ADVERTISEMENT

ಮೊಮ್ಮಗಳ ಬೇಲಿಗೆ ಎಸೆದು ಕಾಡಾನೆಗೆ ಜೀವ ತೆತ್ತ ಅಜ್ಜಿ

ಆನೆಗೆ ಮಹಿಳೆ ಬಲಿ: ರೈತರು, ಸಂಬಂಧಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 17:31 IST
Last Updated 21 ಜುಲೈ 2019, 17:31 IST
ಗೌರಮ್ಮ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಬಂಧಿಕರು ಹಾಗೂ ರೈತರನ್ನು ಅರಣ್ಯ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರು
ಗೌರಮ್ಮ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಬಂಧಿಕರು ಹಾಗೂ ರೈತರನ್ನು ಅರಣ್ಯ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರು   

ಮಹದೇಶ್ವರ ಬೆಟ್ಟ: ತೋಕರೆ ಮತ್ತು ಕೊಂಬುಡಿಕ್ಕಿ ಗ್ರಾಮಗಳ ಮಧ್ಯದಲ್ಲಿ ಶನಿವಾರ ಆನೆ ನಡೆಸಿದ ದಾಳಿಯಲ್ಲಿ ಹಳೆ‌ಯೂರು ಗ್ರಾಮದ ನಿವಾಸಿ ಗೌರಮ್ಮ ಮೃತಪಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತರು ಹಾಗೂ ಮಹಿಳೆಯರ ಸಂಬಂಧಿಕರು ಭಾನುವಾರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿದರು.

ಮಹದೇಶ್ವರ ಬೆಟ್ಟದ ಸುತ್ತ ಮುತ್ತ ಇತ್ತೀಚೆಗೆ ಕಾಡಾನೆಗಳ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಗೌರಮ್ಮನ ಮೃತದೇಹವನ್ನು ಪಡೆಯಲು ನಿರಾಕರಿಸಿದರು.

ಸಮಾಜ ಸೇವಕ ಕೆ ವಿ ಮಾದೇಶ್ ಅವರು ಮಾತನಾಡಿ, ‘ಸುತ್ತ ಮುತ್ತಲ ಗ್ರಾಮದಲ್ಲಿ 5 ಪ್ರಕರಣಗಳು ಸಂಭವಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಶನಿವಾರದ ಘಟನೆಯಲ್ಲಿ ಗೌರಮ್ಮ ಅವರ ಹೆಣ್ಣು ಮಗು ದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದೆ. ಅರಣ್ಯ ಇಲಾಖೆ ತಕ್ಷಣ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್ ಅವರು,ಮೃತ ದೇಹದ ಅಂತ್ಯಕ್ರಿಯೆ ಬಳಿಕ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದನ್ನು ಒಪ್ಪದ ಪ್ರತಿಭಟನಾಕಾರರು. ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

ಆನಂತರ ಸ್ಥಳಕ್ಕೆ ಬಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್‌ ರೆಡ್ಡಿ ಅವರು, ‘ಅರಣ್ಯದೊಳಗೆ ಘಟನೆ ಸಂಭವಿಸಿರುವುದರಿಂದ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ನೀಡಲು ವ್ಯವಸ್ಥೆ ಮಾಡುತ್ತೇವೆ. ಈಗಾಗಲೇ ಘಟನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಜರುಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಆನಂತರ ಜನರು ಪ್ರತಿಭಟನೆಯನ್ನು ವಾಪಸ್‌ ಪಡೆದರು.ಮಹದೇಶ್ವರ ಬೆಟ್ಟದ ಎಎಸ್ಐ ಸೀಗನಾಯಕ, ಹೆಡ್‌ಕಾನ್‌ಸ್ಟೆಬಲ್‌ ನೀಲಕಂಠ, ಪೇದೆಗಳಾದ ಪರಶಿವ, ಶಶಿ, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

ಮೊಮ್ಮಗಳನ್ನು ಎಸೆದು ಪ್ರಾಣ ಉಳಿಸಿದರು...

ಆನೆ ನಡೆಸಿದ ದಾಳಿಯಲ್ಲಿ ಗೌರಮ್ಮ ಅವರ ನಾಲ್ಕು ವರ್ಷದ ಮೊಮ್ಮಗಳು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾಳೆ. ಆನೆ ದಾಳಿಯ ನಡೆಸುವ ಸಂದರ್ಭದಲ್ಲಿ ಗೌರಮ್ಮ ಅವರು ಮೊಮ್ಮಗಳನ್ನು ದೂರಕ್ಕೆ ಎಸೆದು, ಅವಳ ಜೀವವನ್ನು ಕಾಪಾಡಿ, ಪ್ರಾಣಕಳೆದುಕೊಂಡಿದ್ದಾರೆ.

ದೊಡ್ಡಾಣೆಗೆ ಮಾರಿ ಹಬ್ಬಕ್ಕೆ ಬಂದು, ವಾಪಸ್‌ ಮನೆಗೆ ಹೋಗುವಾಗ ಮಗಳ ಮಗಳು ತೇಜಸ್ವಿನಿಯನ್ನು ಗೌರಮ್ಮ ಎತ್ತಿಕೊಂಡಿದ್ದರು. ಆನೆ ದಾಳಿ ಮಾಡಲು ಮುಂದಾದ ತಕ್ಷಣ ಅವರು ತೇಜಸ್ವಿನಿಯನ್ನು ಸಮೀಪದಲ್ಲೇ ಇದ್ದ ಬೇಲಿಗೆ ಎಸೆದಿದ್ದಾರೆ. ಅವರು ಮೊಮ್ಮಗಳನ್ನು ಎಸೆದ ತಕ್ಷಣ, ಆನೆ ಅವರನ್ನು ತುಳಿದು ಸಾಯಿಸಿ ಹೋಗಿದೆ.

‘ಹಿಂದಿನಿಂದ ಬರುತ್ತಿದ್ದ ಸಂಬಂಧಿಕರು ನಂತರ ತೇಜಸ್ವಿನಿಯನ್ನು ಎತ್ತಿಕೊಂಡು ರಕ್ಷಿಸಿದರು. ಒಂದು ವೇಳೆ ಮಗುವನ್ನು ರಸ್ತೆಗೆ ಎಸೆದಿದ್ದರೆ, ಆನೆ ಮಗುವನ್ನೂ ತುಳಿದು ಸಾಯಿಸುತ್ತಿತ್ತು’ ಗೌರಮ್ಮ ಸಂಬಂಧಿ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.