
ಯಳಂದೂರು: ‘ಈ ಶಾಲೆಯ ಚಿಣ್ಣರು ಅಂಕಿ ಸಂಖ್ಯೆಗಳ ಜೊತೆಗೆ ಆಡುತ್ತಾರೆ, ಕಾಗದಗಳಲ್ಲಿ ತ್ರಿಕೋನ ಕೊರೆದು ಸಂಭ್ರಮಿಸುತ್ತಾರೆ. ಪ್ರಸಿದ್ಧ ಗಣಿತ ತಜ್ಞರ ಹೆಸರನ್ನು ಒಂದೇ ಉಸಿರಿಗೆ ಉಸುರುತ್ತ ಬಿಂದು, ವೃತ್ತ, ರೇಖೆ, ಡಿಗ್ರಿಗಳನ್ನು ಗುರುತಿಸುತ್ತಾರೆ.
–ಹೀಗೆ ಗಣಿತದ ನೂರೆಂಟು ಮಾಹಿತಿಗಳನ್ನು ಸರಳ ಮಾರ್ಗದಲ್ಲಿ ಕಲಿಯುವ ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ‘ಗಣಿತ ದಿನ’ದಂದು ಭಾರತೀಯ ಪ್ರಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜರನ್ನು ಸ್ಮರಿಸಲು ಸಿದ್ಧತೆ ನಡೆಸಿದ್ದಾರೆ.
ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗಣಿತ ಇನ್ನೂ ಕಬ್ಬಿಣದ ಕಡಲೆಯಾಗಿ ಉಳಿದಿದೆ. ಹಾಗಾಗಿ, ಔಪಚಾರಿಕ ತರಬೇತಿ ನೀಡದೆ ಅಂಕಿ-ಸಂಖ್ಯೆಗಳ ಪರಿಚಯ ಮಾಡಿಸಿ, ಶಾಲೆಯಲ್ಲಿ ಅಂಕಿ ಅಂಶಗಳನ್ನು ಬರೆಯುವಂತೆ ಕಲಿಸುವ ಸರಳ ಉಪಾಯಗಳಲ್ಲಿ ಶಿಕ್ಷಕರು ತರಬೇತಿ ಪಡೆದಿದ್ದಾರೆ. ನಲಿಕಲಿಯಿಂದ ಹತ್ತನೆ ತರಗತಿ ಮಕ್ಕಳು ಸಹ ಒಂದರಿಂದ ಶೂನ್ಯದತನಕ ಅಂಕೆಗಳ ಮಾದರಿಯನ್ನು ಹಿಡಿದು ನೋಡಿ, ಸ್ಪರ್ಶಿಸಿ ಕಲಿಸುವ ‘ಗಣಿತ ಕಿಟ್’ಗಳು ಮಕ್ಕಳಿಗೆ ವರವಾಗಿ ಪರಿಣಮಿಸಿದೆ.
ಔಪಚಾರಿಕ ತರಬೇತಿ ಪಡೆಯದ ರಾಮಾನುಜನ್ ಸ್ವಯಂ ಅಭ್ಯಾಸ ಮಾಡಿ ಗಣಿತ ಕಲಿತರು. ಇವರ ಸಂಖ್ಯೆ ಸಿದ್ದಾಂತ, ಅನಂತ ಸರಣಿ, ಗಣಿತ ವಿಶ್ಲೇಷಣೆಗಳು ಜಗತ್ತಿನ ಗಣಿತ ತಜ್ಞರಲ್ಲಿ ಅಚ್ಚರಿ ಮೂಡಿಸಿತ್ತು. 1729 ಸಂಖ್ಯೆಯ ಹಾರ್ಡಿ -ರಾಮಾನುಜನ್ ಸಂಖ್ಯೆ ಎಂದು ಪ್ರಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಅಂಕಿ ಸಂಖ್ಯೆಗಳ ಬಗ್ಗೆ ತಿಳಿಸಲಾಗುತ್ತದೆ. ಸಿಲಿಂಡರ್, ಕ್ಯೂಬ್, ಕೋನ್, ಆಯತಘನ ಚತುರ್ಭುಜ, ವರ್ಗ, ತ್ರಿಭುಜಗಳ ಮಾದರಿ ನೀಡಿ ಸುಲಭವಾಗಿ ಅರ್ಥೈಸಿಕೊಳ್ಳಲು ಮಾರ್ಗದರ್ಶನ ಮಾಡಲಾಗುತ್ತದೆ. ಕಂಪ್ಯೂಟರ್ ಮತ್ತು ಡಿಜಿಟಲ್ ಬೋರ್ಡ್ ಬಳಸಿಕೊಂಡು ಆಕರ್ಷಕವಾಗಿ ಕಲಿಯಲು ಪ್ರೇರೇಪಿಸಲಾಗುತ್ತದೆ ಎನ್ನುತ್ತಾರೆ ಗಣಿತ ಶಿಕ್ಷಕ ಅಮ್ಮನಪುರ ಮಹೇಶ್
ಇಂದು ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ವೀಕ್ಷಣೆ
‘ಇಂದಿನ ಪೀಳಿಗೆಯ ಮಕ್ಕಳಿಗೆ ರಾಮಾನುಜಮ್ ಅವರ ಸಾಧನೆಗಳನ್ನು ತಿಳಿಸಲು ಅವರ ಜೀವನದ ನಿಜ ಘಟನೆಗಳ ಆಧರಿಸಿ ನಿರ್ಮಿಸಿರುವ ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ಬಯೋಫಿಕ್ ಚಿತ್ರವನ್ನು ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳಗಿದೆ. ಚಿಕ್ಕ ವಯಸ್ಸಿನಲ್ಲಿ ಗಣಿತದ ಮೋಹಕ್ಕೆ ಬಿದ್ದ ರಾಮಾನುಜಮ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಆಹ್ವಾನಿಸಿ ಪುರಸ್ಕಾರ ನೀಡಿ ಗೌರವಿಸಿದೆ. ತಹ ಗಣಿತ ಸಾಧಕರ ಬಗ್ಗೆ ಮಕ್ಕಳಲ್ಲಿ ಹೆಮ್ಮೆ ಮೂಡಿಸಲು ಹತ್ತಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಆಯೋಜಿಸಬೇಕು’ ಎನ್ನುತ್ತಾರೆ ಗಣಿತ ಶಿಕ್ಷಕ ನಾಗೇಶ್ ಅಂಬಳೆ.
ಗಣಿತದ ಧ್ರುವತಾರೆ ‘ರಾಮಾನುಜನ್’
ಭಾರತದಲ್ಲಿ ಪ್ರತಿ ವರ್ಷ ಡಿ.22ರಂದು ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನದ ಅಂಗವಾಗಿ ‘ರಾಷ್ಟ್ರೀಯ ಗಣಿತ’ ದಿನ ಆಚರಿಸಲಾಗುತ್ತದೆ. ರಾಮಾನುಜನ್ ಅವರ ಕೊಡುಗೆಗಳನ್ನು ಗೌರವಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಒಲವು ಮೂಡಿಸಲು ದೇಶದಾದ್ಯಂತ ನೂರಾರು ಕಾರ್ಯಕ್ರಮ ಆಯೋಜಿಸಲಾಗುತ್ತದೆ. 2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮದ್ರಾಸ್ ವಿವಿಯಲ್ಲಿ ಮೊದಲ ಸಲ ರಾಷ್ಟ್ರೀಯ ವಿಜ್ಞಾನ ದಿನ ಘೋಷಿಸಿದರು. ಶಾಲೆ ಮತ್ತು ವಿವಿಗಳಲ್ಲಿ ಗಣಿತದ ಕುರಿತು ಉಪನ್ಯಾಸ ಕಾರ್ಯಾಗಾರ ಹಾಗೂ ಸ್ಪರ್ಧೆಗಳು ಆಯೋಜಿಸಿ ಸ್ವಯಂ ಅಭ್ಯಾಸದಿಂದ ಗಣಿತ ಕಲಿಕೆಗೆ ಉತ್ತೇಜನ ನೀಡುವುದು ಇದರ ಭಾಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.