
ಚಾಮರಾಜನಗರ/ಯಳಂದೂರು: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಸಮೀಕ್ಷೆಯ ಮೊದಲ ಹಂತ ಬುಧವಾರ ಮುಕ್ತಾಯವಾಯಿತು. ಮುಂದಿನ ಹಂತದ ಗಣತಿ ಕಾರ್ಯಕ್ಕೆ ಯೋಜನೆ ರೂಪಿಸಿದ್ದು ಜ.9ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ವನ್ಯಜೀವಿಗಳ ಜಾಡು ಹಾಗೂ ಸಸ್ಯ ವೈವಿಧ್ಯತೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನೇತೃತ್ವದಲ್ಲಿ ನಡೆಯುತ್ತಿರುವ ಹುಲಿ ಸಮೀಕ್ಷೆ ಯಶಸ್ವಿಯಾಗಿ ಸಾಗಿದ್ದು ಈ ಬಾರಿ ಸ್ವಯಂಸೇವಕರ ನೆರವಿಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ ಸೈನ್ ಸರ್ವೆ ಜ.5ರಿಂದ 7ರವರೆಗೆ ನಡೆದಿತ್ತು. ಈ ಅವಧಿಯಲ್ಲಿ ಕಾಲ್ನಡಿಗೆ ಮೂಲಕ ಸಮೀಕ್ಷೆ ನಡೆಸಲಾಗಿದೆ.
2ನೇ ಹಂತ ಜ.9ರಿಂದ 12ರವರೆಗೆ ನಡೆಯಲಿವೆ. ಕೋರ್ ಅರಣ್ಯ ಪ್ರದೇಶಗಳಲ್ಲಿ ಹುಲಿಗಳ ಸಂಚಾರ, ಉಗುರು, ಕೂದಲು ಪತ್ತೆ ಹಾಗೂ ಕುರುಹು ಸಂಗ್ರಹಿಸುವ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಹುಲಿ ಹೊರತುಪಡಿಸಿ ಕಿರುಬ, ಕರಡಿ, ಆನೆ, ಚಿರತೆ ಸೇರಿ ಮಾಂಸಹಾರಿ ಪ್ರಾಣಿಗಳ ಪತ್ತೆಕಾರ್ಯದ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಸಿಬ್ಬಂದಿ ಮುಂಜಾನೆಯಿಂದ ಸಂಜೆಯವರೆಗೆ ಪ್ರಾಣಿಗಳ ಜಾಡು ದಾಖಲಿಸುತ್ತಿದ್ದಾರೆ.
ಹುಲಿ ಗಣತಿ ಸಂದರ್ಭ ಎನ್‌ಟಿಸಿಎ ಮಾರ್ಗಸೂಚಿಯಂತೆ ಮಾಹಿತಿ ದಾಖಲಿಸಲಾಗುತ್ತಿದೆ. ಭಾರತೀಯ ವನ್ಯಜೀವಿ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಎಂ ಸ್ಟ್ರೈಪ್ಸ್’ ಆ್ಯಂಡ್ಯಾಯ್ಡ್ ಮೊಬೈಲ್ ಕಿರು ತಂತ್ರಾಂಶದ ಮೂಲಕ ದತ್ತಾಂಶ ಅಪ್ಲೋಡ್ ಮಾಡಲಾಗಿದೆ. ಈ ಕಾರ್ಯದಲ್ಲಿ ತರಬೇತಿ ಪಡೆದ ನೌಕರರು ಹೆಚ್ಚು ಶ್ರಮಿಸಿದ್ದು, ಖಚಿತ ಮಾಹಿತಿ ಲಭ್ಯವಾಗಲಿದೆ.
‘65 ಕಡೆ ಅಳವಡಿಸಿರುವ ಕ್ಯಾಮೆರಾ ಟ್ರಾಪ್‌ಗಳ ಮೂಲಕ ಚಿತ್ರಗಳನ್ನು ವೀಕ್ಷಿಸಲಾಗುತ್ತದೆ. ನೇರವಾಗಿ ಹಾಗೂ ಹೆಜ್ಜೆ ಗುರತುಗಳ ಮೂಲಕವೂ ಹುಲಿ ಸಂಚರಿಸಿರುವುದನ್ನು ಸಮೀಕ್ಷೆದಾರರು ವೀಕ್ಷಿಸಿದ್ದಾರೆ’ ಎಂದು ಆರ್‌ಎಫ್ಒ ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೊದಲ ಹಂತದಲ್ಲಿ ಮಾಂಸಹಾರಿ ಪ್ರಾಣಿಗಳ ಚಲನವನಲನಗಳ ಮಾಹಿತಿ ಸಂಗ್ರಹಿಸಲಾಗಿದೆ. ಜೊತೆಗೆ ವ್ಯಾಘ್ರಗಳ ಹೆಜ್ಜೆ ಗುರುತು, ಮರಗಳ ಮೇಲೆ ಪರಚಿದ ಉಗುರು ಗುರುತು ಸೇರಿದಂತೆ ಹುಲಿಗಳ ಸಂಚಾರ ಮಾಹಿತಿಗಳನ್ನು ಆ್ಯಪ್‌ನಲ್ಲಿ ದಾಖಲಿಸಲಾಗಿದೆ. ಅರಣ್ಯ ಸಿಬ್ಬಂದಿ ನಸುಕಿನಿಂದ ಕಣ್ಗಾವಲಿನಲ್ಲಿದ್ದು ಕನಿಷ್ಠ 5 ಕಿ.ಮೀ ಸಂಚರಿಸಿ ಮಾಹಿತಿ ಕಲೆಹಾಕಿದ್ದಾರೆ. ಮಾಗಿ ಸಮಯದಲ್ಲಿ ಮಂಜು ಬೀಳುವುದರಿಂದ ವನ್ಯ ಜೀವಿಗಳ ಗೋಚರತೆ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಎಚ್ಚರಿಕೆಯಿಂದ ಸಮೀಕ್ಷೆ ನಡೆಸಬೇಕು’ ಎನ್ನುತ್ತಾರೆ ಎಆರ್‌ಎಫ್‌ಒ ಮಧು.
‘ಎರಡನೇ ಹಂತದ ಜ.9 ರಿಂದ ಸಸ್ಯಾಹಾರಿ ಪ್ರಭೇದಗಳ ಸಂಖ್ಯೆ, ಅವುಗಳ ಸಂಚಾರದ ದಿಕ್ಕು, ಸಸ್ಯ ಸಂಕುಲ, ಕಾನನದ ನಮೂನೆ ಮತ್ತಿತರ ಮಾಹಿತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. 2 ಕಿ.ಮೀ ನೇರ ಮಾರ್ಗ ಗುರುತಿಸಿಕೊಂಡು ಅದರ ವ್ಯಾಪ್ತಿಯ ಪ್ರದೇಶಗಳಲ್ಲಿ ಆಯಾ ದಿನದ ಪ್ರಾಣಿ ಸಂಚಾರದ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುವುದು. 3ನೇ ಹಂತದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಕ್ಯಾಮೆರಾ ಟ್ರಾಪ್‌ಗಳನ್ನು ಇಟ್ಟು ಹುಲಿ ಸಮೀಕ್ಷೆ ಪೂರ್ಣಗೊಳಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.