ADVERTISEMENT

ಮಾದ‌ಪ್ಪನ ದರ್ಶನ, ಪೂಜೆಗೆ ಆನ್‌ಲೈನ್‌ ವ್ಯವಸ್ಥೆ

ಇನ್ನು ಎರಡು ದಿನಗಳಲ್ಲಿ ಕಾರ್ಯಾರಂಭ–ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಮೇ 2020, 15:42 IST
Last Updated 24 ಮೇ 2020, 15:42 IST
ದೇವಸ್ಥಾನದ ಆವರಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿ, ಸಿಬ್ಬಂದಿಯನ್ನು ನಿಯೋಜಿಸಿರುವುದು
ದೇವಸ್ಥಾನದ ಆವರಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿ, ಸಿಬ್ಬಂದಿಯನ್ನು ನಿಯೋಜಿಸಿರುವುದು   

ಮಹದೇಶ್ವರ ಬೆಟ್ಟ: ಲಾಕ್‌ಡೌನ್‌ ಅವಧಿ ಮತ್ತಷ್ಟು ವಿಸ್ತರಣೆಯಾಗಿರುವುದರಿಂದ ದೇವಸ್ಥಾನಗಳಲ್ಲಿ ಆನ್‌ಲೈನ್‌ ಮೂಲಕ ಪೂಜೆ, ದರ್ಶನ, ಪ್ರಸಾದ ವ್ಯವಸ್ಥೆ ಮಾಡಲು ‌ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೇ, ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲೂ ಆನ್‌ಲೈನ್‌ ದರ್ಶನದ ವ್ಯವಸ್ಥೆ ನಡೆಯುತ್ತಿದೆ.

ಇನ್ನು ಎರಡು ದಿನಗಳಲ್ಲಿ ಆನ್‌ಲೈನ್‌ ಮೂಲಕ ದೇವರ ದರ್ಶನಕ್ಕೆ, ಆನ್‌ಲೈನ್‌ ಸೇವೆಗಳು ಹಾಗೂ ಆನ್‌ಲೈನ್ ದೇಣಿಗೆಗೆ ವ್ಯವಸ್ಥೆ ಚಾಲನೆ ನೀಡಲಾಗುವುದು ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ಆನ್‌ಲೈನ್‌ ಸೇವೆ ನೀಡುವುದಕ್ಕಾಗಿಯೇ ಹೊಸದಾಗಿ ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆದಿದ್ದೇವೆ. ದಿನಪೂರ್ತಿ ಈ ಸೇವೆ ಲಭ್ಯವಿಲ್ಲ. ಅದಕ್ಕೆ ನಿಗದಿತ ಸಮಯ ನಿಗದಿಪಡಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಈಗಾಗಲೇ ಹಲವು ಸೇವೆಗಳು ಆನ್‌ಲೈನ್‌ನಲ್ಲಿವೆ. ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಅವುಗಳನ್ನೆಲ್ಲ ನೀಡಲು ಸಾಧ್ಯವಿಲ್ಲ. ಹಾಗಾಗಿ, ಈ ಅವಧಿಗೆ ನೀಡಬಹುದಾದ ಸೇವೆಗಳನ್ನು ಭಕ್ತರಿಗೆ ಆನ್‌ಲೈನ್‌ ಮೂಲಕ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ವಿವರಿಸಿದರು.

ದರ್ಶನಕ್ಕೆ ಬರುತ್ತಿದ್ದಾರೆ ಭಕ್ತರು:ಈ ನಡುವೆ, ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿದ ನಂತರ ಬೆಟ್ಟ ಹಾಗೂ ಸುತ್ತುಮತ್ತಲಿನ ಗ್ರಾಮಸ್ಥರು ದೇವರ ದರ್ಶನಕ್ಕೆ ಬರುತ್ತಿದ್ದು, ಆವರಣಕ್ಕೆ ಪ್ರದಕ್ಷಿಣೆ ಹಾಕಲು ಯತ್ನಿಸುತ್ತಿದ್ದಾರೆ. ದೇವಾಲಯದ ಬಾಗಿಲು ತೆರೆದಿಲ್ಲ. ದರ್ಶನಕ್ಕೆ ಅವಕಾಶ ಇಲ್ಲ ಎಂದು ಕೇಳಿದರೂ ಜನರು ಕೇಳುತ್ತಿಲ್ಲ. ಇದಕ್ಕಾಗಿ ಪ್ರಾಧಿಕಾರವು ದೇವಸ್ಥಾನದ ಆವರಣದ 100 ಮೀಟರ್‌ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ಮುಚ್ಚಿದೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿದೆ.

‘ದೇವಸ್ಥಾನಕ್ಕೆ ಜನರು ಬರುವುದನ್ನು ತಡೆದು ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದುಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.