ADVERTISEMENT

ಲಾಕ್‌ಡೌನ್‌: ದೂರದ ಊರಿನಿಂದ ಮರಳಿ ತವರಿಗೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 12:49 IST
Last Updated 27 ಏಪ್ರಿಲ್ 2021, 12:49 IST
ಕೊಳ್ಳೇಗಾಲದ ದಿನಸಿ ಅಂಗಡಿಯೊಂದರ ಮುಂದೆ ಮಂಗಳವಾರ ನಿಂತಿದ್ದ ಗ್ರಾಹಕರು
ಕೊಳ್ಳೇಗಾಲದ ದಿನಸಿ ಅಂಗಡಿಯೊಂದರ ಮುಂದೆ ಮಂಗಳವಾರ ನಿಂತಿದ್ದ ಗ್ರಾಹಕರು   

ಕೊಳ್ಳೇಗಾಲ: ಕೋವಿಡ್‌ 2ನೇ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ 14 ದಿನಗಳ ಕಾಲ ಲಾಕ್ ಡೌನ್ ಮಾಡಿರುವುದರಿಂದ ಬೆಂಗಳೂರು ಸೇರಿದಂತೆ ದೂರದ ನಗರ ಪಟ್ಟಣ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ತೆರಳಿದ್ದ ಬಹುತೇಕರು ಮಂಗಳವಾರ ಊರಿಗೆ ವಾಪಸ್‌ ಆಗಿದ್ದಾರೆ.

ಇದರಿಂದಾಗಿ ನಗರದಲ್ಲಿ ಜನ ಸಂದಣಿ ಸ್ವಲ್ಪ ಹೆಚ್ಚು ಕಂಡು ಬಂತು. ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯಾದ್ಯಂತ ಕೂಲಿ ಕಾರ್ಮಿಕರು, ಯುವಕರು ಕೆಲಸಕ್ಕಾಗಿ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಕೋಲಾರ, ಕೂಡಗು, ಸೇರಿದಂತೆ ಹೊರಗಿನ ಜಿಲ್ಲೆಗಳಿಗೆ ಹೋಗುತ್ತಾರೆ.

14 ಲಾಕ್‌ಡೌನ್‌ ಅವಧಿಯಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗುವುದರಿಂದ ಜನರು ಮತ್ತೆ ತಮ್ಮ ಊರುಗಳಿಗೆ ಮರಳಿದ್ದಾರೆ.

ADVERTISEMENT

ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ನಗರಕ್ಕೆ ಬಂದಿಳಿದ ಕೂಲಿ ಕಾರ್ಮಿಕರ ಕುಟುಂಬಗಳು, ತಮ್ಮ ಸರಕುಗಳೊಂದಿಗೆ ಹಳ್ಳಿಗಳಿಗೆ ತೆರಳಿದರು.

ಊರಿಗೆ ಹೊರಟಿದ್ದವರು ಬಸ್‌ಗಳಿಗಾಗಿನಗರದ ತಾತ್ಕಾಲಿಕ ಬಸ್ ನಿಲ್ದಾಣ, ಎಡಿಬಿ ವೃತ್ತದ ಬಳಿ ಹಾಗೂ ಹೂಸ ಬಸ್ ನಿಲ್ದಾಣದ ಬಳಿ ಕಾಯುತ್ತ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಾರೆ ಕೆಲಸ, ಸೆಕ್ಯೂರಿಟಿ ಗಾರ್ಡ್, ಸಿನಿಮಾ ಚಿತ್ರೀಕರಣದ ಕೆಲಸ, ಪೇಂಟಿಂಗ್‌ ಕೆಲಸ, ಚಾಲಕ ವೃತ್ತಿ ಸೇರಿದಂತೆ ದೊಡ್ಡ ದೊಡ್ಡ ಕಂಪನಿಯ ಗಾರ್ಮೆಂಟ್ ಕೆಲಸಕ್ಕೆ ಹೋಗಿ ಬಂದವರೇ ಹೆಚ್ಚಾಗಿದ್ದಾರೆ.

‘ಬೆಂಗಳೂರು ಬದುಕುವುದಕ್ಕೆ ಯೋಗ್ಯ ಎನ್ನುವುದು ನಿಜ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಯುವುದೂ ಖಂಡಿತ. ಬೆಂಗಳೂರು ಬೇಡವೇ ಬೇಡ ಎಂದು ಮನಸ್ಸಿಗೆ ಬಂದಿದೆ. ಇನ್ನೂ ಯಾವ ಕಾರಣಕ್ಕೂ ಬೆಂಗಳೂರಿನ ಕಡೆ ಮುಖವನ್ನೂ ಮಾಡುವುದಿಲ್ಲ. ಊರಿನಲ್ಲಿ ವ್ಯವಸಾಯ ಅಥವಾ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇವೆ’ ಎಂದು ಸಿನಿಮಾ ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್ ಪರಿಕ್ಷೆಗೆ ಮುಂದಾದರು: ಬೆಂಗಳೂರು ಹಾಗೂ ರಾಜ್ಯದ ನಾನಾ ಕಡೆಯಿಂದ ಬಂದ ಕೆಲವರು ಗ್ರಾಮಕ್ಕೆ ಹೋಗದೆ, ಮೊದಲು ಕೋವಿಡ್ ಪರೀಕ್ಷೆಗೆ ಮುಂದಾದರು.

‘ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಯನ್ನು ಕೊಟ್ಟಿದ್ದೇನೆ. ಪರೀಕ್ಷಾ ವರದಿ ಬರುವವರೆಗೂ ನಾವು ಗ್ರಾಮದ ಹೊರವಲಯದಲ್ಲಿ ಇರುತ್ತೇವೆ. ನಂತರವಷ್ಟೇ ಮನೆಗೆ ತೆರಳುತ್ತೇವೆ’ ಎಂದು ಮಧುವನಹಳ್ಳಿ ಗ್ರಾಮದ ಬಾಬು ಹೇಳಿದರು.

ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ: ಲಾಕ್ ಡೌನ್ ಬೆನ್ನಲ್ಲೇ ಸಾರ್ವಜನಿಕರು ಕಿರಾಣಿ ಅಂಗಡಿ, ಬೇಕರಿ, ಹಣ್ಣಿನ ಅಂಗಡಿ, ಬಟ್ಟೆ ಅಂಗಡಿ, ಹಾರ್ಡ್‍ವೇರ್, ಎಲೆಕ್ಟ್ರಾನಿಕ್ಸ್, ಮದ್ಯದ ಅಂಗಡಿ, ಸೂಪರ್ ಮಾರುಕಟ್ಟೆ ಮುಂದೆ ಮುಗಿಬಿದ್ದರು. ಈ ನಡುವೆ, ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದರು.

‘ಸುರಕ್ಷಿತ ಅಂತರವನ್ನು ಯಾರೂ ಕಾಪಾಡಿಕೊಳ್ಳುತ್ತಿಲ್ಲ. ಮಾಸ್ಕ್‌ ಕೂಡ ಸರಿಯಾಗಿ ಹಾಕುತ್ತಿಲ್ಲ. ಯಾವ ಅಧಿಕಾರಿಗಳೂ ಇತ್ತ ಗಮನಹರಿಸಲಿಲ್ಲ. ಹೀಗಾದರೆ ಹೇಗೆ ಕೋವಿಡ್ ನಿರ್ಮೂಲನೆ ಆಗುತ್ತದೆ’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಭಾನುಮತಿ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.