ADVERTISEMENT

ಹೊಸ ವರ್ಷ: ಪ್ರವಾಸಿತಾಣಗಳು ಭರ್ತಿ

ಧಾರ್ಮಿಕ ಸ್ಥಳಗಳಿಗೆ ಭೇಟಿನೀಡುತ್ತಿರುವ ಭಕ್ತರು, ಪ್ರಕೃತಿಯ ಸೊಬಲು ಸವಿಯಲು ಹನೂರಿನತ್ತ ದಾಂಗುಡಿ

ಎಚ್.ಬಾಲಚಂದ್ರ
Published 31 ಡಿಸೆಂಬರ್ 2025, 5:50 IST
Last Updated 31 ಡಿಸೆಂಬರ್ 2025, 5:50 IST
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಾಣಿಸಿಕೊಂಡ ಕೆನ್ನಾಯಿಗಳ ಹಿಂಡು
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಾಣಿಸಿಕೊಂಡ ಕೆನ್ನಾಯಿಗಳ ಹಿಂಡು   

ಚಾಮರಾಜನಗರ: ಹೊಸ ವರ್ಷದ ಸಂಭ್ರಮ ಆಚರಿಸಲು ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳು, ಪ್ರಾಕೃತಿಕ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗುತ್ತಿದೆ.

ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನಕ್ಕೆ ಭೇಟಿನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ವರ್ಷದ ದಿನ ಮಾದಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಸುಖ–ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿರುವುದರಿಂದ ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಬರಲಿದ್ದಾರೆ ಎನ್ನುತ್ತಾರೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ. 

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಪ್ರಾಕೃತಿಕ ತಾಣಗಳನ್ನು ಹೊಂದಿರುವ ಗುಂಡ್ಲುಪೇಟೆ ತಾಲ್ಲೂಕಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ಈ ಬಾರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ಹೇರಲಾಗಿದ್ದರೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. 

ADVERTISEMENT

ಬಂಡೀಪುರದ ಬದಲು ಸಮೀಪದ ಮಧುಮಲೈ ಸಫಾರಿಗೆ ಗುಂಡ್ಲುಪೇಟೆ ಮಾರ್ಗವಾಗಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ತಮಿಳುನಾಡಿನ ಊಟಿ ಹಾಗೂ ಕೇರಳದ ವಯನಾಡ್‌ ಕಡೆಗೆ ಪ್ರವಾಸ ಹೋಗುವವರು ಕೂಡ ಗುಂಡ್ಲುಪೇಟೆ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತಿರುವುದರಿಂದ ದಟ್ಟಣೆ ಹೆಚ್ಚಾಗಿದೆ.

ಯಳಂದೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಿಳಿಗಿರಿ ರಂಗನಾಥ ಸ್ವಾಮಿ ದರ್ಶನಕ್ಕೂ ಪ್ರವಾಸಿಗರು ತೆರಳುತ್ತಿದ್ದಾರೆ. ಸದ್ಯ ಭಕ್ತರ ದಟ್ಟಣೆ ಸಾಮಾನ್ಯವಾಗಿದ್ದು, ಹೊಸ ವರ್ಷದ ದಿನ ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ದೇಗುಲದ ಸಿಬ್ಬಂದಿ.

ಹನೂರು ಸಫಾರಿಗೆ ದಾಂಗುಡಿ:

ಬಂಡೀಪುರ ಸಫಾರಿ ನಿರ್ಬಂಧವಾಗಿರುವುದರಿಂದ ‌ಪ್ರವಾಸಿಗರು ಹನೂರು ತಾಲ್ಲೂಕಿನತ್ತ ಮುಖ ಮಾಡಿದ್ದಾರೆ. ವರ್ಷಾಂತ್ಯದ ರಜೆಗಳನ್ನು ಕಳೆಯಲು ಮಲೆ ಮಹದೇಶ್ವರ ವನ್ಯದಾಮದಲ್ಲಿರುವ ಸಫಾರಿಗೆ ಪ್ರವಾಸಿಗರ ದಂಡು ಬರುತ್ತಿದೆ. ಕ್ರಿಸ್‌ಮಸ್‌ ಸಂದರ್ಭ ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಹೊಸ ವರ್ಷಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಹನೂರು ತಾಲ್ಲೂಕಿನ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಅರಣ್ಯ ಪ್ರದೇಶವೇ ಹೆಚ್ಚಾಗಿದ್ದು ಪ್ರಾಕೃತಿಕವಾಗಿ ಸುಂದರ ತಾಣಗಳು ಇರುವುದರಿಂದ ವನ್ಯಜೀವಿ ಸಂಪತ್ತು ಕಣ್ತುಂಬಿಕೊಳ್ಳಲು ಪ್ರವಾಸಿಗರು ಉತ್ಸಾಹ ತೋರುತ್ತಿದ್ದಾರೆ. ಜೊತೆಗೆ ಬಂಡೀಪುರದಲ್ಲಿ ಸಫಾರಿ ಬಂದ್ ಆಗಿರುವುದರಿಂದ ಪರ್ಯಾಯವಾಗಿ ಮಲೆ ಮಹದೇಶ್ವರ ವನ್ಯದಾಮದತ್ತ ಮುಖ ಮಾಡಿದ್ದಾರೆ. ನಾಲ್ಕೈದು ದಿನಗಳಿಂದ ಸಫಾರಿ ಕೇಂದ್ರಗಳು ತುಂಬಿವೆ.

ಗೋಪಿನಾಥಂ ನೇಚರ್ ಕ್ಯಾಂಪ್, ದಿ.ಪಿ.ಶ್ರೀನಿವಾಸ್ ಹೆಸರಿನಲ್ಲಿ ತೆರೆಯಲಾಗಿರುವ ಸಫಾರಿ ಕೇಂದ್ರ ಹಾಗೂ ದೋಣಿ ವಿಹಾರಕ್ಕೆ ಪ್ರಸಿದ್ಧಿ ಪಡೆದಿರುವ ಹೊಗೆನಕಲ್ ಜಲಪಾತ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅಜ್ಜೀಪುರ ಸಫಾರಿ ಕೇಂದ್ರದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸೇರಿ ದಿನಕ್ಕೆ ಎರಡು ಬಾರಿ ಸಫಾರಿ ನಡೆದರೆ, ಪಿ.ಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತಲಾ ಎರಡೆರಡು ಬಾರಿ ಸಫಾರಿ ನಡೆಯುತ್ತಿದೆ. ಶನಿವಾರ ಹಾಗೂ ಭಾನುವಾರ ದಟ್ಟಣೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಸಫಾರಿ ವೀಕ್ಷಣೆಗೆ ಏಕಕಾಲದಲ್ಲಿ 10 ಮಂದಿ ಕುಳಿತುಕೊಳ್ಳಬಹುದಾದ ಎರಡು ಜೀಪ್‌ಗಳ ವ್ಯವಸ್ಥೆ ಮಾಡಲಾಗಿದೆ. ಆನೆ, ಕಾಟಿ, ಜಿಂಕೆ, ಹುಲಿ, ಚಿರತೆ, ಕೆಂಪು ತಲೆ ರಣಹದ್ದುಗಳಂತ ಅಪರೂಪದ ಪ್ರಾಣಿಗಳು ಸಫಾರಿ ವೇಳೆ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ.

ಆಫ್ ಲೈನ್ ಬುಕ್ಕಿಂಗ್: ಮಲೆಮಹದೇಶ್ವರ ವನ್ಯಧಾಮದ ಸಫಾರಿ ಕೇಂದ್ರಗಳಲ್ಲಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲ. ಬಂದವರಿಗೆ ಸಪಾರಿ ಕೇಂದ್ರದಲ್ಲಿಯೇ ಟಿಕೆಟ್‌ ನೀಡಲಾಗುತ್ತದೆ ಎನ್ನುತ್ತಾರೆ ಹನೂರು ಬಫರ್ ವಲಯ ಅರಣ್ಯಾಧಿಕಾರಿ ಕೆ.ಎಂ.‌ನಾಗರಾಜು.

ಪೂರಕ ಮಾಹಿತಿ: ಬಸವರಾಜು ಬಿ, ಮಲ್ಲೇಶ 

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ದೇಗುಲಕ್ಕೆ ಬಂದಿದ್ದ ಭಕ್ತರು
ಮಲೆಮಹದೇಶ್ವರ ವನ್ಯಧಾಮದಲ್ಲಿ ಈಚೆಗೆ ಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಖುಷಿ ತಂದಿದೆ.
ಗಾಯತ್ರಿ ಕಾಮಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.