಾಜ್ಯಗಳ ಸಾರಿಗೆ ಸಂಸ್ಥೆಗಳು ಭಕ್ತರ ಅನುಕೂಲಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿವೆ. ತಮಿಳುನಾಡಿನಿಂದ 150 ಬಸ್‌ಗಳು, ಕೆಎಸ್‌ಆರ್‌ಟಿಸಿಯಿಂದ 300ಕ್ಕೂ ಹೆಚ್ಚು ಬಸ್‌ಗಳು ರಾಜ್ಯದ ಹಲವೆಡೆಗಳಿಂದ ಸಂಚರಿಸಲಿವೆ.

ಪ್ಲಾಸ್ಟಿಕ್‌ಗೆ ನಿಷೇಧ:

ಹಸಿರು ದೀಪಾವಳಿ ಆಚರಿಸುವ ಉದ್ದೇಶದಿಂದ ಜಿಲ್ಲಾಡಳಿತ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಿದೆ. ತಾಳಬೆಟ್ಟ ಹಾಗೂ ಪಾಲಾರ್ ಚೆಕ್‌ಪೋಸ್ಟ್‌ಗಳಲ್ಲಿ ಭಕ್ತರಿಂದ ಪ್ಲಾಸ್ಟಿಕ್‌ ಕವರ್ ಹಾಗೂ ಬಾಟಲಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಭಕ್ತರ ವಾಸ್ತವಕ್ಕೆ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲು 4.50 ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದ್ದು ಈಗಾಗಲೇ 2 ಲಕ್ಷ ಲಾಡು ದಾಸ್ತಾನಿರಿಸಲಾಗಿದೆ. ಕುಡಿಯುವ ನೀರು ಶೌಚಾಲಯ ದರ್ಶನಕ್ಕೆ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಎ.ಇ.ರಘು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

ಶೌಚಾಲಯಗಳ ಕೊರತೆ ದೀಪಾವಳಿ ಜಾತ್ರೆಗೆ ಲಕ್ಷಾಂತರ ಮಂದಿ ಭೇಟಿನೀಡಲಿದ್ದು ಭಕ್ತರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದಲ್ಲಿ ಶೌಚಾಲಯಗಳು ಇಲ್ಲ. ಶೌಚಾಲಯಗಳ ದುರಸ್ತಿ ನಡೆಯುತ್ತಿರುವುದರಿಂದ ನೂರಾರು ಭಕ್ತರು ಸರದಿಯಲ್ಲಿ ನಿಂತು ಶೌಚಕ್ಕೆ ಹೋಗಬೇಕಿದೆ. ಮಹಿಳೆಯರು ವೃದ್ಧರು ಮಕ್ಕಳು ತೀವ್ರ ಸಮಸ್ಯೆ ಅನುಭವಿಸುತ್ತಿದ್ದು ತಾತ್ಕಾಲಿಕವಾಗಿ ಮೊಬೈಲ್‌ ಶೌಚಾಲಯಗಳ ಅಳವಡಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.