ADVERTISEMENT

ವಿಶ್ವ ಸರ್ಪಗಳ ದಿನ | ಹಾವುಗಳಿಗೂ ಅಪಾಯ: ಬೇಕಿದೆ ಸಹಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 3:08 IST
Last Updated 16 ಜುಲೈ 2025, 3:08 IST
ಯಳಂದೂರು ತಾಲ್ಲೂಕಿನ ಕಾರಪುರ ಮಠದ ಬಳಿ ಪರದೆಗೆ ಸಿಲುಕಿದ ಹಾವನ್ನು ಸ್ನೇಕ್ ಮಹೇಶ್ ರಕ್ಷಣೆ ಮಾಡುತ್ತಿರುವುದು
ಯಳಂದೂರು ತಾಲ್ಲೂಕಿನ ಕಾರಪುರ ಮಠದ ಬಳಿ ಪರದೆಗೆ ಸಿಲುಕಿದ ಹಾವನ್ನು ಸ್ನೇಕ್ ಮಹೇಶ್ ರಕ್ಷಣೆ ಮಾಡುತ್ತಿರುವುದು    

ಯಳಂದೂರು: ನಿಸರ್ಗದ ಜೀವರಾಶಿಗಳಲ್ಲಿ ಹಾವುಗಳಿಗೆ ವಿಶಿಷ್ಠ ಸ್ಥಾನವಿದೆ. ಅವುಗಳ ಜೈವಿಕ ಕ್ರಿಯೆ ಸಂಕೀರ್ಣವಾಗಿದ್ದು, ನೆಲ ಮತ್ತು ಜಲಾವರಗಳಲ್ಲೂ ಜೀವಿಸುವ ಮನೋಬಲ ಹೊಂದಿರುವ ಸರೀಸೃಪಗಳು ಎಂತಹ ಪರಿಸ್ಥಿತಿಯಲ್ಲೂ ಬದುಕುತ್ತವೆ. ಆದರೆ, ಕೃಷಿ, ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳ ವಿಸ್ತರಣೆಯಿಂದ ಹಾವುಗಳ ಆವಾಸ ಕುಸಿಯುತ್ತಿದೆ.

ತಾಲ್ಲೂಕಿನಲ್ಲಿ ವಿಷ ರಹಿತ ಮತ್ತು ವಿಷಪೂರಿತ ಸರ್ಪಗಳೂ ಜೀವಿಸುತ್ತಿದ್ದು ಹುಳದ ಮಾದರಿಯ ಹಾವಿನಿಂದ ದೊಡ್ಡ ಗಾತ್ರದ ಹೆಬ್ಬಾವುಗಳ ಸಂತತಿ ಇಲ್ಲಿದೆ. ಸಣ್ಣ ಇಲಿಯಿಂದ, ಜಿಂಕೆಯಂತಹ ಜೀವಿಗಳನ್ನು ಭಕ್ಷಿಸುವ ಹಾವುಗಳು ಪರಿಸರದಲ್ಲಿ ಧ್ವಂಸಕ ಜೀವಿಗಳನ್ನು ನಿಯಂತ್ರಿಸುವ ಮೂಲಕ ರೈತರ ಸ್ನೇಹಿಯಾಗಿವೆ. ಇಂತಹ ಸರ್ಪ ಸಂತತಿ ಹತ್ತಾರು ಅವಘಡಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದೆ. ಹಾವುಗಳನ್ನು ಚರ್ಮ, ಔಷಧಕ್ಕೂ ಬಳಕೆ ಮಾಡಲಾಗುತ್ತಿದ್ದು ಅವ್ಯಾಹತವಾಗಿ ಬೇಟೆಯಾಡಲಾಗುತ್ತಿದೆ.   

ಜಿಲ್ಲೆಯಲ್ಲಿ 25ಕ್ಕೂ ಹೆಚ್ಚಿನ ಪ್ರಭೇದದ ಹಾವುಗಳಿದ್ದು ಬಹುತೇಕ ಹಾವುಗಳು ಸಾಗುವಳಿ ಭೂಮಿಗೆ ಮಾರಕವಾದ ಇಲಿ, ಹೆಗ್ಗಣ ಮತ್ತಿತರ ಪ್ರಾಣಿಗಳನ್ನು ಭಕ್ಷಿಸುತ್ತದ್ದು ‌ರೈತರ ಬೆಳೆ ಸಂರಕ್ಷಣೆಯಾಗುತ್ತಿದೆ. ನಾಗರಹಾವು, ಕೇರೆ, ಮಂಡಲದಾವು ತಮ್ಮ ವ್ಯಾಪ್ತಿಯ ಗಡಿಗಳಲ್ಲಿ ಸಂಚರಿಸುವುದರಿಂದ ಇತರೆ ಉರಗಗಳ ನಿಯಂತ್ರಣ ಮಾಡಿಕೊಳ್ಳುತ್ತವೆ. ಆದರೆ, ಈಚಗೆ ಕೃಷಿ ಪರಿಸರದಲ್ಲಿ ಬಳಕೆಯಾಗುವ ಅತಿಯಾದ ಕೀಟನಾಶಕಗಳ ಪ್ರಭಾವದಿಂದ ಹಾವುಗಳ ಸಂತತಿ ಅವನತಿಯತ್ತ ಸಾಗುತ್ತಿದೆ ಎನ್ನುತ್ತಾರೆ ಸಂತೇಮರಹಳ್ಳಿ ಸ್ನೇಕ್ ಮಹೇಶ್.

ADVERTISEMENT

ಕಾಡಂಚಿನ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಿಗೆ ಅತಿಯಾಗಿ ರಸಾಯನಿಕ ಸಿಂಪಡಣೆ ಮಾಡಲಾಗುತ್ತಿದ್ದು ಅರಣ್ಯದೊಳಗೆ ಹೆಚ್ಚಾಗಿ ಕಂಡುಬರುವ ಹೆಬ್ಬಾವುಗಳ ಸಂತತಿ ಅರೆ ಪ್ರಜ್ಞಾವಸ್ಥೆ ತಲುಪುತ್ತಿದೆ ಎಂದು ಉರಗ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಲೆ ಕಂಟಕ:

ಈಚೆಗೆ ಸಾಗುವಳಿ ಭೂಮಿಯ ಸುತ್ತಲೂ ಸೀರೆ ಬೇಲಿ ಹಾಗೂ ಹಸಿರು ಪರದೆ ಬಿಡಲಾಗುತ್ತಿದೆ. ಇವುಗಳ ನಡುವೆ ಸಂಚರಿಸುವ ಸರ್ಪಗಳು ಬಲೆಗೆ ಸಿಲುಕಿ ಸಾಯುತ್ತಿವೆ. ದೇಹಕ್ಕೆ ಗಾಯಗಳಾಗಿ ಜೀವ ಕಳೆದುಕೊಳ್ಳುತ್ತವೆ. ತೋಟದ ಮನೆಗಳ ಸುತ್ತಲಿನ ಬೇಲಿ, ಬದು ಹಾಗೂ ಪೊದೆಗಳ ಸುತ್ತಮುತ್ತ ವನ್ಯಜೀವಿಗಳು ಬಾರದಂತೆ ತಡೆಯಲು ನೆಲಕ್ಕೆ ಚೆಲ್ಲುವ ಕಾರ್ಬೋಫ್ಯುರಾನ್ ಕಾಳು, ಹೂ ಮತ್ತು ದ್ವಿದಳಧಾನ್ಯ ಗಿಡಗಳಿಗೆ ಸಿಂಪಡಿಸುವ ಕೀಟನಾಶಗಳು ಹಾವುಗಳ ಜೀವಕ್ಕೆ ಎರವಾಗಿವೆ ಎನ್ನುತ್ತಾರೆ ಉರಗ ತಜ್ಞ ಸ್ನೇಕ್ ಮಹೇಶ್.

ವಿದ್ಯುತ್ ಕಂಬಗಳ ತಂತಿಗೆ, ಕೀಟನಾಶಕ, ಬಲೆಯ ಉರುಳು, ಮನೆಯ ಬಾಗಿಲ ಸಂದು, ವಾಹನಗಳಿಗೆ ಸಿಲುಕಿ ಹೆಚ್ಚಿನ ಸಂಖ್ಯೆಯ ಉರಗಗಳು ಬಲಿಯಾಗುತ್ತಿವೆ. ಅಪಾಯಕಾರಿ ಸ್ಥಿತಿಯಲ್ಲಿರುವ ಹಾವುಗಳನ್ನು ರಕ್ಷಿಸಿ ಔಷಧಿ ಹಾಕಿ ಕಾಡಿಗೆ ಬಿಡುವ ಕಾಯಕದಲ್ಲಿ ತೊಡಗಿದ್ದಾರೆ ಸ್ನೇಕ್ ಮಹೇಶ್. ಹಾವುಗಳ ವೈದ್ಯ ಎಂದೇ ಕರೆಯುವ ಸ್ನೇಕ್ ಮಹೇಶ್ 25 ವರ್ಷಗಳಿಂದ ಉರಗ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ.   

ವಿದ್ಯುತ್ ಕಂಬವೇರಿ ತಂತಿಗೆ ಸಿಲುಕಿರುವ ನಾಗರಹಾವು 

ಅಮೆರಿಕದಲ್ಲಿ ಆರಂಭ

ಪರಿಸರದಲ್ಲಿ ಆಹಾರದ ಸರಪಳಿ ಕಾಪಾಡುವ ನಿಟ್ಟಿನಲ್ಲಿ ಉರಗಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹಾವುಗಳನ್ನು ಸಂರಕ್ಷಿಸಲು ಪ್ರತಿ ವರ್ಷ ಜುಲೈ16ರಂದು ‘ವಿಶ್ವ ಹಾವುಗಳ ದಿನ’ ಆಚರಿಸಲಾಗುತ್ತಿದೆ. ಜುಲೈ 16 1991ರಂದು ಅಮೆರಿಕಾದ ಉರಗ ಪಾರ್ಕ್‌ಗಳಲ್ಲಿ ಹಾವುಗಳ ದಿನವನ್ನು ಮೊದಲ ಬಾರಿಗೆ ಆಚರಿಸಲಾಗಿದ್ದು ಪ್ರಸ್ತುತ ವಿಶ್ವದ ಎಲ್ಲ ದೇಶಗಳಲ್ಲೂ ಆಚರಿಸಲಾಗುತ್ತಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.