ADVERTISEMENT

ಗುಂಡ್ಲುಪೇಟೆ: ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

ಮಳೆಯ ವಾತಾವರಣ: ಬಂಡೀಪುರ ಸಫಾರಿಗೂ ಹೆಚ್ಚಿದ ಬೇಡಿಕೆ

ಮಲ್ಲೇಶ ಎಂ.
Published 13 ಸೆಪ್ಟೆಂಬರ್ 2020, 19:30 IST
Last Updated 13 ಸೆಪ್ಟೆಂಬರ್ 2020, 19:30 IST
ಬಂಡೀಪುರ ಸಫಾರಿ ಕೌಂಟರ್‌ನಲ್ಲಿ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು
ಬಂಡೀಪುರ ಸಫಾರಿ ಕೌಂಟರ್‌ನಲ್ಲಿ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರು   

ಗುಂಡ್ಲುಪೇಟೆ: ಅನ್‌ಲಾಕ್‌ ಅವಧಿಯಲ್ಲಿ ಜನರ ಸಂಚಾರಕ್ಕೆ ಮುಕ್ತ ಅವಕಾಶ ನೀಡಿರುವುದರ ಬೆನ್ನಲ್ಲೇ, ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಬಂಡೀಪುರ ಸಫಾರಿಗೂ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ.

ತಾಲ್ಲೂಕಿನಾದ್ಯಂತ ಈಗ ಮಳೆಯಾಗುತ್ತಿರುವುದರಿಂದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಸುತ್ತಲಿನ ಸೌಂದರ್ಯ ದುಪ್ಪಟ್ಟಾಗಿದೆ. ಸುತ್ತಲೂ ಮಂಜು ಕವಿದ ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತಿದೆ. ಕೆಲವು ವಾರಗಳಿಂದೀಚೆಗೆ ಬೆಟ್ಟಕ್ಕೆ ಭೇಟಿ ನೀಡಿದವರು, ಇಲ್ಲಿನ ಹಸಿರಿನ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದರಿಂದ, ಬೆಟ್ಟದ ಮನಮೋಹಕ ವಾತಾವರಣವನ್ನು ಸವಿಯಲು ಬರುವವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ರಜಾ ದಿನವಾದ ಶನಿವಾರ ಮತ್ತು ಭಾನುವಾರ ದೇವಾಲಯಕ್ಕೆ ಭಕ್ತರ ಜೊತೆಗೆ ಪ್ರವಾಸಿಗರು ಕೂಡ ಬರುತ್ತಿದ್ದಾರೆ.

‘ಗೋಪಾಲಸ್ವಾಮಿ ದೇವಾಲಯವು ಸಮುದ್ರ ಮಟ್ಟದಿಂದ 4,800 ಅಡಿ ಎತ್ತರದಲ್ಲಿ ಇದೆ. ಮಳೆಗಾಲದಲ್ಲಿ ದೇವಸ್ಥಾನ ಸದಾ ಮಂಜಿನಿಂದ ಆವೃತವಾಗಿರುತ್ತದೆ. ಅಲ್ಲದೇ ದೇವಸ್ಥಾನ ಸುತ್ತಮುತ್ತಲಿನ ಜಾಗದಲ್ಲಿ ಆನೆ, ಜಿಂಕೆಗಳು ಕಾಣಸಿಗುತ್ತವೆ. ಕೆಲವು ವಾರಗಳಿಂದ ಈ ಭಾಗದಲ್ಲಿ ಹುಲಿಯೊಂದು ಕಾಣಿಸಿಕೊಳ್ಳುತ್ತಿದೆ. ಹಲವು ಪ್ರವಾಸಿಗರು ಅದನ್ನು ಕಂಡಿದ್ದಾರೆ. ಈ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆ ಜಾಸ್ತಿಯಾಗಿದೆ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಫಾರಿಗೆ ಜನ: ಇತ್ತ ಬಂಡೀಪುರದ ಸಫಾರಿಗೂ ಪ್ರವಾಸಿಗರು ಆರಂಭಿಸಿದ್ದಾರೆ. ಮೊದಲಿನಂತೆ ಅಲ್ಲದಿದ್ದರೂ ಸಫಾರಿ ಚೇತರಿಕೆ ಕಂಡಿದೆ, ಜಿಪ್ಸಿ ಮತ್ತು ವ್ಯಾನ್‌ಗಳು ಭರ್ತಿಯಾಗುತ್ತಿದೆ. ವಾರಾಂತ್ಯದಲ್ಲಿ ₹2 ಲಕ್ಷದಿಂದ ₹2.5 ಲಕ್ಷದವರೆಗೆ ಆದಾಯ ಬರುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಅವರು ಮಾಹಿತಿ ನೀಡಿದರು.

‘ಕೋವಿಡ್‌ ಹಾವಳಿಗೂ ಮೊದಲು ವಾರಾಂತ್ಯದಲ್ಲಿ ಸಫಾರಿಗೆ ತೆರಳಲು ಟಿಕೆಟ್ ಸಿಗುತ್ತಿರಲಿಲ್ಲ. ಪ್ರತಿ ದಿನ ₹4 ಲಕ್ಷದಿಂದ ₹5 ಲಕ್ಷದವರೆಗೆ ಆದಾಯ ಬರುತ್ತಿತ್ತು. ಅನ್‌ಲಾಕ್‌ ಆರಂಭವಾದ ಬಳಿಕ ಚೇತರಿಸಿಕೊಳ್ಳುತ್ತಿದೆ.ಸಫಾರಿಯಲ್ಲೂ ಪ್ರಾಣಿಗಳ ದರ್ಶನ ಆಗುತ್ತಿದೆ. ಆದರೆ, ಅತಿಥಿ ಗೃಹಗಳಲ್ಲಿ ವಾಸ್ತವ್ಯ ಹೂಡುವವರ ಸಂಖ್ಯೆ ಕಡಿಮೆ ಇದೆ’ ಎಂದು ತಿಳಿಸಿದರು.

ಕೆಲ ಐಷಾರಾಮಿ ಹೋಟೆಲ್, ರೆಸಾರ್ಟ್‌ಗಳು ಇನ್ನೂ ತೆರೆಯದ ಕಾರಣ ಸಫಾರಿಗೆ ಬರುವ ಪ್ರವಾಸಿಗರು ಕಡಿಮೆ ಆಗಿದ್ದಾರೆ ಎಂದು ಅವರು ಹೇಳೀದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.