ADVERTISEMENT

ವೀರಪ್ಪ ಮೊಯಿಲಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 6:49 IST
Last Updated 21 ಮಾರ್ಚ್ 2014, 6:49 IST

ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ವೀರಪ್ಪ ಮೊಯಿಲಿ ಗುರುವಾರ ನಾಮಪತ್ರ ಸಲ್ಲಿಸುವ ಮೂಲಕ ಇಲ್ಲಿನ ಚುನಾವಣಾ ಕಣ ಚುರುಕು­ಗೊಂಡಿತು.

ಕ್ಷೇತ್ರದ ಕಾಂಗ್ರೆಸ್‌ ಶಾಸಕರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತ­ರೊಡನೆ ಕೆಲ ಹೊತ್ತಿನ­ವರೆಗೆ ಮಾತು­ಕತೆ ನಡೆಸಿದ ಬಳಿಕ ಜಿಲ್ಲಾಡಳಿತ ಭವನದ ಚುನಾ­ವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ 9.30ರ ಸುಮಾರಿಗೆ ಚಿಕ್ಕಬಳ್ಳಾಪುರಕ್ಕೆ ಆಗಮಿ­ಸಿದ ಅವರು ತಾಲ್ಲೂಕಿನ ನಂದಿ ಗ್ರಾಮಕ್ಕೆ ತೆರಳಿ ಭೋಗನಂದೀಶ್ವರ ದೇಗುಲದಲ್ಲಿ ವಿಶೆಷ ಪೂಜೆ ಪೂಜೆ ಸಲ್ಲಿಸಿದರು.  ನಂತರ ದೇವಾಲಯದಲ್ಲಿ ನೆರೆ­ದಿದ್ದ ಭಕ್ತಾದಿಗಳು ಮತ್ತು ಕಾರ್ಯ­ಕರ್ತರೊಂದಿಗೆ ಮಾತನಾಡಿ­ದರು. ಅಲ್ಲಿಂದ ಸ್ವಲ್ಪ ಹೊತ್ತಿನಲ್ಲೇ ನಿರ್ಗ­ಮಿಸಿದ ಅವರು 11 ಗಂಟೆ ಸುಮಾರಿಗೆ ಜಿಲ್ಲಾಡಳಿತ ಭವನ ತಲುಪಿದರು.

ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಮಧ್ಯೆಯೇ ನುಸುಳಿ­ಕೊಂಡು ಚುನಾವಣಾಧಿಕಾರಿ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಕೆ.­ಸುಧಾ­ಕರ್,  ವಿಧಾನಸಭೆ ಉಪಾಧ್ಯಕ್ಷ ಎನ್‌.ಎಚ್.ಶಿವಶಂಕರ ರೆಡ್ಡಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ದೊಡ್ಡಬಳ್ಳಾಪುರ ಶಾಸಕ  ವೆಂಕಟರಮಣಯ್ಯ ಇದ್ದರು.

ನಂತರ ಜಿಲ್ಲಾಡಳಿತ ಭವನದ ಎದುರಿನ ಹೋಟೆಲ್‌ವೊಂದರಲ್ಲಿ ಪತ್ರಿಕಾ­­­­ಗೋಷ್ಠಿ ನಡೆಸುವುದಾಗಿ ಮೊಯಿಲಿ ಹೇಳಿದರಾದರೂ ಸ್ಥಳಾವ­ಕಾಶದ ಕೊರತೆ ಮತ್ತು ಕಾರ್ಯಕರ್ತರ ದಟ್ಟಣೆಯಿಂದ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ  ವಾಹನವೊಂದರ ಮೇಲೆಯೇ ನಿಂತು ಅಭ್ಯರ್ಥಿಯಾಗಿ ಚುನಾವಣೆಯ ಮೊದಲ  ಭಾಷಣ ಮಾಡಿದರು.

ರಸ್ತೆ ಬದಿ ನಿಂತಿದ್ದ ಕಾರ್ಯಕರ್ತರು ಮೊಯಿಲಿ ಅವರನ್ನು ನೋಡುವ ಕಾತರದಲ್ಲಿದ್ದರು. ಸುಮಾರು ಅರ್ಧ ಗಂಟೆ ಕಾಲ ಭಾಷಣ ಮಾಡಿದ ಅವರು ಮತದಾ­ರರಿಗೆ ಸಾವಿರ ಬಾರಿ ತಲೆ ಬಾಗಿದರೂ ಕಡಿಮೆಯೇ ಎಂದು ಹೇಳಿದಾಗ  ಕಾರ್ಯ­ಕರ್ತರು ಚಪ್ಪಾಳೆ ತಟ್ಟಿ, ಶಿಳ್ಳೆಗಳನ್ನು ಹಾಕಿದರು. ದೀರ್ಘ ಕಾಲದವರೆಗೆ ಸಂಚಾರ ವ್ಯವಸ್ಥೆ ಸುಗಮವಾಗಿರಲಿಲ್ಲ.

‘ಸಾವಿರ ಬಾರಿ ತಲೆಬಾಗುವೆ’
ಚಿಕ್ಕಬಳ್ಳಾಪುರ
: ‘ನೀವು ತೋರಿಸಿದ ಪ್ರೀತಿ, ನಂಬಿಕೆ, ವಿಶ್ವಾಸ ಮತ್ತು ಆಶೀರ್ವಾದ ಯಾವುದೇ ಕಾರಣಕ್ಕೂ ಮರೆಯಲು ಆಗೊಲ್ಲ. ನಿಮಗೆ ಲಕ್ಷ ಲಕ್ಷ ಪ್ರಣಾಮಗಳು’ ಎಂದು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ತಿಳಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಗುರುವಾರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮಾತನಾಡಿ, ನನ್ನ ಮೇಲೆ ನಂಬಿಕೆಯಿಟ್ಟು ಗೆಲ್ಲಿಸಿರುವ ನಿಮ್ಮ ಋಣವನ್ನು ತೀರಿಸಲಾಗದು. ನಿಮ್ಮ ವಿಶ್ವಾಸಕ್ಕೆ ಪ್ರತಿಯಾಗಿ ಶ್ರಮಿಸುತ್ತೇನೆ. ಬಯಲುಸೀಮೆಗಳ ನೀರಿನ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ತಿಳಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಡಾ. ಕೆ.ಸುಧಾಕರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಎಂ.ಟಿ.ಬಿ.ನಾಗರಾಜ್, ವೆಂಕಟ­ರಮಣಯ್ಯ, ಮುಖಂಡರಾದ ಕೆ.ವಿ.ನವೀನ್‌ ಕಿರಣ್‌, ಯಲುವಹಳ್ಳಿ ಎನ್‌.ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

*ಕಾರಿಗಾಗಿ ಸಚಿವರ ಸಾಲ

*ಚುನಾವಣಾಧಿಕಾರಿ ಕಚೇರಿಯಲ್ಲೇ ನಿಯಮ ಉಲ್ಲಂಘನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT