
ಚಾಮರಾನಗರ: ತಾಲ್ಲೂಕಿನ ನಂಜೇದೇವನಪುರದಲ್ಲಿ ಕಾಣಿಸಿಕೊಂಡಿರುವ 5 ಹುಲಿಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸ್ಥಳಾಂತರಿಸಲು ಬೋನು ಅಳವಡಿಸಲಾಗಿದೆ. ಅಗತ್ಯ ಬಿದ್ದರೆ ಅರವಳಿಕೆ ನೀಡಿ ಸೆರೆ ಹುಲಿಗಳನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಸಚಿವರು ‘ನಂಜೇದೇವನಪುರದ ಖಾಸಗಿ ಜಮೀನಿನಲ್ಲಿ ಹುಲಿಗಳು ಕಾಣಿಸಿಕೊಂಡಿರುವುದರಿಂದ ಜನರ ಜೀವಹಾನಿಯಾಗದಂತೆ ಹಾಗೂ ವನ್ಯಜೀವಿಗಳಿಗೂ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಹುಲಿಗಳ ಚಲನವಲನದ ಮೇಲೆ ಸತತ ನಿಗಾ ಇರಿಸಲು ಡ್ರೋನ್, ಥರ್ಮಲ್ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ. ಯಾವುದೇ ಅನಾಹುತ ಸಂಭವಿಸದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾರ್ಯಾಚರಣೆಗೆ ಅಗತ್ಯವಿರುವ ಸಲಕರಣೆ, ಹೆಚ್ಚುವರಿ ಪಶು ವೈದ್ಯರು, ಶಾರ್ಪ್ ಶೂಟರ್‌ಗಳನ್ನು ನಿಯೋಜನೆ ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣ ಕರೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು ಅರಣ್ಯ ಇಲಾಕೆ ಸಚಿವರು ತಿಳಿಸಿದರು.
ಜನರ ಜೀವ ಹಾಗೂ ವನ್ಯಜೀವಿಗಳ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷತೆಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕಾರ್ಯಾಚರಣೆ ಸ್ಥಳಕ್ಕೆ ಬಾರದಂತೆ ಸೆಕ್ಷನ್ 144 ಜಾರಿ ಮಾಡಬೇಕು. ಗಸ್ತು ಹೆಚ್ಚಿಸಬೇಕು, ಅರಣ್ಯ ಗಸ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್‌ನಲ್ಲಿ ಈ ಗಸ್ತು ಆ್ಯಪ್ ಅಳವಡಿಸಿ ಅವರ ಗಸ್ತಿನ ಮೇಲೆ ಕೇಂದ್ರ ಕಚೇರಿಯಿಂದ ನಿಗಾ ಇಡಬೇಕು. ಕಮಾಂಡ್ ಕೇಂದ್ರಗಳನ್ನು ಎಲ್ಲೆಡೆ ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದರು.
ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ಶಾಶ್ವತ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ರೂಪುರೇಷೆ ತಯಾರಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೋನು ಅಳವಡಿಕೆ ಸಚಿವರ ಸೂಚನೆ ಬೆನ್ನಲ್ಲೇ ನಂಜೇದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ ಸೆರೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ವೈದ್ಯ ವಾಸಿಂ ತಜ್ಞರಾದ ಶೂಟರ್ ಅಕ್ರಂ ಅವರ ಸಲಹೆ ಮತ್ತು ನಿರ್ದೇಶನದಂತೆ ವಾಕ್ ಥ್ರೋ ಕೇಜ್ ಅನ್ನು ಹುಲಿಗಳ ಸಂಚಾರ ಕಂಡು ಬಂದಿರುವ ನಂಜೇದೇವನಪುರ ಬಳಿಯ ಕಲ್ಲು ಕ್ವಾರಿ ಬಳಿ ಅಳವಡಿಸಲಾಗಿದೆ. ಡ್ರೋಣ್ ಕ್ಯಾಮೆರಾದಲ್ಲಿ ಹುಲಿಗಳ ಚಲನವಲನ ಪತ್ತೆಯಾಗಿದ್ದು ಕಲ್ಲು ಕ್ವಾರಿ ಹತ್ತಿರ ಇರುವುದು ಕಂಡು ಬಂದಿದೆ. ಹುಲಿಗಳ ಹೆಜ್ಜೆ ಗುರುತುಗಳು ಸಿಕ್ಕಿದ್ದು ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಂದು ತುಮಕೂರು ಕೇಜ್ ಬೋನ್ ಇರಿಸಲಾಗಿದೆ. ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಪ್ರತಿ ತಂಡಕ್ಕೆ ಒಂದು ಡ್ರೋನ್ ವಿತರಿಸಲಾಗಿದೆ. ರಾತ್ರಿ ವೇಳೆಯೂ ಕಾರ್ಯಾಚರಣೆಗೆ ಥರ್ಮಲ್ ಡ್ರೋನ್ ಬಳಕೆ ಮಾಡಿಕೊಂಡು ಹುಲಿಗಳ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.