ADVERTISEMENT

ಹಾಲಿನ ಖರೀದಿ ದರ ಮತ್ತೆ ₹2.5 ಹೆಚ್ಚಳ

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದ ಚಾಮುಲ್‌, ಪಶು ಆಹಾರದ ಬೆಲೆಯೂ ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 9:55 IST
Last Updated 7 ಫೆಬ್ರುವರಿ 2020, 9:55 IST
ಚಾಮುಲ್‌
ಚಾಮುಲ್‌   

ಚಾಮರಾಜನಗರ: ಜಿಲ್ಲೆಯ ಹಾಲು ಉತ್ಪಾದಕರಿಗೆ ಮತ್ತೆ ಶುಭ ಸುದ್ದಿ ನೀಡಿರುವ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್‌), ಎಲ್ಲ ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ಮತ್ತೆ ₹2.5 ಹೆಚ್ಚು ನೀಡಲು ನಿರ್ಧರಿಸಿದೆ. ಅಲ್ಲದೇ, ಪಶು ಆಹಾರ ಮಾರಾಟ ದರದಲ್ಲಿ ಪ್ರತಿ ಕೆ.ಜಿ.ಗೆ ₹1 ಕಡಿಮೆ ಮಾಡಿದೆ.

ಪ್ರತಿ ಲೀಟರ್‌ ಖರೀದಿ ದರವನ್ನು ಫೆ.1ರಿಂದಲೇ ₹1.5ರಷ್ಟು ಹೆಚ್ಚಿಸ ಲಾಗಿದ್ದು, ಇದೇ ತಿಂಗಳ 16ರಿಂದ ಮತ್ತೆ ₹1 ಹೆಚ್ಚು ನೀಡಲಿದೆ.

ಇದಕ್ಕೂ ಮೊದಲು, ಜನವರಿ 1ರಿಂದ ಅನ್ವಯವಾಗುವಂತೆ ಒಕ್ಕೂಟವು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ₹1.5 ಪ್ರೋತ್ಸಾಹ ಧನ ನೀಡಲು ನಿರ್ಧರಿಸಿತ್ತು.

ADVERTISEMENT

‘ಫೆ.4ರಂದು ನಡೆದಿದ್ದ ಚಾಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಖರೀದಿ ದರ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಶೇ 3.5ರಷ್ಟು ಜಿಡ್ಡಿನಾಂಶ ಹಾಗೂ ಶೇ 8.5ರಷ್ಟು ಎಸ್‌ಎನ್ಎಫ್‌ ಇರುವ ಹಾಲನ್ನು ಒಕ್ಕೂಟಕ್ಕೆ ಮಾರುತ್ತಿರುವ ಉತ್ಪಾದಕರಿಗೆ ಫೆ.16ರಿಂದ ಪ್ರತಿ ಲೀಟರ್‌ಗೆ ₹28 ಸಿಗಲಿದೆ’ ಎಂದು ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ವಿಮೆಗೆ 40 ಪೈಸೆ

‘ಫೆ.1ರಿಂದ ಹಾಲು ಮತ್ತು ಮೊಸರು ಮಾರಾಟ ದರದಲ್ಲಿ ಪ್ರತಿ ಲೀಟರ್‌ಗೆ ₹2 ಹೆಚ್ಚಳ ಮಾಡಿದ್ದು, ಇದರಲ್ಲಿ ಪ್ರತಿ ಲೀಟರ್‌ಗೆ ಮಾರಾಟಗಾರರ ಮಾರ್ಜಿನ್‌ ಹಣ 40 ಪೈಸೆ, ಉತ್ಪಾದಕರ ರಾಸುಗಳ ವಿಮೆ ಯೋಜನೆಗೆ 40 ಪೈಸೆ, ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿಯನ್ನು ಪ್ರೋತ್ಸಾಹಿಸಲು ಪ್ರತಿ ಲೀಟರ್‌ ಹಾಲಿಗೆ 20 ಪೈಸೆ ನೀಡಲು ನಿರ್ಧರಿಸಲಾಗಿದೆ. ಉಳಿದ ₹1 ಅನ್ನು ಉತ್ಪಾದಕರಿಗೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಮ್‌, ಮಸಾಲೆ ಮಜ್ಜಿಗೆ, ಲಸ್ಸಿ ತಯಾರಿಕೆ: ಒಕ್ಕೂಟವು ಸದ್ಯ ಪ್ರತಿದಿನ 2 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದ್ದು, ಜಿಲ್ಲೆಯಾದ್ಯಂತ ಪ್ರತಿದಿನ 28 ಸಾವಿರದಿಂದ 30 ಸಾವಿರ ಲೀಟರ್‌ ಹಾಲು ಹಾಗೂ 5,000–6,000 ಲೀಟರ್‌ ಮೊಸರು ಮಾರಾಟ ಮಾಡುತ್ತಿದೆ. 70 ಸಾವಿರದಿಂದ 75 ಸಾವಿರ ಲೀಟರ್‌ ಯುಎಚ್‌ಟಿ ಗುಣಮಟ್ಟದ ಹಾಲನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡ ಲಾಗುತ್ತಿದೆ. ಉಳಿದ ಹಾಲನ್ನು ಪರಿವರ್ತನೆ ಹಾಗೂ ಕೇರಳ ಹಾಲು ಮಹಾ ಮಂಡಳಿಗೆ ಮಾರಾಟ ಮಾಡಲಾಗುತ್ತಿದೆ.

ಸದ್ಯ, ಕುದೇರಿನಲ್ಲಿರುವ ಚಾಮುಲ್‌ ಘಟಕದಲ್ಲಿ 3 ಟನ್‌ ತುಪ್ಪ ಉತ್ಪಾದಿಸ ಲಾಗುತ್ತಿದೆ. ಫೆ.1ರಿಂದ ಕ್ರೀಮ್‌, ಮಸಾಲೆ ಮಜ್ಜಿಗೆ ಹಾಗೂ ಲಸ್ಸಿಯನ್ನೂ ತಯಾರಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.