ಯಳಂದೂರು (ಚಾಮರಾಜನಗರ ಜಿಲ್ಲೆ): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸುತ್ತಲಿನ ಪೋಡುಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ. ಪರಿಣಾಮ, ಭಾನುವಾರ ಅಲ್ಲಿನ ಜನರನ್ನು ಬೆಟ್ಟದ ಹಾಡಿಯೊಂದಕ್ಕೆ ಕರೆತಂದು ಸಮೀಕ್ಷೆ ನಡೆಸಲಾಗುತ್ತಿದೆ.
ಬನದ ಸುತ್ತಲಿನ ಹತ್ತಾರು ಹಾಡಿಗಳಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಎತ್ತರದ ಸ್ಥಳದಲ್ಲಿ ನೆಟ್‌ವರ್ಕ್ ಸಿಗುತ್ತದೆ. ದಟ್ಟ ಅರಣ್ಯದಲ್ಲಿ ಸಿಗ್ನಲ್ ಸಿಗುತ್ತಿಲ್ಲ. ಇದರಿಂದಾಗಿ ಸಮೀಕ್ಷೆ ಕುಂಟುತ್ತಿದೆ. ಆದ್ದರಿಂದ, ತಾಲ್ಲೂಕು ಆಡಳಿತ ಹಲವು ಇಲಾಖೆಗಳ ವಾಹನಗಳನ್ನು ಬಳಸಿಕೊಂಡು ಗುಣಮಟ್ಟದ ನೆಟ್‌ವರ್ಕ್ ಸಿಗುವ ಸ್ಥಳಕ್ಕೆ ಜನರನ್ನು ಕರೆತಂದು ಸಮೀಕ್ಷೆ ನಡೆಸುತ್ತಿದೆ.
‘ಪುರಾಣಿಪೋಡಿನಲ್ಲಿ 160 ಕುಟುಂಬಗಳ ಸಮೀಕ್ಷೆ ನಡೆಸಬೇಕಿದೆ. ನೆಟ್‌ವರ್ಕ್ ಸಮರ್ಪಕವಾಗಿಲ್ಲದ ಕಾರಣದಿಂದ, ಶೇ 50 ರಷ್ಟು ಪೂರ್ಣಗೊಂಡಿಲ್ಲ. ಆದ್ದರಿಂದ, ಜನರನ್ನು ನೆಟ್‌ವರ್ಕ್ ಸಿಗುವ ಎರಕನಗದ್ದೆ ಸಮೀಪಕ್ಕೆ ಕರೆಸಿ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಸಮೀಕ್ಷಕರು ತಿಳಿಸಿದರು.
‘ಅ.7ರೊಳಗೆ ಸಮೀಕ್ಷೆ ಮುಗಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ತಹಶೀಲ್ದಾರ್ ಎಸ್.ಎನ್.ನಯನಾ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.