ADVERTISEMENT

ರೈತ ಪ್ರಿಯ ಗ್ಲಿರಿಸಿಡಿಯಾಕ್ಕೆ ಬೇಡಿಕೆ; ಸಾರಜನಕ ಪೂರೈಸುವ ಸಂಜೀವಿನಿ ಗೊಬ್ಬರದ ಗಿಡ

ನಾ.ಮಂಜುನಾಥ ಸ್ವಾಮಿ
Published 17 ಜುಲೈ 2022, 19:30 IST
Last Updated 17 ಜುಲೈ 2022, 19:30 IST
ಯಳಂದೂರು ತಾಲ್ಲೂಕಿನ ಹೊಲಗದ್ದೆ, ಬೆಟ್ಟ ಗುಡ್ಡಗಳಲ್ಲಿ ಹೂ ಬಿಟ್ಟಿರುವ ಗ್ಲಿರಿಸಿಡಿಯಾ
ಯಳಂದೂರು ತಾಲ್ಲೂಕಿನ ಹೊಲಗದ್ದೆ, ಬೆಟ್ಟ ಗುಡ್ಡಗಳಲ್ಲಿ ಹೂ ಬಿಟ್ಟಿರುವ ಗ್ಲಿರಿಸಿಡಿಯಾ   

ಯಳಂದೂರು:ತಾಲ್ಲೂಕಿನಲ್ಲಿ ಹಸಿರು ಸೊಪ್ಪಿನ ಗೊಬ್ಬರಕ್ಕೆ ನಾಟಿ ಕಾಲಕ್ಕೆ ಬೇಡಿಕೆ ಹೆಚ್ಚು. ಎಕ್ಕ, ಬೇವು, ಕಳೆ ಗಿಡಗಳನ್ನು ಮಣ್ಣಿನಲ್ಲಿ ಕೊಳೆಸಲು ಸಂಗ್ರಹಿಸುತ್ತಾರೆ. ಇವುಗಳ ಮಹತ್ವವನ್ನು ಮನಗಂಡ ಪ್ರಗತಿಪರ ರೈತರು ಮಣ್ಣಿಗೆ ಹಸಿರುಗೊಬ್ಬರ ಪೂರೈಸುವ ನಿಟ್ಟಿನಲ್ಲೂ ಇತ್ತೀಚಿಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ, ಗೊಬ್ಬರದ ಗಿಡವೆಂದು ಮನ್ನಣೆ ಪಡೆದ ಗ್ಲಿರಿಸಿಡಿಯಾ ಸಸಿಯನ್ನು ಜಮೀನಿನ ಸುತ್ತಲೂ ನೆಡುವ ಮೂಲಕ ಮಣ್ಣಿನ ಸಾರ ವರ್ಧಿಸುವತ್ತ ಚಿತ್ತ ಹರಿಸಿದ್ದಾರೆ.

ಬಾಳೆ, ತೆಂಗು ಹಾಗೂ ಅಡಿಕೆ ತೋಟಗಳಲ್ಲಿ ಉದ್ದು, ಹೆಸರು, ಹುರುಳಿ ಬಿತ್ತನೆ ಮಾಡುತ್ತಾರೆ. 40 ದಿನಗಳ ನಂತರ ಸಮೃದ್ಧವಾಗಿ ಹೆಣೆದುಕೊಂಡ ಫಸಲನ್ನು ಮಣ್ಣಿಗೆ ಸೇರಿಸುತ್ತಾರೆ. ಇದರಿಂದ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿ, ಮೂಲ ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುತ್ತಿದ್ದು, ಹೆಚ್ಚಿನ ಸಾರಜನಕ ಪೂರೈಕೆಗೆ ಗ್ಲಿರಿಸಿಡಿಯಾ ಸೊಪ್ಪನ್ನು ಭೂಮಿಗೆ ಸೇರಿಸುವ ಪದ್ಧತಿ ವ್ಯಾಪಕ ಆಗುತ್ತಿದೆ.

‘ಗ್ಲಿರಿಸಿಡಿಯಾ ಅಪಾರ ಸಾರಜನಕ, ರಂಜಕ, ಪೊಟ್ಯಾಷ್ ಸಸ್ಯ ಪೋಷಕಾಂಶ ಒಳಗೊಂಡ ಸಸ್ಯ. ಇದರ ಹಸಿರು ಸೊಪ್ಪನ್ನು ಹಸಿಯಾಗಿಯೇ ಮಣ್ಣಿಗೆ ಸೇರಿಸಬೇಕು. ಸುಲಭವಾಗಿ ನೆಲದಲ್ಲಿ ಸಾರಜನಕ ಸ್ಥೀರಿಕರಣದ ಪೂರೈಕೆ ಆಗುತ್ತದೆ. ಆಡು ಕುರಿಗಳು ಸೊಪ್ಪನ್ನು ಮೆಲ್ಲುತ್ತವೆ. ಜಾನುವಾರುಗಳು ಮಾತ್ರ ಕಟು ವಾಸನೆ ಕಾರಣ ಸೊಪ್ಪನ್ನು ತಿನ್ನಲು ನಿರಾಕರಿಸುತ್ತವೆ. ಆದರೆ, ಬಾಡಿಸಿದರೆ ಸೇವಿಸುತ್ತವೆ. ಹಾಲು ಕರೆಯುವ ರಾಸುಗಳಿಗೆಇತರ ಮೇವಿನ ಜೊತೆ ಇದರ ಸೊಪ್ಪನ್ನೂ ನೀಡುತ್ತಾರೆ’ ಎಂದು ಸಾವಯವ ಬೇಸಾಯಗಾರ ಹೊನ್ನೂರು ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಗ್ಲಿರಿಸಿಡಿಯಾ ಕಾಂಡವನ್ನು ಕತ್ತರಿಸಿಯೂ ಸಸ್ಯಾಭಿವೃದ್ಧಿ ಮಾಡಬಹುದು. ಹೊಲದ ಬದಿಗಳ ರಕ್ಷಣೆಗಾಗಿ ಬೆಳೆಸಬಹುದು. ಒಮ್ಮೆ ಚಿಗುರಿದರೆ 15 ರಿಂದ 20 ವರ್ಷಕಾಲ ಇದರ ಎಲೆಗಳನ್ನು ಗೊಬ್ಬರಕ್ಕೆ ಪರ್ಯಾಯವಾಗಿ ಬಳಸಬಹುದು. ವರ್ಷಕ್ಕೆ 2 ಬಾರಿ ಕತ್ತರಿಸಬೇಕು. ಇಲ್ಲದಿದ್ದರೆ ಗಿಡ ಮರವಾಗುತ್ತದೆ. ಹಾಗಾಗಿ, ಚಿಗುರು ತೆಗೆದು ಮಣ್ಣಿಗೆ ಸೇರಿಸುತ್ತ ಹೋದಷ್ಟು ಮಣ್ಣಿನ ಫಲವತತ್ತತೆ ವೃದ್ಧಿಸುತ್ತದೆ. ರಸಾಯನಿಕ ಗೊಬ್ಬರದ ಮೇಲಿನ ಅನಗತ್ಯ ಖರ್ಚನ್ನು ತಗ್ಗಿಸುತ್ತದೆ’ ಎನ್ನುತ್ತಾರೆ ಗೌಡಹಳ್ಳಿ ಮಹೇಶ್.

ಖರ್ಚಿಲ್ಲದೇ ಗೊಬ್ಬರ ಪೂರೈಕೆ!
ತಾಲ್ಲೂಕಿನ ಸಾವಯವ ಕೃಷಿಕರು ಈಚೆಗೆ ಕಳೆ ಗಿಡಗಳನ್ನು ಕೂಡ ಹಸಿರೆಲೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಹಸಿರು ಗೊಬ್ಬರ ಪೂರೈಸಲು ಸಸ್ಪೇನಿಯಾ, ಡಯಾಂಚ, ಸೆಣಬು, ಕೊಳಂಜಿ, ಹೊಂಗೆ, ಎಕ್ಕೆ, ಲಂಟಾನ, ಅಲಸಂದಿ, ಹುರುಳಿ, ಉದ್ದು ಹಾಗೂ ಹೆಸರು ಸಸ್ಯವನ್ನು ಬೆಳೆಸಿ ಮಣ್ಣಿಗೆ ಸೇರಿಸಿ, ಮಣ್ಣಿನ ಆರೋಗ್ಯ ವರ್ಧಿಸುತ್ತಿದ್ದಾರೆ. ಇದು ಮೂಲ ಬೆಳೆಯ ಇಳುವರಿ ಹೆಚ್ಚಿಸುತ್ತದೆ.

'ಗೊಬ್ಬರದ ಗಿಡಗಳು ಬಿಸಿಲುಂಡು ವಾತಾವರಣದ ಗಾಳಿಯಲ್ಲಿನ ಅಪಾರ ಸಾರಜನಕವನ್ನು ಹಸಿರು ಎಲೆಗಳಿಗೆ ಪೂರೈಸುವ ಶಕ್ತಿ ಹೊಂದಿವೆ. ಪ್ರತಿ 100 ಗ್ರಾಂ ಗ್ಲಿರಿಸಿಡಿಯಾದಲ್ಲಿ ಸಾರಜನಕ 0.68, ರಂಜಕ 0.13, ಪೊಟ್ಯಾಷ್ 0.30 ಪೋಷಕಾಂಶ ಇದೆ' ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.