
ಚಾಮರಾಜನಗರ: ಮಹಾತ್ಮಾಗಾಂಧಿ ನರೇಗಾ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಎಂದು ಬದಲಾಯಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಮಜಾಯಿಷಿ ನೀಡಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧೀಜಿ ಹೆಸರನ್ನು ತೆಗೆದು ಹಾಕಲಾಗಿದ್ದರೂ ಅವರಿಗೆ ಪ್ರೇರಣೆಯಾಗಿದ್ದ ರಾಮನ ಹೆಸರನ್ನು ಇಡಲಾಗಿದೆ. ಹೆಸರು ಬದಲಾವಣೆಯ ಹಿಂದೆ ವಿಕಸಿತ ಭಾರತ ನಿರ್ಮಾಣದ ಉದ್ದೇಶವಿದೆಯೇ ಹೊರತು ದುರುದ್ದೇಶಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 756 ಯೋಜನೆಗಳಿಗೆ ಜವಾಹರ್ ಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರನ್ನು ಇಡಲಾಗಿದೆ. ಆದರೆ, ಮೋದಿ ಪ್ರಧಾನಿಯಾದ ಬಳಿಕ ಯಾವ ಯೋಜನೆಗೆ ಅವರ ಹೆಸರು ಇರಿಸಲಾಗಿಲ್ಲ. ಎಲ್ಲ ಯೋಜನೆಗಳು ಪ್ರಧಾನ ಮಂತ್ರಿ ಹುದ್ದೆಯ ಹೆಸರಿನಲ್ಲಿವೆ ಎಂದರು.
ನರೇಗಾ ಯೋಜನೆ ವಿಕಸಿತ ಭಾರತ್ ಜಿ ರಾಮ್ ಜಿ ಯೋಜನೆಯಾಗಿ ಬದಲಾದ ಬಳಿಕ ಮಾನವ ದಿನಗಳ ಸಂಖ್ಯೆಯನ್ನು ₹ 100 ರಿಂದ ₹ 125ಕ್ಕೆ ಹೆಚ್ಚಿಸಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಸಮಾನವಾಗಿ ₹370 ಕೂಲಿ ನಿಗದಿಪಡಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಯೋಜನೆ ಪರಿಷ್ಕರಿಸಲಾಗಿದೆ.
ವಿಜಿ ಜಿ ರಾಮ್ ಜಿ ಕಾಯ್ದೆ ಜಾರಿಯಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಪೆಟ್ಟುಬಿದ್ದಿಲ್ಲ. ಬದಲಾಗಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಬಲಗೊಳ್ಳಲಿದೆ. ಪಂಚಾಯಿತಿ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ದುಂದು ವೆಚ್ಚಗಳಿಗೆ ಕಡಿವಾಣ ಬೀಳಲಿದ್ದು ಪಾರದರ್ಶಕತೆಗೆ ಒತ್ತು ಸಿಗಲಿದೆ. ಆಡಳಿತಾತ್ಮಕ ವ್ಯವಸ್ಥೆ ಬಲಗೊಳ್ಳಲಿದೆ.
2011ರ ಬಜೆಟ್‌ನಲ್ಲಿ ಯುಪಿಎ ಸರ್ಕಾರ ನರೇಗಾ ಯೋಜನೆಗೆ ₹ 40,000 ಕೋಟಿ ಮೀಸಲಿಟ್ಟಿತ್ತು. ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನುದಾನವನ್ನು ₹ 2.86 ಲಕ್ಷ ಕೋಟಿಗೆ ಹೆಚ್ಚಿಸಲಾಯಿತು. ರಾಜ್ಯಗಳಿಗೆ ಸರಾಸರಿ 17000 ಕೋಟಿ ಅನುದಾನ ಹೆಚ್ಚಾಯಿತು. 2025ರಲ್ಲಿ ಯೋಜನೆಗೆ ₹ 85,334 ಕೋಟಿ ವೆಚ್ಚ ಮಾಡಲಾಗಿದ್ದು 5.78 ಕೋಟಿ ಮಂದಿಗೆ ಉದ್ಯೋಗ ನೀಡಲಾಗಿದೆ ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಸಿಎಜಿ ವರದಿ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿ ಕಾಟಾಚಾರಕ್ಕೆ ನಡೆಯುತ್ತಿತ್ತು. ವಿಬಿ ಜಿ ರಾಮ್ ಜಿ ಕಾಯ್ದೆಯಡಿ ಅವ್ಯವಹಾರದಲ್ಲಿ ಭಾಗಿಯಾದರೆ ಶಿಸ್ತುಕ್ರಮದ ಜೊತೆಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಂತ್ರಜ್ಞಾನದ ಸಹಾಯ ಪಡೆಯಲಾಗಿದೆ. 14 ದಿನಗಳ ಒಳಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಕೂಲಿ ಜಮೆಯಾಗಲಿದೆ ಎಂದು ವಿ.ಸೋಮಣ್ಣ ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೂ ಮುನ್ನ ಎಲ್ಲ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ಸಭೆ, ಸಮಾಲೋಚನೆ ಹಾಗೂ ಕಾರ್ಯಾಗಾರಗಳನ್ನು ನಡೆಸಿದೆ. ಆದರೂ ವಿರೋಧ ಪಕ್ಷಗಳು ನಿರಾಧಾರ ಆರೋಪ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ ಕುಮಾರ್, ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ವಕ್ತಾರ ಮಹೇಶ್, ಹನೂರು ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಬಾಲರಾಜ್, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮುಖಂಡರಾದ ಎಂ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಸೇರಿದಂತೆ ಹಲವರು ಇದ್ದರು.
ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯನ್ನು ಅರಿಯದೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದು ಗಾಂಧೀಜಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸೂರ್ಯ–ಚಂದ್ರ ಇರುವವರೆಗೂ ಗಾಂಧೀಜಿ ಹೆಸರನ್ನು ಬಿಜೆಪಿ ಸ್ಮರಿಸಲಿದೆವಿ.ಸೋಮಣ್ಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ
ರೈಲ್ವೆ ಯೋಜನೆ ಜಾರಿಗೆ ಅಸಹಕಾರ
ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ. ಹಾರೋಹಳ್ಳಿ ಕನಕಪುರ ಸಾತನೂರು ಮಳವಳ್ಳಿ ಕೊಳ್ಳೇಗಾಲ ಯಳಂದೂರು ಸಂತೇಮರಹಳ್ಳಿ ಮಾರ್ಗವಾಗಿ ಚಾಮರಾಜನಗರಕ್ಕೆ ರೈಲ್ವೆ ಯೋಜನೆ ಮಂಜೂರು ಮಾಡುವ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ಯೋಜನೆಗೆ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಮೈಸೂರು- ಕುಶಾಲ ನಗರ ನಡುವಿನ ರೈಲ್ವೆ ಯೋಜನೆಗೂ ಬೆಂಬಲ ಸಿಗಲಿಲ್ಲ ಎಂದು ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.