ADVERTISEMENT

ಚಿಂತಾಮಣಿ | ಉಡುಗೊರೆ ಆಮಿಷವೊಡ್ಡಿ ₹2.93 ಲಕ್ಷ ಮೋಸ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 13:22 IST
Last Updated 10 ಆಗಸ್ಟ್ 2023, 13:22 IST
ವಂಚನೆ
ವಂಚನೆ   

ಚಿಂತಾಮಣಿ: ಉಡುಗೊರೆಗಳನ್ನು ನೀಡುವ ಆಮಿಷವೊಡ್ಡಿ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಗೆ ₹2.93 ಲಕ್ಷ ವಂಚನೆ ಮಾಡಿದ್ದಾರೆ. ಈ ಕುರಿತು ವಂಚನೆಗೊಳಗಾದ ವ್ಯಕ್ತಿಯು ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಅಕ್ರಂ ಹಣ ಕಳೆದುಕೊಂಡವರು. ಇವರು ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಎಟಿಎಂ, ಮೊಬೈಲ್ ಮೂಲಕ ಫೋನ್ ಪೇ, ಯುಪಿಐ ಅಪ್ಲಿಕೇಷನ್‌ನಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು.

ಆಗಸ್ಟ್ ಆರರಂದು ರಾತ್ರಿ ಫೇಸ್‌ಬುಕ್ ನೋಡುತ್ತಿದ್ದಾಗ ಜಾಮ್ ಜಾಮ್ ದುಬೈ ಶಾಪ್ ಹೆಸರಿನ ಫೇಸ್‌ಬುಕ್ ಪೇಜ್ ತೆರೆದುಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ನಂಬರ್‌ಗೆ ಆಫರ್ ಬಂದಿದ್ದು ಐ–ಫೋನ್ ಮತ್ತು ಇತರೆ ವಸ್ತುಗಳು ಉಡುಗೊರೆಯಾಗಿ ಬಂದಿವೆ. ಕೊರಿಯರ್‌ನಿಂದ ಕಾಲ್ ಬರುತ್ತದೆ ಎಂದು ತಿಳಿಸಿ ₹4,000 ಯುಪಿಐ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಾವು ಕಳುಹಿಸುವ ಉಡುಗೊರೆಗೆ ವಿವಿಧ ಶುಲ್ಕಗಳನ್ನು ಪಾವತಿಸಬೇಕು ಎಂಬ ನೆಪದಲ್ಲಿ ಮತ್ತೆ ₹48,000 ಅನ್ನು ಸೈಬರ್ ವಂಚಕರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದಾರೆ. ಅವರಿಗೆ ₹2.45 ಕಟ್ಟಿದರೆ ಮಾತ್ರ ವಿಮಾನ ನಿಲ್ದಾಣದಿಂದ ಹೊರ ಬಿಡುತ್ತಾರೆ. ಇಲ್ಲದಿದ್ದರೆ, ಕಟ್ಟಿರುವ ಹಣವೂ ವ್ಯರ್ಥವಾಗುತ್ತದೆ ಎಂದು ನಂಬಿಸಿದ್ದರು. 

ಇದನ್ನು ನಂಬಿದ ನಾನು ಮುರುಗಮಲ್ಲ ಕೆನರಾ ಬ್ಯಾಂಕ್‌ ಶಾಖೆಯಿಂದ ಮೂರು ಸಲ ಒಟ್ಟಾರೆ ₹2.45 ಲಕ್ಷ ಆರೋಪಿಗಳು ಹೇಳಿದ ಖಾತೆಗೆ ಹಾಕಿದ್ದೇನೆ. ಹೀಗೆ ಒಟ್ಟಾರೆ ₹2.93 ಲಕ್ಷ ವಂಚನೆ ಮಾಡಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.