ಯಳಂದೂರು: ದೀಪಗಳ ಹಬ್ಬ ದೀಪಾವಳಿ ಬಂದಿದ್ದು ಮನೆಯ ಮುಂದೆ ಪಂಜು ಹಚ್ಚಿ, ದೀಪ ಬೆಳಗಿಸುವತ್ತ ಮಹಿಳೆಯರು ಚಿತ್ತ ಹರಿಸಿದ್ದರೆ, ಮಕ್ಕಳು ಪಟಾಕಿ ಹಚ್ಚುವ ಸಂಭ್ರಮದಲ್ಲಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ಹೆಸರಿನಲ್ಲಿ ವೈವಿಧ್ಯಮಯ ಮತಾಪುಗಳು ಲಗ್ಗೆಯಿಟ್ಟಿದ್ದು ಚಿಣ್ಣರ ಗಮನ ಸೆಳೆಯುತ್ತಿವೆ.
ಪಟ್ಟಣದಲ್ಲಿ ಬೆರಳೆಣಿಕೆಯ ಪಟಾಕಿ ಮಾರಾಟ ಮಳಿಗೆಗಳಿಗೆ ಈ ಬಾರಿ ಪರವಾನಗಿ ಸಿಕ್ಕಿದೆ. ಮಾರಾಟಗಾರರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಅಪಾಯವಲ್ಲದ, ಪುಟ್ಟ ಮಕ್ಕಳು ಸಹ ಹೊತ್ತಿಸಬಹುದಾದ, ಬಣ್ಣಬಣ್ಣದ ಬೆಳಕು ಚಿಮ್ಮಿಸುವ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.
ಈಚಿನ ವರ್ಷಗಳಲ್ಲಿ ಪಟಾಕಿ ವಹಿವಾಟು ಕುಸಿಯುತ್ತ ಬಂದಿದ್ದು ಪರಿಸರ ಸ್ನೇಹಿ ಮತಾಪು, ಬಾಣ ಬಿರುಸು, ಏರೋಪ್ಲೇನ್, ಕಡಿಮೆ ತೀವ್ರತೆಯ ಬಾಂಬ್, ಗನ್‌ಗಳ ಮಾರಾಟ ಹೆಚ್ಚಾಗಿದೆ. ಹೆಚ್ಚು ಹೊಗೆ ಹೊಮ್ಮಿಸುವ, ಹೆಚ್ಚು ಶಬ್ಧ ಹೊರಸೂಸುವ, ವಾಯು ಹಾಗೂ ಶಬ್ಧ ಮಾಲಿನ್ಯ ಉಂಟುಮಾಡುವ ಪಟಾಕಿಗಳ ಬಳಕೆಗೆ ನಿಷೇಧ ಇದೆ. ಹೊಸ ಮಾದರಿಯ ಪರಿಸರಕ್ಕೆ ಕಡಿಮೆ ಹಾನಿಮಾಡುವ ಪಟಾಕಿಗಳಿಗೆ ಬೇಡಿಕೆ ಇದ್ದರೂ ಜಿಎಸ್‌ಟಿ ಹಾಗೂ ಹೆಚ್ಚು ಬೆಲೆ ಇರುವುದರಿಂದ ಗ್ರಾಹಕರ ಖರೀದಿ ಮನೋಭಾವವೂ ಬದಲಾಗಿದೆ ಎನ್ನುತ್ತಾರೆ ವ್ಯಾಪಾರಿ ಮಹೇಶ್.
ಈ ಸಲ ಫ್ಯಾನ್ಸಿ ಪಟಾಕಿಗಳು ಮಕ್ಕಳನ್ನು ಆಕರ್ಷಣೆ ಮಾಡುತ್ತಿವೆ. ವಿಶಲ್ ಶಬ್ಧದ ಭೂ ಚಕ್ರಗಳು, ಕಲ್ಲಂಗಡಿ ಪಟಾಕಿಗಳು, ವರ್ಣಮಯ ಒಲಂಪಿಕ್ಸ್ ಟಾರ್ಚ್, ಖಡ್ಗ, ಪಿಜ್ಜಾ, ಫಿಶ್ ಗಿಟಾರ್, ಜಂಗಲ್ ಫ್ಯಾಂಟಿಸಿ ಪಟಾಕಿಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ದೊಡ್ಡ ನಗರಗಳಲ್ಲಿ ಸಿಗುವ ಇಂತಹ ಪಟಾಕಿಗಳಿಗೆ ದರವೂ ಹೆಚ್ಚಾಗಿದೆ. ಹಾಗಾಗಿ ಸ್ಥಳೀಯವಾಗಿ ಪಟಾಕಿ ವ್ಯಾಪಾರ ಕಳೆಗುಂದಿದೆ ಎನ್ನುತ್ತಾರೆ ಪಟಾಕಿ ಮಾರಾಟಗಾರರು.
ಮಕ್ಕಳಿಗೆ ಇಷ್ಟವಾದ ಪಟಾಕಿ ಖರೀದಿಸುವುದರ ಜೊತೆಗೆ ನಿಸರ್ಗಕ್ಕೂ ಹಾನಿಯಾಗದ ಹಸಿರು ಪಟಾಕಿ ಬಳಕೆ ಮಾಡಲು ನಿರ್ಧರಿಸಿದ್ದೇವೆ. ಶಾಲಾ–ಕಾಲೇಜುಗಳಲ್ಲಿ ಮಕ್ಕಳಿಗೆ ಹಸಿರು ಪಟಾಕಿ ಬಳಕೆ ಬಗ್ಗೆ ಅರಿವು ಮೂಡಿಸಿರುವುದರಿಂದ ಮಾಲಿನ್ಯ ರಹಿತ ಪಿಸ್ತೂಲು ಬಳಸಿ ಶಬ್ಧ ಹೊಮ್ಮಿಸುವ ಸಣ್ಣ ಮತಾಪು ಖರೀದಿಸುತ್ತೇವೆ ಎಂದು ಪಟ್ಟಣದ ಸೂರಿ ಹೇಳಿದರು.
ಆದರೆ ಹಸಿರು ಪಟಾಕಿಗಳನ್ನು ಗ್ರಾಮೀಣ ಪ್ರದೇಶದ ಗ್ರಾಹಕರು ಗುರುತಿಸುವುದು ಕಷ್ಟವಾಗಿದೆ. ಪಟಾಕಿ ಬಾಕ್ಸ್ ಮೇಲೆ ಇರುವ ಕ್ಯೂ ಆರ್ ಕೋಡ್ ನೋಡಿಕೊಂಡು ಕೊಳ್ಳುವ ಬಗ್ಗೆ ಇನ್ನೂ ಜನರಿಗೆ ಹೆಚ್ಚಾಗಿ ತಿಳಿದಿಲ್ಲ ಎನ್ನುತ್ತಾರೆ ಗ್ರಾಹಕರು.
‘ಹಸಿರು ಪಟಾಕಿಗಳಿಗೆ ಪರವಾನಗಿ’
‘ಪಟ್ಟಣದಲ್ಲಿ 7 ಪಟಾಕಿ ಮಳಿಗೆಗಳಿಗೆ ಪರವಾನಗಿ ನೀಡಲಾಗಿದೆ. ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲಿಸಿ ಪ್ರಕೃತಿ ಸ್ನೇಹಿ ಪಟಾಕಿ ಮಾರಾಟ ಮಾಡುವ ಷರತ್ತು ಹಾಕಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಮಳಿಗೆಯಿಂದ ಮತ್ತೊಂದು ಅಂಗಡಿಗೆ ನಿರ್ಧಿಷ್ಟ ಅಂತರ ಕಾಯ್ದುಕೊಳ್ಳಲಾಗಿದೆ ಮಳಿಗೆ ಮುಂಭಾಗ ನೀರಿನ ಸಂಗ್ರಹ ಹಾಗೂ ಅಗ್ನಿ ನಿರೋಧಕ ಯಂತ್ರ ಇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ತಹಶೀಲ್ದಾರ್ ಎಸ್.ಎಲ್.ನಯನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.