ADVERTISEMENT

ಗಣೇಶನ ಆಗಮನಕ್ಕೆ ವಿಘ್ನ: ಪ್ರತಿಮೆಗಳಿಗೆ ಇಲ್ಲ ಬೇಡಿಕೆ, ಕಲಾವಿದರಿಗೆ ನಷ್ಟದ ಭೀತಿ

ಗಣನಾಯಕನಿಗೂ ಕೋವಿಡ್‌ ಸಂಕಷ್ಟ

ನಾ.ಮಂಜುನಾಥ ಸ್ವಾಮಿ
Published 14 ಆಗಸ್ಟ್ 2020, 15:55 IST
Last Updated 14 ಆಗಸ್ಟ್ 2020, 15:55 IST
ಯಳಂದೂರು ಪಟ್ಟಣದ ಕುಂಬಾರ ಬೀದಿಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸುವ ಕಲಾವಿದ ಗುರು ಅವರು ಅರಿಸಿನ ಬಣ್ಣದ ಗೌರಿ ಮತ್ತು ತ್ರಿವರ್ಣ ಧ್ವಜದಲ್ಲಿನ ಬಣ್ಣಗಳನ್ನು ಗಣೇಶಮೂರ್ತಿಗೆ ಲೇಪಿಸಿ ಅಲಂಕರಿಸಿದ್ದಾರೆ
ಯಳಂದೂರು ಪಟ್ಟಣದ ಕುಂಬಾರ ಬೀದಿಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸುವ ಕಲಾವಿದ ಗುರು ಅವರು ಅರಿಸಿನ ಬಣ್ಣದ ಗೌರಿ ಮತ್ತು ತ್ರಿವರ್ಣ ಧ್ವಜದಲ್ಲಿನ ಬಣ್ಣಗಳನ್ನು ಗಣೇಶಮೂರ್ತಿಗೆ ಲೇಪಿಸಿ ಅಲಂಕರಿಸಿದ್ದಾರೆ   

ಯಳಂದೂರು: ಗೌರಿ–ಗಣೇಶನ ಹಬ್ಬ ಹತ್ತಿರದಲ್ಲೇ ಇದ್ದರೂ, ಈ ವರ್ಷ ಸಿದ್ಧತೆಗಳು ನಡೆಯುತ್ತಿಲ್ಲ. ಕೋವಿಡ್‌–19 ಕಾರಣದಿಂದ ಹಬ್ಬದ ಸಂಭ್ರಮ ಕಳೆಕಟ್ಟಿಲ್ಲ.

ಗಣಪನ ಪ್ರತಿಮೆಯ ಮಾರಾಟದಿಂದ ಆದಾಯ ಮಾಡಿಕೊಳ್ಳುವವ್ಯಾಪಾರಿಗಳಿಗೂ ಈ ಬಾರಿ ನಿರಾಸೆ ಆಗಿದೆ. ವಕ್ರತುಂಡನ ಆಕಾರಕ್ಕೆ ಮೆರಗುನೀಡುತ್ತಿದ್ದ ಕಲಾವಿದರು ಕೂಡ ಬೇಡಿಕೆ ಇಲ್ಲದೆ ಬಸವಳಿದಿದ್ದಾರೆ.

ಪ್ರತಿ ವರ್ಷ ತಾಲ್ಲೂಕಿನಲ್ಲಿ ಹಾಗೂ ಪಟ್ಟಣದಲ್ಲಿ ಪರಿಸರ ಸ್ನೇಹಿ ಗೌರಿ–ಗಣೇಶನ ನೂರಾರು ಮೂರ್ತಿಗಳುಮಾರಾಟಕ್ಕೆ ಬರುತ್ತಿದ್ದವು. ಬಗೆಬಗೆಯ ವೇಷ ತೊಟ್ಟ ವಿಘ್ನೇಶನಿಗೆ ಮುಂಗಡ ಹಣ ನೀಡಿಕಾಯುತ್ತಿದ್ದರು. ಸಂಭ್ರಮ–ಸಡಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮೆರವಣಿಗೆಯಲ್ಲಿಕೊಂಡೊಯ್ಯುತ್ತಿದ್ದರು. ಇಂತಹ ಹಬ್ಬದ ಉತ್ಸಾಹ ಮತ್ತು ಧಾವಂತ ಈಗ ಎಲ್ಲೂಕಾಣುತ್ತಿಲ್ಲ.

ADVERTISEMENT

ಈ ಬಾರಿ ಮಾರಾಟಗಾರರು ಗಣೇಶನನ್ನು ಅಂಗಡಿಯ ಮುಂದೆ ಇಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗಾಗಿ, ಹಲವು ತಿಂಗಳಿಂದ ಕಲಾವಿದರು ಕಷ್ಟಪಟ್ಟು ತಯಾರಿಸಿದಗಣೇಶನ ವಿಗ್ರಹಗಳನ್ನು ಕೇಳುವವರಿಲ್ಲ. ಇದರಿಂದ ಅವರು ನಷ್ಟದ ಭೀತಿಯಲ್ಲಿ ಇದ್ದಾರೆ.

‘ಸಾರ್ವಜನಿಕವಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಈ ವರ್ಷ ಜಿಲ್ಲಾಡಳಿತ ಅನುಮತಿ ನೀಡುತ್ತದೆಯೇ ಇಲ್ಲವೇ ಎಂಬ ಅನುಮಾನವೂ ಇದೆ’ ಎಂದು ಹೇಳುತ್ತಾರೆ ಪಟ್ಟಣದ ಸುರೇಶ್.

‘ಪಟ್ಟಣದ ಕುಂಬಾರ ಬೀದಿಯಲ್ಲಿ ಹಲವರು ತಾತನ ಕಾಲದಿಂದ ಗಜಾನನ ಮೂರ್ತಿಯನ್ನುತಯಾರಿಸುತ್ತಿದ್ದರು. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ತಮಿಳುನಾಡು ಮತ್ತಿತರಕಡೆ ಕೊಳ್ಳುತ್ತಿದ್ದರು. ಬೇಡಿಕೆ ಹೆಚ್ಚಾದರೆ, ಬೇರೆ ಜಿಲ್ಲೆಗಳಲ್ಲಿ ಸಂಬಂಧಿಕರುತಯಾರಿಸಿದ ಮೂರ್ತಿಗಳನ್ನು ಕೊಂಡು ಸಗಟು ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎನ್ನುತ್ತಾರೆ ಗುರು.

‘ಪ್ರತಿ ವರ್ಷ ಹಬ್ಬಕ್ಕೆ ಆರು ತಿಂಗಳು ಇರುವಾಗಲೇ ಗಣೇಶನ ತಯಾರಿ ನಡೆಯುತ್ತದೆ. ಪ್ರತಿವರ್ಷ ಲಕ್ಷಾಂತರ ವಹಿವಾಟು ಇರುತ್ತಿತ್ತು. ಮುಂಗಡ ಬುಕ್ಕಿಂಗ್‌ ಮಾಡಿಕೊಂಡುಬೇಡಿಕೆ–ನೀಡಿಕೆಗೆ ತಕ್ಕಂತೆ ವ್ಯವಹಾರ ಕುದುರುತ್ತಿತ್ತು. ಆದರೆ, ಈ ಬಾರಿ ಕೇಳುವವರೇಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇವರು.

‘ಮೂರರಿಂದ 10 ಅಡಿ ವಿನಾಯಕನಿಗೆ ಆಯಾ ವರ್ಷದ ಜನಪ್ರಿಯ ಹೆಸರುಗಳನ್ನು ಇಟ್ಟು ಮಾರಾಟಮಾಡಲಾಗುತ್ತಿತ್ತು. ಪ್ರಾಣಿ, ಪಕ್ಷಿಗಳ ಮೇಲೆ ಸುಮುಖನನ್ನು ಅಲಂಕರಿಸಿ ಭಕ್ತರನ್ನುಆಕರ್ಷಿಸಲಾಗುತ್ತಿತ್ತು. ಈ ಬಾರಿ, ಕೊರೊನಾ ಗಣಪ ಮತ್ತು ಕೋವಿಡ್‌ ನಿಗ್ರಹಿಸುವ ವಿಘ್ನವಿನಾಯಕನನ್ನು ಸೃಷ್ಟಿಸಲಾಗಿತ್ತು. ಪಟ್ಟಣ ಪಂಚಾಯಿತಿ ಮತ್ತು ಪೊಲೀಸರು ಏಕದಂತಮಾರಾಟಕ್ಕೆ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಸರ್ಕಾರ ಅನುಮತಿ ನೀಡಿದರೆಗಜವದನನ್ನು ನಂಬಿ ಹೂಡಿಕೆ ಮಾಡಿದ ಕಲಾವಿದರಿಗೆ ತುಸು ಆದಾಯ ಬರಬಹುದು’ ಎನ್ನುತ್ತಾರೆಕಲಾವಿದರು.

ವೈರಾಣು ಕಂಟಕ

‘ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿಸಲು ಮಾತ್ರ ಅನುಮತಿಸಿಗುತ್ತಿತ್ತು. ಜಲ ಮಾಲಿನ್ಯಕ್ಕೆ ಕಾರಣವಾಗುವ ಪಿಒಪಿ ಗಣೇಶನ ಮಾರಾಟಕ್ಕೆನಿಷೇಧವಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಅರಿಸಿನ ಮೂರ್ತಿಗಳ ತಯಾರಿಕೆಯತ್ತಚಿತ್ತ ಹರಿದಿದೆ. ಕಡಲೆಹಿಟ್ಟು, ಗೆಣಸಿನಪುಡಿ, ಬಿಳಿ ರಂಗೋಲಿ ಪುಡಿ ಬಳಸಿ ಪೇಪರ್‌ಗಣಪತಿ ತಯಾರಿಯತ್ತಲೂ ಚಿಂತನೆ ನಡೆಸಲಾಗಿದೆ. ಉಳಿದಂತೆ ಕಡಿಮೆ ಖರ್ಚು ಮತ್ತು ಮಾಲಿನ್ಯರಹಿತ ಮೂರ್ತಿಗಳನ್ನು ತಯಾರಿಗೆ ಮುಂದಾಗಿದ್ದರೂ, ಬೇಡಿಕೆ ಸಲ್ಲಿಸುವವರೇ ಇಲ್ಲ.ಇದನ್ನೇ ನಂಬಿಕೊಂಡು ಬದುಕು ರೂಪಿಸಿಕೊಳ್ಳುತ್ತಿದ್ದ ಗಣಪತಿ ಕಲಾವಿದರಿಗೆ ಈ ಬಾರಿಕೋವಿಡ್‌ ವೈರಾಣು ಕಂಟಕವಾಗಿ ಕಾಡಿದೆ’ ಎಂದು ಕುಂಬಾರ ಬೀದಿಯ ಮಂಜುನಾಥ್, ಮಹೇಶ್‌ ಮತ್ತುಆಶಾ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.