
ಟಿ.ಎ.ಶರವಣ
ಬೆಂಗಳೂರು: ‘ಕೇವಲ ರಾಜಕಾರಣಕ್ಕಾಗಿ ಜನತಾ ಪರಿವಾರ ಹುಟ್ಟಿದ್ದಲ್ಲ. ದೇಶದಲ್ಲಿ ಕಾಂಗ್ರೆಸ್ ಸರ್ವಾಧಿಕಾರ ರಾಜಕಾರಣದ ವಿರುದ್ಧ ಸೆಡ್ಡು ಹೊಡೆದು ಹೋರಾಟದ ಹೊಸ ಇತಿಹಾಸ ಬರೆದ ದಾಖಲೆ ಜನತಾ ಪರಿವಾರದ್ದು’ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.
ಜೆಡಿಎಸ್ ರಜತ ಮಹೋತ್ಸವ ಆಚರಣೆಯ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷ ಬೆಳೆದು ಬಂದ ಹಾದಿ ಹಾಗೂ ಗುರಿಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ.
‘ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಪರಿಸ್ಥಿತಿ ಬಂದಾಗ ಜನತಾ ಪರಿವಾರ ಹುಟ್ಟು ಪಡೆಯಿತು. ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಸೈದ್ಧಾಂತಿಕ ಹೋರಾಟದ ಫಲವಾಗಿ ಜನತಾ ಪರಿವಾರ ಪರ್ಯಾಯ ರಾಜಕಾರಣದ ಶಕ್ತಿಯಾಗಿ ಬೆಳೆದಿದೆ’ ಎಂದರು.
‘ಚಳವಳಿ, ಹೋರಾಟದ ಮೂಲಕ ಪ್ರವರ್ಧಮಾನಕ್ಕೆ ಬಂದಿರುವುದು ಜನತಾದಳ, ರಾಷ್ಟ್ರೀಯ ಜನತಾ ದಳ, ಜೆಡಿಯು, ಸಮಾಜವಾದಿ ಪಕ್ಷ ಎಲ್ಲವೂ ಇದೇ ಜನತಾ ಪರಿವಾರದ ಪಕ್ಷಗಳೇ ಆಗಿವೆ. ಇವೆಲ್ಲ ಪ್ರಮುಖ ಪಕ್ಷಗಳ ಹುಟ್ಟಿಗೆ ಕರ್ನಾಟಕ ನೆಲವಾಗಿದೆ. ಜನತಾ ಪರಿವಾರದ ನಾಯಕರ ತವರು ಕರ್ನಾಟಕ. ಇಂಥ ಕರ್ನಾಟಕದಲ್ಲಿ ಜನತಾ ಪರಿವಾರದಿಂದ ಗುಂಪುಗಳು ಕಾಂಗ್ರೆಸ್, ಬಿಜೆಪಿಗೆ ವಲಸೆ ಹೋದರೂ ತನ್ನದೇ ಆದ ಹೊಸ ರಾಜಕೀಯ ಶಕ್ತಿಯಾಗಿ ಚೈತನ್ಯ ಪಡೆದು ಪ್ರಾದೇಶಿಕ ಶಕ್ತಿಯಾಗಿ ಎಚ್.ಡಿ. ದೇವೇಗೌಡರ ಸಾರಥ್ಯದಲ್ಲಿ ತಲೆ ಎತ್ತಿ ನಿಂತ ಸ್ವಾಭಿಮಾನದ ಪಕ್ಷವೇ ಜಾತ್ಯತೀತ ಜನತಾ ದಳ’ ಎಂದು ಬಣ್ಣಿಸಿದ್ದಾರೆ.
‘ದೇವೇಗೌಡರು ದಿಟ್ಟತನದಿಂದ ಪಾದಯಾತ್ರೆಗಳ ಮೂಲಕ ಕಟ್ಟಿದ ಪಕ್ಷ ಜೆಡಿಎಸ್. ರೈತ ಮಕ್ಕಳಿಗೆ ಈ ರಾಜ್ಯದ ಸಾಮಾನ್ಯ ಜನರಿಗೆ ಅವರ ಹಕ್ಕುಗಳಿಗೆ, ಬದುಕುಗಳಿಗೆ ಧಕ್ಕೆ ಬಂದಾಗ ಅವರು ಹೋರಾಡಿದ್ದಾರೆ. ಗೆಜ್ಜಲಗೆರೆ, ಕುಣಿಗಲ್ ಗೋಲಿಬಾರ್, ವಿಠಲೇನಹಳ್ಳಿ ಹೋರಾಟ ಇರಬಹುದು, ಪ್ರಾದೇಶಿಕ ಪಕ್ಷದ ನಾಯಕರಾಗಿ ಪ್ರಧಾನಿ ಪಟ್ಟ ಅಲಂಕರಿಸುವ ಮಟ್ಟಿಗೆ ಬೆಳೆದರು’ ಎಂದು ತಿಳಿಸಿದ್ದಾರೆ.
‘ದೇವೇಗೌಡರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಾರಥ್ಯದಲ್ಲಿ ಜೆಡಿಎಸ್ ಜನಮಾನಸದ ಪಕ್ಷವಾಗಿ ಹೊರ ಹೊಮ್ಮಿದೆ. ಬದಲಾದ ರಾಜಕೀಯ ಸ್ಥಿತಿಯಲ್ಲಿ ಕುಮಾರಣ್ಣ ಪಕ್ಷಕ್ಕೆ, ನಾಯಕರಿಗೆ, ಕಾರ್ಯಕರ್ತರಿಗೆ ಪೂರಕವಾದ ರಾಜಕೀಯ ನಿರ್ಧಾರ ಕೈಗೊಂಡು ಪಕ್ಷದ ಸಾರಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪೊರೆಗಳನ್ನು, ವೈಫಲ್ಯಗಳನ್ನು ಕಳಚುತ್ತಾ ಆ ಪಕ್ಷದ ಗುಲಾಮಗಿರಿ ರಾಜಕಾರಣದ ವಿರುದ್ಧ ಈ ರಜತ ಮಹೋತ್ಸವ ಸಂದರ್ಭದಲ್ಲಿ ಬಲಿಷ್ಠ ನಾಯಕರಾಗಿ ಹೋರಾಟದ ಹೆಜ್ಜೆಗಳನ್ನು ದಾಖಲಿಸುತ್ತಾ ಮುಂದೆ ಹೋಗಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.