ADVERTISEMENT

ಉಚಿತ ಹೆಲ್ಮೆಟ್, ಹೂವು, ಲಾಡು ನೀಡಿದರು!

ಸಂಚಾರ ನಿಯಮಗಳ ಅರಿವು ಮೂಡಿಸಲು ವಿನೂತನ ಕಾರ್ಯಕ್ರಮ, ಅಡುಗೆ ಭಟ್ಟ ಶಿವರಾಮು ಅವರ ಸಮಾಜಮುಖಿ ಮಾದರಿ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 15:20 IST
Last Updated 6 ಡಿಸೆಂಬರ್ 2018, 15:20 IST
ಜಿಲ್ಲಾಧಿಕಾರಿ, ಎಸ್ಪಿ ಅವರ ಸಮ್ಮುಖದಲ್ಲಿ ಶಿವರಾಮು ಅವರು ಸವಾರರಿಗೆ ಉಚಿತ ಹೆಲ್ಮೆಟ್ ತೊಡಿಸಿದರು
ಜಿಲ್ಲಾಧಿಕಾರಿ, ಎಸ್ಪಿ ಅವರ ಸಮ್ಮುಖದಲ್ಲಿ ಶಿವರಾಮು ಅವರು ಸವಾರರಿಗೆ ಉಚಿತ ಹೆಲ್ಮೆಟ್ ತೊಡಿಸಿದರು   

ಚಿಕ್ಕಬಳ್ಳಾಪುರ: ನಗರದಲ್ಲಿ ಗುರುವಾರ ಹೆಲ್ಮೆಟ್‌ ಧರಿಸದೆ ಬೈಕ್ ಏರಿ ಹೊರಟಿದ್ದ ಸವಾರರು ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಜತೆಗೆ ನಿಂತಿದ್ದ ಸಂಚಾರ ಪೊಲೀಸರ ದಂಡು ಕ್ಷಣಕಾಲ ಮುಂದೆ ಹೋಗಲು ಹಿಂದೇಟು ಹಾಕುತ್ತಿದ್ದರು.


ಸಮೀಪಕ್ಕೆ ಹೋಗುತ್ತಿದ್ದಂತೆ ಜಿಲ್ಲಾಧಿಕಾರಿ, ಎಸ್ಪಿ ಅವರೇ ಖುದ್ದಾಗಿ ಮುಂದೆ ಬಂದು ತಲೆಗೆ ಹೊಸ ಹೆಲ್ಮೆಟ್ ತೊಡಿಸಿ, ಕೈಗೆ ಗುಲಾಬಿ ಹೂವು, ಲಾಡು ನೀಡುತ್ತಿದ್ದಂತೆ ತಮ್ಮ ತಪ್ಪಿನ ಅರಿವು ಮಾಡಿಕೊಂಡ ಸವಾರರು ಇನ್ನು ಮುಂದೆ ತಪ್ಪದೆ ಹೆಲ್ಮೆಟ್ ಧರಿಸುವುದಾಗಿ ವಚನ ನೀಡಿ ಮುಂದೆ ಸಾಗಿದರು.


‘ಅಪರಾಧ ತಡೆ ಮಾಸಾಚರಣೆ’ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಉಚಿತ ಹೆಲ್ಮೆಟ್ ಕೊಟ್ಟವರು ಜಿಲ್ಲಾಧಿಕಾರಿ, ಎಸ್ಪಿ, ಸಂಚಾರ ಪೊಲೀಸರಲ್ಲ, ಬದಲು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಗರದ ನಿವಾಸಿ, ಅಡುಗೆ ಭಟ್ಟ ಶಿವರಾಮು ಅವರು.

ADVERTISEMENT


ನಗರದ ಎಂ.ಜಿ.ರಸ್ತೆಯಲ್ಲಿ ಪತ್ನಿ ಮತ್ತು ಮಗನಿಗೆ ಪ್ರತ್ಯೇಕ ಹೊಟೇಲ್‌ಗಳನ್ನು ಹಾಕಿಕೊಟ್ಟಿರುವ ಶಿವರಾಮು ಅವರು ಆ ಎರಡೂ ಹೊಟೇಲ್‌ಗಳಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡಿ, ಕೂಲಿ ಪಡೆದು ಅದನ್ನು ಇಂತಹ ಸಮಾಜಮುಖಿ ಕೆಲಸಗಳಿಗೆ ಬಳಸುತ್ತಿದ್ದಾರೆ. ಗುರುವಾರ ನಗರದಲ್ಲಿ ಅವರು ತಲಾ ₹400 ಬೆಲೆ ಬಾಳುವ ₹20 ಸಾವಿರ ಮೌಲ್ಯದ 50 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದರು. ನವೆಂಬರ್ 3 ರಂದು ಸಹ ಶಿವರಾಮು ಅವರು ಸವಾರರಿಗೆ 30 ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿದ್ದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ‘ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರ ಪ್ರಾಣ ಹಾನಿ ತಪ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಳೆದ ನವೆಂಬರ್ 1 ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೂ ವಾಹನ ಸವಾರರು ಆ ಬಗ್ಗೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದಿರುವುದು ಬೇಸರದ ಸಂಗತಿ’ ಎಂದು ಹೇಳಿದರು.


ಎಸ್ಪಿ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದ ನಂತರ ಈವರೆಗೆ ಸುಮಾರು 21 ಸಾವಿರ ಪ್ರಕರಣ ದಾಖಲಿಸಲಾಗಿದೆ. ಆದರೂ ನಗರ ವ್ಯಾಪ್ತಿಯಲ್ಲಿ ಶೇ 40 ರಿಂದ -45 ರಷ್ಟು ಸವಾರರು ಮಾತ್ರ ಹೆಲ್ಮೆಟ್ ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸುವ ಮೂಲಕ ಸಂಚಾರ ನಿಯಮ ಪಾಲಿಸಬೇಕು’ ಎಂದು ತಿಳಿಸಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಡಿವೈಎಸ್‍ಪಿ ಪ್ರಭುಶಂಕರ್, ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್, ನಗರ ಪೊಲೀಸ್ ಠಾಣೆ ಎಸ್‌ಐ ವರುಣ್ ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.