ADVERTISEMENT

ಗುಂಡ್ಲುಪೇಟೆ: ಸೋನೆ ಮಳೆ- ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆಗಾರ

300 ಹೆಕ್ಟೇರ್‌ನಲ್ಲಿ ಬಿತ್ತನೆ, 80 ಹೆಕ್ಟೇರ್‌ ಪ್ರದೇಶದಲ್ಲಿ ಕಟಾವಿಗೆ ಬಾಕಿ

ಮಲ್ಲೇಶ ಎಂ.
Published 24 ಜುಲೈ 2021, 19:30 IST
Last Updated 24 ಜುಲೈ 2021, 19:30 IST
ಮಳೆಗೆ ಸಿಲುಕಿದ ಸಾಂಬಾರ್‌ ಈರುಳ್ಳಿ
ಮಳೆಗೆ ಸಿಲುಕಿದ ಸಾಂಬಾರ್‌ ಈರುಳ್ಳಿ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಸೋನೆ ಮಳೆಯಿಂದಾಗಿ ಸಾಂಬಾರ್‌ (ಸಣ್ಣ) ಈರುಳ್ಳಿ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಾಗುತ್ತಿರುವುದರಿಂದ ಈರುಳ್ಳಿ ಕಟಾವಿಗೆ ತೊಂದರೆಯಾಗಿದೆ. ಕಟಾವು ಮಾಡಿದ ಈರುಳ್ಳಿಯನ್ನು ಬಿಡಿಸಿ ನಿರ್ವಹಣೆ ಮಾಡುವುದಕ್ಕೂ ಆಗುತ್ತಿಲ್ಲ.

ತಮಿಳುನಾಡಿನ ನೀಲಗಿರಿ ಮತ್ತು ಕೇರಳದ ವಯನಾಡು ಭಾಗಗಳಲ್ಲಿ ಸತತ ಮಳೆಯಾಗುತ್ತಿರುವ ಕಾರಣದಿಂದಾಗಿ ತಾಲ್ಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ದಿನ ಪೂರ್ತಿ ಮೋಡ ಕವಿದ ವಾತಾವರಣ ಇದ್ದು, ನಿರಂತರವಾಗಿ ತುಂತುರು ಮಳೆಯಾಗುತ್ತಲೇ ಇದೆ.ಇದರಿಂದಾಗಿ ಕಟಾವಿಗೆ ಬಂದಿರುವ ಈರುಳ್ಳಿಯನ್ನು ಕಟಾವು ಮಾಡದೆ ರೈತರು ಕಾಯುತ್ತಿದ್ದಾರೆ.

ADVERTISEMENT

ಮೂರು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಈರುಳ್ಳಿ ಈಗಾಗಲೇ ಕಟಾವಿಗೆ ಬಂದಿದೆ. 15 ದಿನಗಳಿಂದ ಸೋನೆ ಮಳೆ ಬಿಡುವು ನೀಡಿಲ್ಲ. ಎರಡು ವಾರಗಳ ಹಿಂದೆ ಕಟಾವು ಮಾಡಿದ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿತ್ತು. ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಕಟಾವಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ವಾತಾವರಣವೇ ಬದಲಾಗಿದೆ.

ಹಂಗಳ ಗ್ರಾಮದ ಸಿದ್ದಪ್ಪಾಜಿ ಎಂಬುವವರು ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಕಟಾವಿಗೆ ಬಂದಿದ್ದರಿಂದ ಮಂಗಳವಾರ ಮತ್ತು ಬುಧವಾರ ಕಟಾವು ಮಾಡಿ ಇಟ್ಟಿದ್ದರು.

‘ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಈರುಳ್ಳಿ ಎಲ್ಲವೂ ಕೊಚ್ಚಿ ಹೋಗಿದ್ದು, ₹6 ಲಕ್ಷದಷ್ಟು ನಷ್ಟವಾಗಿದೆ’ ಎಂದು ಸಿದ್ದಪ್ಪಾಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈರುಳ್ಳಿ ಬೆಳೆ ನಷ್ಟದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜು ಅವರು, ‘ಮುಂಗಾರು ಅವಧಿಯಲ್ಲಿ ತಾಲ್ಲೂಕಿನಲ್ಲಿ 300 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಈ ಪೈಕಿ ಬಹುತೇಕ ರೈತರು ಈಗಾಗಲೇ ಕಟಾವು ಮಾಡಿ ಮಾರಾಟ ಮಾಡಿದ್ದಾರೆ. 70ರಿಂದ 80 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಕಟಾವು ಬಾಕಿದ್ದು, ಈಗ ಮಳೆಗೆ ಸಿಲುಕಿದೆ’ ಎಂದರು.

ಆಲೂಗಡ್ಡೆ ಬಿತ್ತನೆಗೂ ತೊಂದರೆ

ಅನೇಕ ರೈತರು ಆಲೂಗಡ್ಡೆ ಬಿತ್ತನೆ ಮಾಡಲು ಭೂಮಿಯನ್ನು ಉಳುಮೆ ಮಾಡಿಕೊಂಡಿದ್ದರು. ಸತತವಾದ ಮಳೆಯಿಂದಾಗಿ ಬಿತ್ತನೆ ಮಾಡಲು ಅವಕಾಶ ಆಗಿಲ್ಲ. ಹಾಸನ ಜಿಲ್ಲೆಯ ಭಾಗದಿಂದ ಬಿತ್ತನೆ ಆಲೂಗಡ್ಡೆ ಅನೇಕ ಲೋಡುಗಳು ತಾಲ್ಲೂಕಿಗೆ ಬಂದಿವೆ.

‘ಮಳೆಯಿಂದಾಗಿ ನಷ್ಟ ಅನುಭವಿಸಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಮೇಲುಕಾಮನಹಳ್ಳಿ ಗ್ರಾಮದ ರೈತ ಎಂ.ನಾಗರಾಜು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.