
ಯಳಂದೂರು: ತಾಲ್ಲೂಕಿನ ಸುತ್ತಮುತ್ತ ತುಂತುರು ಮಳೆ ಸುರಿಯುತ್ತಿರುವುದು ಹಾಗೂ ಮೋಡ ಕವಿದ ವಾತಾವರಣ ಇರುವುದು ಭತ್ತದ ಹುಲ್ಲು ಕಟ್ಟುವ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಈಚೆಗೆ ತಾಲ್ಲೂಕಿನಾದ್ಯಂತ ಅಕಾಲಿಕವಾಗಿ ಆಗಾಗ ಮಳೆ ಸುರಿಯುತ್ತಿರುವುದು ಭತ್ತದ ಕೊಯ್ಲು ಹಾಗೂ ಒಣ ಹುಲ್ಲಿನ ಸಂಗ್ರಹಕ್ಕೆ ತೊಡಕಾಗಿದೆ. ರೈತರು ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹಾಗೂ ಭತ್ತವನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.
ಈಗಾಗಲೇ ತಾಲ್ಲೂಕಿನಲ್ಲಿ ಶೇ 90ರಷ್ಟು ಭತ್ತದ ಕಟಾವು ಮುಗಿದೆ. ಕಟಾವು ಮಾಡಿಟ್ಟ ಭತ್ತಕ್ಕೆ ಹಾಗೂ ಒಣ ಮೇವಿಗೆ ಬೇಡಿಕೆ ಹೆಚ್ಚಾಗಿದೆ. ಹೊರ ಜಿಲ್ಲೆಗಳಿಂದಲೂ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ. ಒಣ ಹುಲ್ಲು ಖರೀದಿಸಲು ಜಾನುವಾರು ಸಾಕಾಣೆದಾರರು ಮುಗಿಬಿದ್ದಿದ್ದಾರೆ. ಭತ್ತ ಕಟಾವು ಮಾಡಿದ ತಕ್ಷಣ ರೈತರು ಯಂತ್ರಗಳ ನೆರವಿನಿಂದ ಒಣ ಮೇವನ್ನು ಪಿಂಡಿಗಳಾಗಿ ಸಿದ್ಧಪಡಿಸುತ್ತಿದ್ದು ತಕ್ಷಣ ಮಾರಾಟ ಮಾಡುತ್ತಿದ್ದಾರೆ. ಉತ್ತಮ ಬೆಲೆ ಮತ್ತು ಬೇಡಿಕೆಯ ಕಾರಣಕ್ಕೆ ಕೃಷಿಕರು ಭತ್ತದ ಒಕ್ಕಣೆ ಮುಗಿದ ಕೂಡಲೇ ಹುಲ್ಲು ಮಾರಾಟ ಮಾಡುತ್ತಿದ್ದಾರೆ.
ಮುಂಗಾರಿನಲ್ಲಿ ಕಾಲುವೆ ನೀರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ತಾಲ್ಲೂಕಿನ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿತ್ತು. ಉತ್ತಮ ಇಳುವರಿಯ ಜೊತೆಗೆ ಒಣ ಹುಲ್ಲಿನ ಉತ್ಪಾದನೆಯಲ್ಲೂ ಹೆಚ್ಚಳವಾಗಿದೆ. 1 ಎಕರೆಗೆ 40 ಕಂತೆಗಳು ಲಭ್ಯವಾಗುತ್ತಿದ್ದು, ಪ್ರತಿ ಪಿಂಡಿಗೆ ₹ 130 ರಿಂದ ₹ 140ರವರೆಗೆ ಮಾರಾಟವಾಗುತ್ತಿದೆ. 1 ರೋಲ್ ಕಟ್ಟಲು ₹ 40 ಬಾಡಿಗೆ ದರ ಇದ್ದು ಎಕರೆಗೆ ₹ 4,000 ದಿಂದ ₹ 5,000ದವರೆಗೂ ಒಣ ಹುಲ್ಲಿನಿಂದ ಸಿಗುತ್ತದೆ ಎನ್ನುತ್ತಾರೆ ಹಿಡುವಳಿದಾರ ಹೊನ್ನೂರು ಮಹದೇವ.
ಈ ವರ್ಷ ಜಾನುವಾರುಗಳ ಮೇವಿಗೆ ಉತ್ತಮ ಬೇಡಿಕೆ ಇದೆ. ದೀರ್ಘಾವಧಿಗೆ ಮೇವು ಸಂಗ್ರಹ ಮಾಡುವವರು ಮೊದಲ ಆಯ್ಕೆಯಾಗಿ ಒಣ ಹುಲ್ಲು ಪರಿಗಣಿಸುತ್ತಾರೆ. ಆಳುಗಳ ಕೊರತೆಯಿಂದ ಕೃಷಿಕರು ಯಂತ್ರಗಳನ್ನು ಬಳಸಿ ಹುಲ್ಲಿನ ಪಿಂಡಿ ಕಟ್ಟಿಸಿ ಸಂಗ್ರಹಿಸುತ್ತಾರೆ. ಸ್ಥಳೀಯ ರೈತರು ಮತ್ತು ಜಾನುವಾರು ಸಾಕಣೆದಾರರು ಮಾತ್ರ ಹುಲ್ಲಿನ ಮೆದೆಗೆ ಪೂರಕವಾದ ರೀತಿಯಲ್ಲಿ ಹುಲ್ಲನ್ನು ಜೋಪಿಡುತ್ತಾರೆ ಎನ್ನುತ್ತಾರೆ ರೈತರು.
ಚಂಡಮಾರುತದ ಪ್ರಭಾವದಿಂದ ಮಳೆ ಸುರಿಯುವ ನಿರೀಕ್ಷೆ ಮೂಡಿಸಿದ್ದು ಕೊಯ್ಲಾದ ಫಸಲನ್ನು ಮಾರಾಟ ಮಾಡಿ, ಸಂಭಾವ್ಯ ಬೆಲೆ ಇಳಿಕೆಯಿಂದ ತಪ್ಪಿಸಿಕೊಳ್ಳಲು ಕೃಷಿಕರು ಮುಂದಾಗಿದ್ದಾರೆ ಎಂದು ಕೆಸ್ತೂರು ಬೆಳೆಗಾರ ರಂಗಸ್ವಾಮಿ ಹೇಳಿದರು.
ಕೇರಳ ಮತ್ತು ತಮಿಳಿಗರ ಲಗ್ಗೆ: ಉತ್ತಮ ಧಾರಣೆ
ಈ ಬಾರಿ ಒಣ ಹುಲ್ಲಿಗೆ ಸ್ಥಳೀಯವಾಗಿ ಬೇಡಿಕೆ ಕುಸಿದಿದಿದ್ದರೂ ಕೇರಳ ಮತ್ತು ತಮಿಳುನಾಡು ಕೃಷಿಕರು ಭತ್ತ ಮತ್ತು ಹುಲ್ಲನ್ನು ಕೊಳ್ಳಲು ಲಗ್ಗೆ ಇಟ್ಟಿದ್ದಾರೆ. ಇದರಿಂದ ಬೇಸಾಯಗಾರರಿಗೆ ಭತ್ತ ಮತ್ತು ಮೇವಿನ ಉತ್ಪನ್ನಗಳಿಂದ ಉತ್ತಮ ಧಾರಣೆ ಕೈಸೇರುವಂತಾಗಿದೆ. ಮಾಗಿ ಉಳುಮೆ ಮಾಡುವುದು ಸುಲಭವಾಗಿದೆ ಎಂದು ರೈತ ಗುಂಬಳ್ಳಿ ಮಹೇಶ್ ಹೇಳಿದರು.
ಕಟಾವು ಮುಂದೂಡಲು ಸಲಹೆ
ತಾಲ್ಲೂಕಿನಲ್ಲಿ ಅಕಾಲಿಕ ಮಳೆ ಕಾಣಿಸಿಕೊಂಡಿರುವುದರಿಂದ ಭತ್ತ ಕಟಾವು ಮಾಡುವವರು ಕೆಲವು ದಿನ ಕೃಷಿ ಚಟುವಟಿಕೆ ಮುಂದೂಡಿದರೆ ಒಳಿತು. ಹೆಚ್ಚಿನ ಮಳೆ ಸುರಿದರೆ ಭತ್ತ ಹಾಗೂ ಹುಲ್ಲಿನ ಗುಣಮಟ್ಟ ಕುಸಿಯುವುದರಿಂದ ಬೆಲೆಯೂ ಕಡಿಮೆಯಾಗಲಿದೆ. ಹಾಗಾಗಿ ಭತ್ತ ಸಂಗ್ರಹ ಮಾಡಿರುವವರು ಟಾರ್ಪಾಲ್ ಬಳಸಿ ಬೆಳೆ ರಕ್ಷಿಸಿಕೊಳ್ಳಬೇಕು ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.