ADVERTISEMENT

ಯಳಂದೂರು: ಪ್ರಾಣಾಪಾಯಕ್ಕೆ ಇಂಬು ನೀಡುತ್ತಿರುವ ಡಬಲ್ ಟ್ರಾಲಿ ಟ್ರ್ಯಾಕ್ಟರ್ ಸಂಚಾರ!

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:07 IST
Last Updated 18 ಆಗಸ್ಟ್ 2025, 2:07 IST
ಡಬಲ್ ಟ್ರ್ಯಾಲಿಯಲ್ಲಿ ಕಬ್ಬು ಸಾಗಣೆ ಮಾಡುವ ಟ್ರ್ಯಾಕ್ಟರ್ ಎಂಜಿನ್ ಭಾರ ಎಳೆಯಲಾಗದೆ ರಸ್ತೆಗೆ ಅಡ್ಡಲಾಗಿ ನಿಂತಿರುವುದು
ಡಬಲ್ ಟ್ರ್ಯಾಲಿಯಲ್ಲಿ ಕಬ್ಬು ಸಾಗಣೆ ಮಾಡುವ ಟ್ರ್ಯಾಕ್ಟರ್ ಎಂಜಿನ್ ಭಾರ ಎಳೆಯಲಾಗದೆ ರಸ್ತೆಗೆ ಅಡ್ಡಲಾಗಿ ನಿಂತಿರುವುದು   

ಯಳಂದೂರು: ಗ್ರಾಮೀಣ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಗಧಿಗಿಂತ ಹೆಚ್ಚು ತೂಕ ಹೊತ್ತು ಸಂಚರಿಸುವ ವಾಹನಗಳಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಹಾದುಹೋಗಿರುವ ಹೆದ್ದಾರಿಗಳಲ್ಲಿ ಕಬ್ಬು ಸಾಗಣೆ ಮಾಡುವ ವಾಹನಗಳು ನಿಯಮ ಮೀರಿ ನಿಗಧಿಗಿಂತ ಹೆಚ್ಚು ತೂಕದ ಕಬ್ಬನ್ನು ಡಬಲ್ ಟ್ರಾಲಿಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು ದಟ್ಟಣೆಯ ಜೊತೆಗೆ ಎದುರಿಗೆ ಬರುವ ವಾಹನಗಳಿಗೆ ಕಂಟಕವಾಗಿ ಪರಿಣಮಿಸಿದೆ.

ನಿಯಮ ಉಲ್ಲಂಘನೆಯ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಚಾಲಕರನ್ನು ಪ್ರಶ್ನಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ತಾಲ್ಲೂಕು ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ಕಬ್ಬು ಕಟಾವು ಭರದಿಂದ ಸಾಗಿದ್ದು ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತಿದೆ. ಕಬ್ಬನ್ನು ತುಂಬಿಕೊಂಡು ಸಾಗುವ ವಾಹನಗಳು ಅತಿಯಾದ ಪ್ರಮಾಣದ ಕಬ್ಬು ತುಂಬಿಕೊಂಡು ಓಲಾಡುತ್ತಾ ಹೋಗುತ್ತಿದ್ದು ಎದುರಿಗೆ ಹಾಗೂ ಹಿಂಬದಿಯಲ್ಲಿ ಬರುವ ವಾಹನಗಳ ಸವಾರರ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ADVERTISEMENT

ಆ.5ರ ತಡರಾತ್ರಿ ಯರಿಯೂರು-ಮದ್ದೂರು ನಡುವೆ ದಾರಿಯ ಬದಿ ನಿಲ್ಲಿಸಿದ್ದ ಡಬಲ್ ಟ್ರಾಲಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದರು. ಅತಿಯಾದ ಕಬ್ಬು ತುಂಬಿಸಿ ಸಾಗುಣೆ ಮಾಡುವಾಗ ಮುಖ್ಯ ರಸ್ತೆ ಸೇರುವ ಮಾರ್ಗದಲ್ಲಿ ಟ್ರ್ಯಾಕ್ಟರ್ ಲೋಡ್ ಎಳೆಯದಿದ್ದಾಗ ಎಂಜಿನ್ ಮೇಲೆದ್ದು ಸಮಸ್ಯೆಗೆ ಕಾರಣವಾಗುತ್ತಿದೆ. ಹಲವು ಬಾರಿ ಟ್ರ್ಯಾಲಿ ಅಥವಾ ಎಂಜಿನ್ ಕಳಚುವ ತೆಗೆಯುವ ತನಕ ವಾಹನಗಳು ರಸ್ತೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಬಸ್ ಚಾಲಕ ನಂಜುಂಡಸ್ವಾಮಿ.

ಹತ್ತಾರು ಕಿ.ಮೀ. ಮಾರ್ಗದಲ್ಲಿ ಟ್ರ್ಯಾಕ್ಟರ್ ಡಬಲ್ ಲೋಡ್‌ಗಳನ್ನು ಹೊತ್ತು ಸಾಗುತ್ತವೆ. ಏಕ ಕಾಲದಲ್ಲಿ 20 ಟನ್ ಸಾಮರ್ಥ್ಯದ ಕಬ್ಬನ್ನು ಡಬಲ್ ಟ್ರ್ಯಾಲಿಗಳಲ್ಲಿ ತುಂಬಿಸಲಾಗುತ್ತದೆ ಎಂದು ಹೇಳುತ್ತಾರೆ ಕಾರ್ಮಿಕರು.

ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಬಳಸಿ 6 ಟನ್ ಕಬ್ಬು ಸಾಗಣೆ ಮಾಡಬಹುದು. 6 ಚಕ್ರದ ಲಾರಿಗಳಲ್ಲಿ ನಿಯಮದ ಪ್ರಕಾರ 12.50 ಟನ್ ತುಂಬಲು ಅವಕಾಶ ಇದೆ. ಆದರೆ, ಸಾಗಣೆ ಮಾಡುವ ಮಿತಿಯನ್ನು ಉಲ್ಲಂಘಿಸಿ ಕಾರ್ಖಾನೆಗಳಿಗೆ ಹೆಚ್ಚುವರಿ ಕಬ್ಬು ತುಂಬಿಸಿ ಸಾಗಿಲಾಗುತ್ತದೆ. ಅತಿಯಾದ ಭಾರಕ್ಕೆ ರಸ್ತೆಗಳು ಗುಂಡಿ ಬೀಳುತ್ತಿವೆ, ಮನುಷ್ಯರ ಹಾಗೂ ಜಾನುವಾರು ಪ್ರಾಣಹಾನಿಗೂ  ಕಾರಣವಾಗುತ್ತದೆ.

ಪಟ್ಟಣ ಮತ್ತು ಪ್ರಮುಖ ರಸ್ತೆಯಲ್ಲಿ ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಆಟೋ ಮತ್ತು ಬೈಕ್‌ಗಳ ಮೂಲಕ ಶಾಲೆ ಹಾಗೂ ಮನೆ ತಲುಪುತ್ತಾರೆ. ಈ ವೇಳೆ ಸವಾರರು ಡಬಲ್ ಟ್ರ್ಯಾಲಿ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಅಪಘಾತ ಮಾಡಿಕೊಳ್ಳುತ್ತಿರುವ ಘಟನೆಗಳು ನಡೆದಿವೆ ಎನ್ನುತ್ತಾರೆ ಬೈಕ್ ಸವಾರ ವೈ.ಕೆ.ಮೋಳೆ ನಾಗರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.