ಚಿಂತಾಮಣಿ: ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಡಗುಂಟೆ ಸಮೀಪ ಗುರುವಾರ ಸಂಜೆ ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಲಕಲನೇರ್ಪು ಗ್ರಾಮದ ಬಾಲಾಜಿ (32), ಅವರ ಮಾವ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಗ್ರಾಮದ ವೆಂಕಟೇಶಪ್ಪ (45), ಮಗ ಆರ್ಯ (4), ಸಂಬಂಧಿಕ ಕೊತ್ತವುಡ್ಯ ಗ್ರಾಮದ ಹರೀಶ್ (11) ಮೃತರು.
ಬಾಲಾಜಿ ಪುತ್ರಿ ಶಿವಾನಿ (8) ಗಾಯಗೊಂಡಿದ್ದು ಬುರುಡಗುಂಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಂತಾಮಣಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ.
ಚಿಕಲನೇರ್ಪು ಗ್ರಾಮದ ಬಾಲಾಗಿ ಮತ್ತು ಮಕ್ಕಳು ಸೇರಿ 5 ಜನರು ಪಲ್ಸರ್ ಬೈಕ್ ನಲ್ಲಿ ಚಿಲಕಲನೇರ್ಪು ನಿಂದ ಬುರುಡಗುಂಟೆ-ಕೋರ್ಲಪರ್ತಿ ಮಾರ್ಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ನಡೆಯಲಿದ್ದ ವಿವಾಹಕ್ಕೆ ತೆರಳುತ್ತಿದ್ದರು.
ಬೈಕ್ ಬುರುಡಗುಂಟೆ ಸಮೀಪ ಸಾಗುವಾಗ ಎದುರಿನಿಂದ ಬಂದ ನಗರದ ಶಾಲಾ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ.
ಶಾಲಾ ವಾಹನದ ಬಂಪರ್‌ಗೆ ಡಿಕ್ಕಿಯಾಗಿ ಬೈಕ್ ಎರಡು ತುಂಡಾಗಿದೆ. ವಾಹನದ ಬಂಪರ್ ಜಖಂಗೊಂಡಿದೆ. ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿದ್ದವು. ಅಂಗಾಂಗಗಳು ತುಂಡು ತುಂಡಾಗಿ ರಕ್ತಸಿಕ್ತವಾಗಿದ್ದವು.
ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಮೃತ ದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.