ADVERTISEMENT

ಮಾರುಕಟ್ಟೆ ವಿಶ್ಲೇಷಣೆ: ಹೂವಿನ ಧಾರಣೆ ಕೊಂಚ ಏರಿಕೆ, ಹಣ್ಣು ಯಥಾಸ್ಥಿತಿ

ಮೊಟ್ಟೆ, ಕೆಲವು ತರಕಾರಿಗಳು ಸ್ವಲ್ಪ ತುಟ್ಟಿ, ಮಾಂಸ ಮಾರುಕಟ್ಟೆಯಲ್ಲಿ ಆಗದ ವ್ಯತ್ಯಾಸ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:30 IST
Last Updated 24 ಜೂನ್ 2019, 19:30 IST
ಚಾಮರಾಜನಗರದ ಮಾರುಕಟ್ಟೆಯ ಮಳಿಗೆಯೊಂದರಲ್ಲಿ ಕಂಡು ಬಂದ ತರಕಾರಿಗಳು 
ಚಾಮರಾಜನಗರದ ಮಾರುಕಟ್ಟೆಯ ಮಳಿಗೆಯೊಂದರಲ್ಲಿ ಕಂಡು ಬಂದ ತರಕಾರಿಗಳು    

ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ಕೆಲವು ಹೂವುಗಳ ಧಾರಣೆಯಲ್ಲಿ ಕೊಂಚ ಹೆಚ್ಚಳವಾಗಿದ್ದರೆ, ತರಕಾರಿ, ಹಣ್ಣುಗಳು ಮತ್ತು ಮಾಂಸಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ, ಮಲ್ಲಿಗೆ, ಮೊಳ್ಳೆ, ಗುಲಾಬಿ ಹೂವುಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಕಳೆದ ವಾರ ಕೆಜಿ ₹ 200–₹ 300ರ ವರೆಗೆ ಇದ್ದ ಕನಕಾಂಬರ, ಈ ವಾರ ₹ 300–₹ 400ರ ವರೆಗೆ ಇದೆ. 100 ಗುಲಾಬಿಗಳ ಬೆಲೆ ₹ 200 ರಿಂದ ₹ 250ಕ್ಕೆ ಹೆಚ್ಚಾಗಿದೆ. ಮಲ್ಲಿಗೆಗೆ ₹ 120–₹ 160ರ ವರೆಗೂ ಇದೆ. ಕಳೆದ ವಾರ ₹ 100–₹ 120ರ ವರೆಗೆ ಇತ್ತು.

‘ಹೂವುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಸೋಮವಾರ ಮತ್ತು ಶುಕ್ರವಾರ ಮಾತ್ರ ಹೂವಿಗೆ ಬೇಡಿಕೆ ಇದೆ. ಮುಂದಿನ ವಾರ ಆಷಾಢ ಮಾಸ ಆರಂಭವಾಗಲಿದ್ದು, ಅಲ್ಲಿವರೆಗೂ ಇದೇ ಬೆಲೆ ಮುಂದುವರಿಯಲಿದೆ. ಆಷಾಢದ ಬಳಿಕ ಬಹುತೇಕ‌ಎಲ್ಲ ಹೂವುಗಳ ಬೆಲೆ ಕಡಿಮೆಯಾಗಲಿದೆ’ ಎಂದು ಹೂವಿನ ವ್ಯಾಪಾರಿ ಕೃಷ್ಣ ತಿಳಿಸಿದರು.

ADVERTISEMENT

ತರಕಾರಿಗಳ ಪೈಕಿ ಆಲೂಗೆಡ್ಡೆ, ಹಸಿಮೆಣಸಿನಕಾಯಿ, ಹಸಿ ಬಟಾಣಿ, ಗೋರಿಕಾಯಿಗಳ ಬೆಲೆ ₹ 5ರಿಂದ ₹ 30ರ ವರೆಗೂ ಏರಿಕೆಯಾಗಿದೆ. ಉಳಿದ ಕಾಯಿಪಲ್ಲೆಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

‘ಶುಭ ಸಮಾರಂಭಗಳು ಜರುಗುತ್ತಿವೆ. ಹೀಗಾಗಿ ಕೆಲವು ತರಕಾರಿಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ’ ಎಂದು ಹಾಪ್ ಕಾಮ್ಸ್ ವ್ಯಾಪಾರಿ ಮಧು ತಿಳಿಸಿದರು.

ಕೊತ್ತಂಬರಿ ಸೊಪ್ಪು ತುಟ್ಟಿ: ಸೊಪ್ಪುಗಳ ಪೈಕಿ ಕೊತ್ತಂಬರಿ ಬೆಲೆ ಹೆಚ್ಚಾಗಿದೆ. ಕಟ್ಟಿಗೆ ₹ 40ರಿಂದ ₹ 60ರ ವರೆಗೂ ಬೆಲೆ ಇದೆ.

ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರ 100 ಮೊಟ್ಟೆಗೆ ₹ 431 ಇತ್ತು. ಈ ವಾರ ₹ 455ಕ್ಕೆ ಹೆಚ್ಚಳವಾಗಿದೆ.

‘ಜೂನ್‌ನಲ್ಲಿ ಮೊಟ್ಟೆಗೆ ಬೇಡಿಕೆ ಶುರುವಾಗಿದೆ. ಪ್ರತಿ ಮೂರು ದಿನಕ್ಕೊಮ್ಮೆ ಬೆಲೆಯಲ್ಲಿ ವ್ಯತ್ಯಾಸ ಆಗುತ್ತದೆ’ ಎಂದು ಹೇಳುತ್ತಾರೆ ಮೊಟ್ಟೆ ವ್ಯಾಪಾರಸ್ಥರು.

ಹಣ್ಣುಗಳ ಪೈಕಿ ದ್ರಾಕ್ಷಿ ಬಿಟ್ಟು ಉಳಿದೆಲ್ಲವುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಕಳೆದ ವಾರ ಕೆಜಿ ₹ 120ರಷ್ಟಿದ್ದ ದ್ರಾಕ್ಷಿ ಈ ವಾರ ₹ 80ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.