ADVERTISEMENT

ಯಳಂದೂರು | ಮಾಘ ಶುದ್ಧ ಪೂರ್ಣಿಮಾ: ಚಾಮುಂಡಾಂಬೆ ದರ್ಶನ ಪಡೆದ ಸಾವಿರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:31 IST
Last Updated 2 ಫೆಬ್ರುವರಿ 2026, 1:31 IST
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಚಾಮುಂಡೇಶ್ವರಿ ರಥೋತ್ಸವ ಅಪಾರ ಭಕ್ತರ ಜಯಘೋಷಗಳ ನಡುವೆ ನಡೆಯಿತು
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಚಾಮುಂಡೇಶ್ವರಿ ರಥೋತ್ಸವ ಅಪಾರ ಭಕ್ತರ ಜಯಘೋಷಗಳ ನಡುವೆ ನಡೆಯಿತು   

ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದ ಪುರಾತನ ಚಾಮುಂಡೇಶ್ವರಿ ದೇವಾಲಯದಲ್ಲಿ ಭಾನುವಾರ ಹುಣ್ಣಿಮೆ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಅದ್ದೂರಿಯಾಗಿ ಜರುಗಿತು. ಹೆಚ್ಚಿನ ಭಕ್ತರು ಹಣ್ಣುಕಾಯಿ ಪೂಜೆ ನೆರವೇರಿಸಿ, ಸಡಗರ ಸಂಭ್ರಮಗಳ ನಡುವೆ ದೇವಿ ದರ್ಶನ ಪಡೆದರು. ಮಧ್ಯಾಹ್ನ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು.

ಮುಂಜಾನೆ ಭಕ್ತರು ಸುವರ್ಣ ನದಿಯಲ್ಲಿ ಮಿಂದು ಮಡಿಯುಟ್ಟು ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಿದರು. ಸುಮಂಗಲೆಯರು ದೇವಾಲಯದ ಸುತ್ತಲೂ ಬಣ್ಣದ ರಂಗೋಲಿ ಇಟ್ಟು ಸಂಭ್ರಮಿಸಿದರು. ಈ ಸಮಯದಲ್ಲಿ ದೇವರ ಬೆಳ್ಳಿ ದಂಡವನ್ನುಹೊತ್ತ ಭಕ್ತ ಪಡೆ ತೇರು ಸಾಗುವ ಮಾರ್ಗದಲ್ಲಿ ನೆರೆದರು. ಅರ್ಚಕರು ಸರ್ವಾಲಂಕೃತ ದೇವಿಯನ್ನು ರಥಾರೋಹಣ ಮಾಡುತ್ತಿದ್ದಂತೆ ಭಕ್ತರು ದೇವಿಯನ್ನು ಭಕ್ತಿಭಾವಗಳಿಂದ ಸ್ತುತಿಸಿದರು.

ಮಾಘ ಶುದ್ಧ ಪೂರ್ಣಿಮಾ ಪುಷ್ಯ ನಕ್ಷತ್ರದಲ್ಲಿ ತೇರಿಗೆ ಆಗಮಿಕರು ಚಾಲನೆ ನೀಡುತ್ತಿದ್ದಂತೆ ಮಂಗಳವಾದ್ಯದ ಸದ್ದು ಮೊಳಗಿತು. ಭಕ್ತರು ಹಣ್ಣುಕಾಯಿ ಪೂಜೆ ಹಾಗೂ ಮಂಗಳಾರತಿ ಬೆಳಗಿ ತೇರನ್ನು ಎಳೆದರು. ಮಹಿಳೆಯರು ಮತ್ತು ಮಕ್ಕಳು ಧೂಪ ದೀಪ ಬೆಳಗಿ ಅನ್ನ ಪ್ರಸಾದ ಸೇವಿಸಿ ಧನ್ಯತೆ ಮೆರೆದರು.

ADVERTISEMENT

ಸಂಜೆ ಆಗಮಿಕರು ಚಾಮುಂಡಿ ಮೂಲ ಮೂರ್ತಿಗೆ ಮಹಾ ಮಂಗಳಾರತಿ ಬೆಳಗಿದರು. ದಿನವಿಡೀ ದೇವಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಹೂ ಹಾರಗಳಿಂದ ಕಂಗೊಳಿಸುತ್ತಿದ್ದ ಬಂಗಾರ ವರ್ಣದ ದೇವಿಯನ್ನು ಕಣ್ತುಂಬಿಕೊಂಡರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಧೂಪ, ದೀಪ ಬೆಳಗಿ, ಊದಿನಕಡ್ಡಿ ಅರ್ಪಿಸಿ, ಹಣ್ಣು ಕಾಯಿ ಮಾಡಿಸಿ ದೇವರನ್ನು ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.