ADVERTISEMENT

ಉಮ್ಮತ್ತೂರು ಕೆರೆಗೆ ನೀರು: ರೈತರ ಪ್ರತಿಭಟನೆ, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ

ಆಗ್ರಹಕ್ಕೆ ಮಣಿದ ಅಧಿಕಾರಿಗಳು, ಏಪ್ರಿಲ್‌ ಒಳಗೆ ಕಾಮಗಾರಿ ಮುಕ್ತಾಯಗೊಳಿಸುವ ಲಿಖಿತ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 15:01 IST
Last Updated 15 ಫೆಬ್ರುವರಿ 2021, 15:01 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಪ್ರತಿಭಟನನಿರತರ ಅಹವಾಲು ಆಲಿಸಿದರು‌
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಪ್ರತಿಭಟನನಿರತರ ಅಹವಾಲು ಆಲಿಸಿದರು‌   

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರಿನ ದೊಡ್ಡಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಉಮ್ಮತ್ತೂರು ದೊಡ್ಡಕೆರೆ ಪುನಶ್ಚೇತನಾ ಸಮಿತಿ ಆಶ್ರಯದಲ್ಲಿ ಗ್ರಾಮಸ್ಥರು ಹಾಗೂ ರೈತ ಸಂಘಗಳ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಭವನಕ್ಕೆ ಮುತ್ತಿಗೆಯನ್ನೂ ಹಾಕಿದರು.

ಪ್ರತಿಭಟನೆಗೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಏಪ್ರಿಲ್‌ ತಿಂಗಳ ಅಂತ್ಯಕ್ಕೆ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಲಿಖಿತವಾಗಿ ನೀಡಿದರು. ಆ ಬಳಿಕವಷ್ಟೇ ರೈತರು ಪ್ರತಿಭಟನೆ ವಾಪಸ್‌ ತೆಗೆದುಕೊಂಡರು.

ಪೊಲೀಸರ ವಿರುದ್ಧ ಆಕ್ರೋಶ: ಉಮ್ಮತ್ತೂರಿನಿಂದ ಸಂತೇಮರಹಳ್ಳಿ ಮಾರ್ಗವಾಗಿ ಪ್ರತಿಭಟನಕಾರರು ಚಾಮರಾಜನಗರಕ್ಕೆ ಬೈಕ್‌ ರ‍್ಯಾಲಿ ಹೊರಟರು. ಮಧ್ಯಾಹ್ನದ ಊಟವನ್ನು ಸಿದ್ಧಪಡಿಸಿ, ಟ್ರ್ಯಾಕ್ಟರ್‌ ಮೂಲಕ ತರುತ್ತಿದ್ದರು. ಸಂತೇಮರಹಳ್ಳಿಯ ಬಳಿ ರ‍್ಯಾಲಿಯನ್ನು ತಡೆದ ಪೊಲೀಸರು ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಲು ಅವಕಾಶ ನಿರಾಕರಿಸಿದರು. ಇದನ್ನು ಖಂಡಿಸಿ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿ ತಡೆದರು. ಇದರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡಚಣೆಯಾಯಿತು.

ADVERTISEMENT

ಅಲ್ಲಿನ ಪೊಲೀಸರು ರೈತರನ್ನು ಮನವೊಲಿಸಿ, ನಗರಕ್ಕೆ ಕಳುಹಿಸಿದರು. ಚಾಮರಾಜೇಶ್ವರ ದೇವಾಲಯದಿಂದ ಪ್ರತಿಭಟನಕಾರರು ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದು ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರವೇಶದ್ವಾರದ ಬಾಗಿಲು ಮುಚ್ಚಿದ ಪೊಲೀಸರು, ಪ್ರತಿಭಟನಕಾರರು ಒಳಕ್ಕೆ ಹೋಗುವುದನ್ನು ತಡೆದರು.

ನಂತರ ಜಿಲ್ಲಾಡಳಿತ ಮುಂಭಾಗದಲ್ಲಿ ಧರಣಿ ಕುಳಿತು, ಸರ್ಕಾರ, ಜಿಲ್ಲಾಡಳಿತ, ಶಾಸಕರು ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಟ್ರ್ಯಾಕ್ಟರ್‌ ತಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಅದರಲ್ಲಿದ್ದ ಮಧ್ಯಾಹ್ನದ ಊಟ ತರಿಸುವಂತೆ ಪಟ್ಟು ಹಿಡಿದರು. ಪೊಲೀಸರು ಬೇರೊಂದು ವಾಹನದಲ್ಲಿ ತರಿಸಿದರು. ತಡೆದ ಟ್ರ್ಯಾಕ್ಟರ್‌ ಅನ್ನು ತರುವಂತೆ ಆಗ್ರಹಿಸಿದ ರೈತರು ಏಕಾಏಕಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಪೊಲೀಸರು ಅಲ್ಲಲ್ಲಿ ನಿಂತಿದ್ದರು. ಜಿಲ್ಲಾಡಳಿತ ಭವನದ ಒಳ ಪ್ರಾಂಗಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಪೊಲೀಸರು ಮನವೊಲಿಸಲು ಯತ್ನಿಸಿದರೂ ಕೇಳಲಿಲ್ಲ. ಅಂತಿಮವಾಗಿ ಟ್ರ್ಯಾಕ್ಟರ್‌ ತರಿಸುವುದಾಗಿ ಭರವಸೆ ನೀಡಿದ ನಂತರ ವಾಪಸ್‌ ಹೊರಗಡೆ ಬಂದು ಧರಣಿ ಮುಂದುವರಿಸಿದರು.

ಸಚಿವರ ಎದುರು ಆಕ್ರೋಶ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಸ್ಥಳಕ್ಕೆ ಬಂದು ಅಹಲವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದದೊಡ್ಡಕೆರೆ ಪುನಶ್ಚೇತನಾ ಸಮಿತಿಯ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು, ‘2017ರಲ್ಲಿ ಆರಂಭವಾದ ಯೋಜನೆ 10 ತಿಂಗಳಲ್ಲಿ ಮುಗಿಯಬೇಕಿತ್ತು. ಐದು ವರ್ಷವಾದರೂ ಮುಗಿದಿಲ್ಲ. ಕೆರೆ ತುಂಬದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಸಕರು, ಸಂಸದರು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಏನೂ ಕ್ರಮ ಕೈಗೊಳ್ಳುತ್ತಿಲ್ಲ. 1.4 ಕಿ.ಮೀ ಉದ್ದದ ಪೈಪ್‌ಲೈನ್‌ ನಿರ್ಮಾಣ ಆಗದಿರುವುದರಿಂದ ಸಮಸ್ಯೆಯಾಗಿದೆ’ ಎಂದು ಆರೋಪಿಸಿದರು.

ರೈತ ಮುಖಂಡ ಹೊನ್ನೂರು ಪ್ರಕಾಶ್‌ ಅವರು ಮಾತನಾಡಿ, ‘ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಆದರೆ, ಪೊಲೀಸರು ಟ್ರ್ಯಾಕ್ಟರ್‌ ತರಬಾರದು, ಹೀಗೆಯೇ ಚಳವಳಿ ಮಾಡಬೇಕು ಎಂದು ಹೇಳುವುದು ಎಷ್ಟು ಸರಿ. ಕಾಮಗಾರಿ ವಿಳಂಬವಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಅದನ್ನು ಬೇಗ ಮುಕ್ತಾಯಗೊಳಿಸಿ ಎಂದು ಹೇಳುವುದು ತಪ್ಪೇ ಎಂದು ಪ್ರಶ್ನಿಸಿದರು.

ಮತ್ತೊಬ್ಬ ಮುಖಂಡ ಎ.ಎಂ.ಮಹೇಶ್‌ ಪ್ರಭು ಅವರು ಕೂಡ ಶೀಘ್ರವಾಗಿ ಕಾಮಗಾರಿ ಮುಕ್ತಾಯ ಮಾಡುವಂತೆ ಕೇಳಿಕೊಂಡರು.

ರೈತ ಮುಖಂಡರಾದ ಹೆಬ್ಬಸೂರು ಬಸವಣ್ಣ, ಉಮ್ಮತ್ತೂರು ಬಸವರಾಜು, ಚಿಕ್ಕಬಸಪ್ಪ, ಸೋಮಣ್ಣ, ಪಟೇಲ್ ಶಿವಮೂರ್ತಿ, ನಾಗರಾಜು, ಜ್ಯೋತಿಗೌಡನಪುರ ಸಿದ್ದರಾಜು, ಅಗ್ರಹಾರ ಮಂಜು, ಕುದೇರು ಶಿವಕುಮಾರ್, ದಾಸನೂರುಮಲ್ಲಣ್ಣ, ದೇಮಹಳ್ಳಿ ಪ್ರಸಾದ, ಹೆಗ್ಗವಾಡಿ ಶಿವಕುಮಾರ್ ಇತರರು ಇದ್ದರು

ಲಿಖಿತ ಭರವಸೆ ನೀಡಿದ ಅಧಿಕಾರಿಗಳು

ಅಹವಾಲು ಆಲಿಸಿದ ನಂತರ ಮಾತನಾಡಿದ ಸುರೇಶ್‌ ಕುಮಾರ್‌ ಅವರು, ‘ಕಾಮಗಾರಿ ನಿಧಾನವಾಗಿರುವುದು ನಿಜ. 1.4 ಕಿ.ಮೀ ಉದ್ದದ ಪೈಪ್‌ಲೈನ್‌ ನಿರ್ಮಾಣ ಆಗದೇ ಇರುವುದರಿಂದ ತೊಂದರೆಯಾಗಿದೆ. ಕಾಮಗಾರಿಗೆ ಇದ್ದ ತಡೆಗಳೆಲ್ಲ ನಿವಾರಣೆಯಾಗಿದೆ. ಏನೂ ತಾಂತ್ರಿಕ ಅಡೆತಡೆಗಳು ಬಾರದೇ ಇದ್ದರೆ, ಏಪ್ರಿಲ್‌ 15ರ ಒಳಗಾಗಿ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಇದನ್ನು ಲಿಖಿತವಾಗಿ ನೀಡಿ’ ಎಂದು ಪ್ರತಿಭಟನಕಾರರು ಒತ್ತಾಯಿಸಿದಾಗ, 10 ನಿಮಿಷದಲ್ಲಿ ಕೊಡುವುದಾಗಿ ಹೇಳಿದರು. ನಂತರ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತುಕತಡೆ ನಡೆಸಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು, ಏಪ್ರಿಲ್‌ ಒಳಗಾಗಿ ಯೋಜನೆಯ ಮೊದಲ ಹಂತ ಪೂರ್ಣಗೊಳಿಸುವ ಭರವಸೆಯನ್ನು ಲಿಖಿತವಾಗಿ ಉಸ್ತುವಾರಿ ಸಚಿವರಿಗೆ ನೀಡಿದರು. ಇದೇ ಪ್ರತಿಯನ್ನು ಪ್ರತಿಭಟನಕಾರರಿಗೆ ನೀಡಲಾಯಿತು. ನಂತರ ಅವರು ಪ್ರತಿಭಟನೆ ವಾಪಸ್‌ ಪಡೆದರು.

ಒಂದಾದ ಸಂಘಟನೆಗಳು:ರೈತ‌ ಸಂಘದ ಎರಡೂ ಬಣಗಳು ಒಂದಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷ. ಪ್ರತಿಭಟನೆ ವಾಪಸ್‌ ಪಡೆದ ನಂತರ ಎಲ್ಲರೂ ಸ್ಥಳದಲ್ಲಿಯೇ ಊಟ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.