ADVERTISEMENT

ಚಾಮರಾಜನಗರ ಜಿಲ್ಲೆಯ ತಮ್ಮ ಖಾಸಗಿ ಸ್ವತ್ತಿನ ಬಗ್ಗೆ ಪ್ರಮೋದಾದೇವಿ ಹೇಳಿದ್ದೇನು?

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 9:43 IST
Last Updated 14 ಏಪ್ರಿಲ್ 2025, 9:43 IST
<div class="paragraphs"><p>ಪ್ರಮೋದಾದೇವಿ&nbsp;ಒಡೆಯರ್</p></div>

ಪ್ರಮೋದಾದೇವಿ ಒಡೆಯರ್

   

ಮೈಸೂರು: ‘ಚಾಮರಾಜನಗರ ಜಿಲ್ಲೆಯಲ್ಲಿ ರಾಜಮನೆತನದ ಹೆಸರಿನಲ್ಲಿರುವ ಖಾಸಗಿ ಸ್ವತ್ತನ್ನು ಖಾತೆ ಮಾಡಿಕೊಡಲು 1950ರ ದಾಖಲೆ ಆಧರಿಸಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆಯಷ್ಟೇ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಅರಮನೆಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಯಚಾಮರಾಜೇಂದ್ರ ಒಡೆಯರ್ ಅವರು ನೀಡಿರುವ ದಾನದ ಬಗ್ಗೆ ಗೊತ್ತಿಲ್ಲ. ದಾನಪತ್ರ ಹಾಗೂ ದಾಖಲೆಗಳಿದ್ದರೆ ರೈತರು ತಂದುಕೊಡಲಿ. ಮಹಾರಾಜರು ಜಮೀನು ನೀಡಿದ್ದರೆ, ಅದನ್ನು ಕಿತ್ತುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಖಾಸಗಿ ಸ್ವತ್ತಿನ ಜಮೀನುಗಳಿರುವ ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಮಾಡುವುದಾಗಿ ಜಿಲ್ಲಾಡಳಿತ ಹೇಳಿದ್ದರಿಂದ, ಮಾರ್ಚ್‌ 29ರಂದು ಪತ್ರ ಬರೆಯಲಾಗಿದೆ. ಅಲ್ಲಿನ ಜಿಲ್ಲಾಧಿಕಾರಿಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಲವು ಬಾರಿ ಕರೆ ಮಾಡಿರುವೆ, ಸಂದೇಶವನ್ನೂ ಕಳಿಸಿದ್ದೇನೆ’ ಎಂದರು.

‘2014ರಲ್ಲಿಯೇ ಜಿಲ್ಲೆಯಲ್ಲಿನ ರಾಜಮನೆತನದ ಆಸ್ತಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಸೇರಿದಂತೆ ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಿ, ಸ್ವೀಕೃತಿ ‍ಪತ್ರವನ್ನೂ ಪಡೆಯಲಾಗಿದೆ. ಆಗಿನ ಮುಖ್ಯ ಕಾರ್ಯದರ್ಶಿ ಶ್ರೀನಿವಾಸನ್‌ ಅವರ ಸಹಿಯೂ ಇದೆ’ ಎಂದು ದಾಖಲೆಯನ್ನು ತೋರಿದರು.

‘2020ರಲ್ಲಿ ಸರ್ವೆ ಸಂಖ್ಯೆಯೊಂದರ ಆಸ್ತಿ ಮೇಲೆ ಯಾರೋ ಒಬ್ಬರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಅದೂ ಕೂಡ ನಮ್ಮ ಪರವಾಗಿಯೇ ಆಗಿದೆ. ಎಲ್ಲ ದಾಖಲೆಗಳನ್ನು ಆಧರಿಸಿಯೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಈಚೆಗೂ ದಾಖಲೆಗಳ ಸಹಿತ ಪತ್ರ ಬರೆಯಲಾಗಿದೆ. ಆದರೂ ಜಿಲ್ಲಾಧಿಕಾರಿಗಳು ಮಾಹಿತಿ ಇಲ್ಲವೆಂದೇ ಹೇಳುತ್ತಿದ್ದಾರೆ’ ಎಂದು ದೂರಿದರು.

‘ಗ್ರಾಮಸ್ಥರು ಯಾವುದೇ ವಿಚಾರ, ಸಮಸ್ಯೆಗಳಿದ್ದರೂ ನಮ್ಮ ಕಚೇರಿಯನ್ನು ನೇರವಾಗಿ ಸಂಪರ್ಕ ಮಾಡಬಹುದು. ಯಾವುದೇ ಗೊಂದಲ ಮಾಡಿಕೊಳ್ಳಬಾರದು. ದಾನ ಕೊಟ್ಟಿದ್ದ ಮೇಲೆ ಕಿತ್ತುಕೊಳ್ಳುವ ಅವಶ್ಯಕತೆ ಇದೆಯಾ? ಕಂದಾಯ ಗ್ರಾಮ ಮಾಡುವ ಪ್ರಸ್ತಾವ ಬಂದಾಗಲೂ ಅದನ್ನು ನಮ್ಮ ಗಮನಕ್ಕೆ ತಂದಿದ್ದರೆ, ಈ ಆತಂಕ ಸೃಷ್ಟಿಯಾಗುತ್ತಿರಲಿಲ್ಲ’ ಎಂದು ಹೇಳಿದರು.

‘ಜಮೀನು ನಮ್ಮ ಹೆಸರಿಗೆ ಬಂದರೂ, ದಾನ ಪತ್ರದ ದಾಖಲೆಯನ್ನು ಗ್ರಾಮಸ್ಥರು ತೋರಿದರೆ, ಸರ್ಕಾರದ ಮಧ್ಯಸ್ಥಿಕೆ ಇಲ್ಲದೆಯೇ ಅವರಿಗೆ ಹೇಗೆ ಜಮೀನು ಕೊಡಬೇಕೆಂಬುದು ಗೊತ್ತಿದೆ. ಅವರಿಗೆ ತೊಂದರೆ ಆಗದು’

‘ಯಾವುದೇ ಅನಾನುಕೂಲ ಆಗದು’: ‘ಚಾಮರಾಜನಗರ ಜಿಲ್ಲೆಯಲ್ಲಿ ನಮಗೆ ಸೇರಿದ ಜಾಗವಿದೆ ಎಂದು ನಮ್ಮ ತಾಯಿ ಪತ್ರ ಬರೆದಿದ್ದಾರೆ. ಪತ್ರ ಬರೆದ ಕಾರಣಕ್ಕೆ ಆತಂಕ ಪಡಬೇಕಿಲ್ಲ. ನನ್ನಿಂದ ಹಾಗೂ ನನ್ನ ತಾಯಿಯಿಂದ ಯಾವುದೇ ಅನಾನುಕೂಲ ಆಗುವುದಿಲ್ಲ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲಾಧಿಕಾರಿ ಅವರು ವರದಿ ಕೊಡಲಿ. ಅದನ್ನು ಬಿಟ್ಟು ಕೆಲವರು ಆತಂಕ ಸೃಷ್ಟಿ ಮಾಡಲು ಹೊರಟಿದ್ದಾರೆ. ನಮ್ಮಿಂದ ಅಲ್ಲಿನ ಜನಕ್ಕೆ ತೊಂದರೆ ಆಗದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.