ADVERTISEMENT

ನೀರಿನ ಕೊರತೆ: ಉತ್ಪಾದನೆ ಕುಸಿತ, ಜನಸಾಮಾನ್ಯರಿಗೆ ‘ಕಹಿ’ಯಾಗುತ್ತಿರುವ ತರಕಾರಿಗಳು

ವಾರದಿಂದ ವಾರಕ್ಕೆ ಗಗನಮುಖಿಯಾಗುತ್ತಿರುವ ತರಕಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 10:36 IST
Last Updated 10 ಮೇ 2019, 10:36 IST
ನಗರದ ಸಂತೆ ಮಾರುಕಟ್ಟೆಯಲ್ಲಿ ಶುಕ್ರವಾರ ಗ್ರಾಹಕರೊಬ್ಬರು ತರಕಾರಿ ಖರೀದಿಸಿದರು
ನಗರದ ಸಂತೆ ಮಾರುಕಟ್ಟೆಯಲ್ಲಿ ಶುಕ್ರವಾರ ಗ್ರಾಹಕರೊಬ್ಬರು ತರಕಾರಿ ಖರೀದಿಸಿದರು   

ಚಿಕ್ಕಬಳ್ಳಾಪುರ: ಮಳೆ ಕೊರತೆ, ಬಿಸಿಲಿನ ಬೇಗೆಯ ಹೆಚ್ಚಳ ಹಾಗೂ ಅಂತರ್ಜಲ ಮಟ್ಟದ ಕುಸಿತದಿಂದ ಜಿಲ್ಲೆಯಲ್ಲಿ ಕೃಷಿಗೆ ನೀರಿನ ಕೊರತೆ ಎದುರಾಗಿದ್ದು, ಇದರಿಂದಾಗಿ ಸದ್ಯ ತರಕಾರಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು ಪರಿಣಾಮ, ಸ್ಥಳೀಯ ತರಕಾರಿ ಆವಕ ಕುಸಿತಗೊಂಡು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಜನಸಾಮಾನ್ಯರ ನೆಮ್ಮದಿ ಕಸಿಯುತ್ತಿದೆ.

ಮದುವೆ ಮತ್ತಿತರ ಶುಭಕಾರ್ಯಗಳ ಹೆಚ್ಚಳ ಮತ್ತು ರಂಜಾನ್ ಮಾಸದ ಕಾರಣಕ್ಕೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆಯ ಪ್ರಮಾಣ ಕಡಿಮೆ ಇದೆ. ಇದರಿಂದ ಸಹಜವಾಗಿ ಬೆಲೆ ಹೆಚ್ಚಳವಾಗಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಗಗನಮುಖಿಯಾಗುತ್ತಿದೆ.

ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಜನಪ್ರಿಯ ತರಕಾರಿಗಳಲ್ಲಿ ಒಂದಾದ ಹುರಳಿಕಾಯಿ (ಬೀನ್ಸ್‌) ಕಳೆದ ವಾರ ಕೆ.ಜಿ.ಗೆ ₹90 ಇತ್ತು. ಈ ವಾರ ₹120ಕ್ಕೆ ಜಿಗಿದಿದೆ. ಬಟಾಣಿ ₹150 ರಿಂದ ₹160ಕ್ಕೆ ಹೆಚ್ಚಳವಾಗಿದೆ. ಹಸಿರು ಮೆಣಸಿಕಾಯಿ ₹ 60ರಿಂದ ₹ 100ಕ್ಕೆ ಜಿಗಿದಿದೆ. ಕ್ಯಾರೆಟ್ ₹ 35ರಿಂದ 40ಕ್ಕೆ, ಟಮೊಟೊ ₹40ರಿಂದ 50ಕ್ಕೆ ಹೆಚ್ಚಿದೆ. ಉಳಿದಂತೆ ಬೆಂಡೆಕಾಯಿ, ಹೂ ಕೋಸು, ಮೂಲಂಗಿ, ಆಲೂಗಡ್ಡೆ, ಉಳ್ಳಾಗಡ್ಡಿ ಬೆಲೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆ.

ADVERTISEMENT

ಬೆಲೆಗಳು ದುಬಾರಿಯಾಗಲು ಕಾರಣವಾಗಿದೆ. ಹೆಚ್ಚಿದ ಬೆಲೆಗಳ ಪರಿಣಾಮ ತರಕಾರಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ವ್ಯಾಪಾರಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರು ಬೀನ್ಸ್, ಬಟಾಣಿ, ಮೆಣಸಿನಕಾಯಿ ಖರೀದಿಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

‘ನೀರಿನ ಕೊರತೆಯಿಂದಾಗಿ ನಮ್ಮ ಜಿಲ್ಲೆಯಲ್ಲಿ ತರಕಾರಿ ಬೆಳೆಯುವ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪರಿಣಾಮ, ನಮ್ಮ ಮಾರುಕಟ್ಟೆಗೆ ಮೆಣಸಿನ ಕಾಯಿ, ನುಗ್ಗೆಕಾಯಿ, ಬಟಾಣಿ, ಬೀನ್ಸ್ ಸೇರಿದಂತೆ ಅನೇಕ ತರಕಾರಿಗಳು ನೆರೆಯ ಆಂಧ್ರಪ್ರದೇಶದಿಂದ ಆವಕವಾಗುತ್ತಿದೆ. ಹೀಗಾಗಿ ಸಹಜವಾಗಿಯೇ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ’ ಎಂದು ವರ್ತಕ ಅಂಬರೀಶ್ ತಿಳಿಸಿದರು.

‘ತರಕಾರಿ ಬೆಲೆ ಜಾಸ್ತಿಯಾಗಿರುವ ಕಾರಣ ಹಿಂದೆಲ್ಲ ಕೆ.ಜಿಗಟ್ಟಲೇ ಖರೀದಿಸುತ್ತಿದ್ದವರು ಈಗ ಅರ್ಧ, ಕಾಲು ಕೆ.ಜಿಗೆ ಸಮಾಧಾನಪಟ್ಟುಕೊಳ್ಳುವ ಸ್ಥಿತಿ ಬಂದಿದೆ. ದುರಂತವೆಂದರೆ ತರಕಾರಿ ಬೆಲೆ ಹೆಚ್ಚಳವಾದರೂ ಅದರ ಲಾಭ ಬೆಳೆದ ರೈತರಿಗೆ ದೊರೆಯುವುದು ಅಲ್ಪ, ದಲ್ಲಾಳಿಗಳೇ ಜನರ ಸುಲಿಗೆ ಮಾಡುವುದು ದುರದೃಷ್ಟಕರ’ ಎಂದು ಗ್ರಾಹಕ ಚನ್ನಕೃಷ್ಣಪ್ಪ ಹೇಳಿದರು.

‘ಶುಭ ಸಮಾರಂಭಗಳ ದಿನಗಳನ್ನು ನೋಡಿಕೊಂಡೇ ಗ್ರಾಹಕರಿಗೆ ಬರೆ ಎಳೆಯುವುದು ಹೊಸತಲ್ಲ. ತರಕಾರಿ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಕೊಳ್ಳಲು ಭಯವಾಗುತ್ತಿದೆ. ಚೌಕಾಶಿಗೆ ಮುಂದಾದರೆ ವ್ಯಾಪಾರಿಗಳು ದುರುಗುಟ್ಟಿ ನೋಡುತ್ತಾರೆ. ಹೊಟ್ಟೆ ಕೇಳಬೇಕಲ್ಲ ಹೀಗಾಗಿ ಅನಿವಾರ್ಯವಾಗಿ ಸ್ವಲ್ಪ ಸ್ವಲ್ಪ ತರಕಾರಿ ಖರೀದಿಸುತ್ತಿದ್ದೇವೆ’ ಎಂದು ನಗರದ ನಿವಾಸಿ ಸುನಿತಾ ತಿಳಿಸಿದರು.

‘ಬೀನ್ಸ್ ಇಲ್ಲದೆ ಪಲಾವ್ ಮಾಡಿದರೆ ಚೆನ್ನಾಗಿರುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆ ಕೆ.ಜಿಗೆ ₹120ಕ್ಕೆ ಏರಿದೆ. ಇವತ್ತು ತರಕಾರಿ ಪಲಾವ್ ಮಾಡಬೇಕಾದರೆ ₨300 ತರಕಾರಿಗೆ ಸಾಕಾಗುವುದಿಲ್ಲ. ಹೀಗಾಗಿ, ಕಳೆದ ಒಂದು ತಿಂಗಳಿಂದ ನಾವು ಪಲಾವ್ ಮಾಡುವುದನ್ನೇ ಬಿಟ್ಟಿದ್ದೇವೆ’ ಎಂದು ಕೆಳಗಿನ ತೋಟ ಪ್ರದೇಶದ ಟಿಫನ್‌ ಸೇಂಟರ್‌ವೊಂದರ ಮಾಲೀಕರು ಹೇಳಿದರು.


ವಾರದಲ್ಲಿ ಬದಲಾದ ತರಕಾರಿ ಬೆಲೆ (1ಕೆ.ಜಿಗೆ, ₹)

ತರಕಾರಿ ಕಳೆದ ವಾರ ಪ್ರಸ್ತುತ
ಬಟಾಣಿ 150 160
ಬೀನ್ಸ್ 90 120
ಟಮೊಟೊ 30 40
ಕ್ಯಾರೆಟ್‌ 35 40
ಈರುಳ್ಳಿ 20 25
ಬದನೆಕಾಯಿ 20 30
ಹೂ ಕೋಸು 25 30
ಬಜ್ಜಿ ಮೆಣಸಿನಕಾಯಿ 50 60
ಆಲೂಗಡ್ಡೆ 17 20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.