ಚಿಂತಾಮಣಿ: ತಾಲ್ಲೂಕಿನ 18 ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಅಪೌಷ್ಟಿಕತೆಯನ್ನು ತಡೆಗಟ್ಟುವುದು ಹಾಗೂ ಕೂಸುಗಳ ಸಾವಿಗೆ ಕಡಿವಾಣ ಹಾಕುವ ಸಲುವಾಗಿ ರೂಪಿಸಿ ಅನುಷ್ಠಾನಕ್ಕೆ ತಂದಿರುವ ಐಸಿಡಿಎಸ್ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಇನ್ನೂ 232 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿಲ್ಲ.
ತಾಲ್ಲೂಕಿನಲ್ಲಿ 473 ಅಂಗನವಾಡಿ ಕೇಂದ್ರಗಳಿವೆ. 241 ಕೇಂದ್ರ ಸ್ವಂತ ಕಟ್ಟಡಗಳಲ್ಲಿ, 77 ಬಾಡಿಗೆ ಕಟ್ಟಡಗಳಲ್ಲಿ, 42 ಕೇಂದ್ರಗಳು ಸಮುದಾಯ ಕೇಂದ್ರಗಳಲ್ಲಿ, 82 ಕೇಂದ್ರಗಳು ಶಾಲೆಗಳಲ್ಲಿ, 4 ಪಂಚಾಯಿತಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಬಹುತೇಕ ಕಟ್ಟಡಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಕ್ಕೆ ಮಕ್ಕಳನ್ನು ಹೊರಗಡೆ ಕಳುಹಿಸುತ್ತಾರೆ. ಹೊರಗಡೆಯಿಂದ ನೀರನ್ನು ತರಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅವಲತ್ತುಕೊಳ್ಳುತ್ತಾರೆ.
ಕಳೆದ ವರ್ಷ ಮಂಜೂರಾಗಿದ್ದ 15 ಕೇಂದ್ರಗಳ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ತಾಲ್ಲೂಕಿನಲ್ಲಿ 14 ಕಾರ್ಯಕರ್ತೆಯರ ಹಾಗೂ 63 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಅರ್ಜಿ ಆಹ್ವಾನಿಸಿದ್ದು ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸರ್ಕಾರದ ನಿಯಮದ ಪ್ರಕಾರ ಒಂದು ಅಂಗನವಾಡಿ ಕೇಂದ್ರ 30x40 ಅಡಿ ವಿಸ್ತೀರ್ಣದ ಜಾಗದಲ್ಲಿರಬೇಕು. ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಾಂಪೌಂಡ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಸುಸಜ್ಜಿತ ಅಡುಗೆ ಕೋಣೆ, ಪ್ರತ್ಯೇಕ ದಾಸ್ತಾನು ಕೊಠಡಿ, ಶೌಚಾಲಯದ ವ್ಯವಸ್ಥೆ ಇರಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆಕರ್ಷಿಸುವಂತಹ ವಾತಾವರಣ ಅಗತ್ಯ. ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಲಿಕಾ ವಾತಾವರಣವಿಲ್ಲ.
ಅನೇಕ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿರುವ ಒಂದೇ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳು ನಲಿದಾಡುವ ಕೇಂದ್ರಗಳು ಸುಣ್ಣ ಬಣ್ಣ ಕಂಡು ಅನೇಕ ವರ್ಷಗಳಾಗಿವೆ. ಇಂತಹ ಕೇಂದ್ರಗಳಲ್ಲಿ ಆಹಾರ ಧಾನ್ಯ, ಪುಸ್ತಕ, ದಾಖಲೆಗಳನ್ನು ಸಂರಕ್ಷಿಸುವುದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸವಾಲಾಗಿದೆ.
ಒಂದು ಮೂಲೆಯಲ್ಲಿ ಮಕ್ಕಳಿಗೆ ಆಹಾರ ತಯಾರಿಸಲಾಗುತ್ತದೆ. ಮತ್ತೊಂದು ಮೂಲೆಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಇರುತ್ತದೆ. ಇನ್ನುಳಿದ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಕಲಿಕೆ ಪ್ರಕ್ರಿಯೆ ನಡೆಯುತ್ತದೆ. ಬಹುತೇಕ ಕೇಂದ್ರಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಕಲುಷಿತ ವಾತಾವರಣ, ನಾಮಕಾವಸ್ಥೆ ಕಿಟಕಿ ಬಾಗಿಲು, ಶುದ್ಧ ಗಾಳಿ, ಬೆಳಕು ಇಲ್ಲದಿರುವ ಉಸಿರುಗಟ್ಟಿಸುವ ಪರಿಸರದಲ್ಲಿ ಚಿಣ್ಣರು ಬಾಲ್ಯ ಕಳೆಯುವಂತಾಗಿದೆ.
ಗ್ರಾಮೀಣ ಭಾಗಗಳಲ್ಲಿ ಕೇಂದ್ರಗಳನ್ನು ನಡೆಸಲು ಅನುಕೂಲವಾಗುವ ಕಟ್ಟಡಗಳು ಸಿಗುವುದಿಲ್ಲ. ಶಾಲೆ, ದೇವಸ್ಥಾನ, ಸಮುದಾಯ ಭವನ ಹಾಗೂ ಬಾಡಿಕೆ ಕಟ್ಟಡಗಳಲ್ಲಿ ಒಂದೇ ಕೊಠಡಿಯಲ್ಲಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ತುಂಬಾ ಶಿಥಿಲಗೊಂಡಿರುವ ಹಳೆಯ ಕಟ್ಟಡಗಳು ಇವೆ. ಇದೇ ಕಾರಣದಿಂದ ಮಾತೃವಂದನಾ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಕೇಂದ್ರಗಳಿಗೆ ಆಗಮಿಸಿ ಊಟ ಮಾಡಬೇಕು ಎಂಬ ಆದೇಶ ವಿಫಲವಾಯಿತು. ಬೆರಳೆಣಿಕೆಯಷ್ಟು ಕೇಂದ್ರಗಳನ್ನು ಹೊರತುಪಡಿಸಿ ಉಳಿದಕಡೆ ಉತ್ತಮ ವಾತಾವರಣ ಕಾಣುತ್ತಿಲ್ಲ ಎಂದು ಫಲಾನುಭವಿಗಳು ದೂರುತ್ತಾರೆ.
ತಾಲ್ಲೂಕಿನಲ್ಲಿ ಒಂದು ವರ್ಷದ ಒಳಗಿನ 1761, 1 ರಿಂದ 2 ವರ್ಷದೊಳಗಿನ 3340, 2 ರಿಂದ 3 ವರ್ಷದೊಳಗಿನ 3060, 3 ರಿಂದ 5 ವರ್ಷದೊಳಗಿನ 4349 ಹಾಗೂ 5 ರಿಂದ 6 ವರ್ಷದೊಳಗಿನ 364 ಮಕ್ಕಳಿದ್ದಾರೆ. 1660 ಗರ್ಭಿಣಿಯರು, 1302 ಬಾಣಂತಿಯರು ಹಾಗೂ 443 ಕಿಶೋರಿಯರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಶಿಶು ಅಬಿವೃದ್ಧಿ ಯೋಜನಾಧಿಕಾರಿ ಮಹೇಶ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಕ್ಕಳನ್ನು ಕ್ರಿಯಾಶೀಲ ಚಟುವಟಿಕೆಯೊಂದಿಗೆ ಇಡುವುದು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ. ಮಕ್ಕಳಿಗೆ ಬೆಳಿಗ್ಗೆ 10 ಗಂಟೆಗೆ ಹಾಲು, 11 ಕ್ಕೆ ಲಾಡು, ಮಧ್ಯಾಹ್ನ ಬಿಸಿಯೂಟ ನೀಡಬೇಕು. ಮಾತೃವಂದನಾ, ಪ್ರಧಾನ ಮಂತ್ರಿಯ ಪೋಷಣ್ ಅಭಿಯಾನ, ಬಾಲ್ಯ ವಿವಾಹ ತಡೆಗಟ್ಟುವುದು, ಭಾಗ್ಯಲಕ್ಷ್ಮಿ ಯೋಜನೆ, ಸಾಂತ್ವನ ಕೇಂದ್ರಗಳ ಸಮೀಕ್ಷೆ ನಡೆಸುವುದು, ಜಾಗೃತಿ ಮೂಡಿಸುವುದು ಸಹ ಅಂಗನವಾಡಿ ಕಾರ್ಯಕರ್ತೆಯರ ಮೂಲಕವೇ ನಡೆಯುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳುವುದರಿಂದ ಯಾವುದು ಕ್ರಮಬದ್ದವಾಗಿ ನಡೆಯುವುದಿಲ್ಲ ಎನ್ನುವುದು ಪೋಷಕರ ದೂರು.
ಕೆಲವು ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದ್ದರೂ ಪೂರ್ಣ ಪ್ರಮಾಣದ ಹಾಜರಾತಿ ನೀಡುತ್ತಾರೆ. ಹೆಚ್ಚಿನ ದಾಖಲಾತಿ ತೋರಿಸಲಾಗುತ್ತಿದೆ ಎನ್ನುವ ದೂರುಗಳಿವೆ. ತಾಲ್ಲೂಕಿನಲ್ಲಿ ಕನಿಷ್ಠ 5 ರಿಂದ 25 ಮಕ್ಕಳಿರುವ ಕೇಂದ್ರಗಳಿವೆ. ಪ್ರತಿನಿತ್ಯ ಮಕ್ಕಳ ಭಾವಚಿತ್ರ ತೆಗೆದು ಅಪ್‌ಲೋಡ್ ಮಾಡುವುದರಿಂದ ನಕಲಿ ದಾಖಲಾತಿ ಇರುವುದಿಲ್ಲ. ‘ಪೊಜಿಷನ್ ಟ್ರಾಕ್ ಅಪ್ಲಿಕೇಷನ್’ ಮೂಲಕ ಪ್ರತಿನಿತ್ಯ ಮೊಬೈಲ್‌ನಲ್ಲಿ ಮಾಹಿತಿ ಕಳುಹಿಸುತ್ತಾರೆ. ಮಕ್ಕಳ ತೂಕ, ಎತ್ತರ, ಆರೋಗ್ಯದ ಮಾಹಿತಿ ಎಲ್ಲವನ್ನು ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡುವುದರಿಂದ ಮುಂದಿನ ದಿನಗಳಲ್ಲಿ ಪುಸ್ತಕಗಳ ನಿರ್ವಹಣೆ ಕಷ್ಟವೇ ಇರುವುದಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶಬಾಬು ಮಾಹಿತಿ ನೀಡಿದರು.
ಕೆಲವು ಗ್ರಾಮ ಪಂಚಾಯಿತಿಗಳು ವಿಶೇಷ ಆಸಕ್ತಿ ವಹಿಸಿ ಇರುವ ಕಟ್ಟಡಗಳನ್ನೇ ಉಪಯೋಗಿಸಿಕೊಂಡು ಮಾದರಿ ಅಂಗನವಾಡಿಗಳನ್ನು ರೂಪಿಸಿವೆ. ಕಟ್ಟಡಗಳ ಒಳಗೆ ಮತ್ತು ಹೊರ ಗೋಡೆಗಳ ಮೇಲೆ ಪುಟಾಣಿಗಳನ್ನು ಆಕರ್ಷಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಬಾಲಸ್ನೇಹಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಮಕ್ಕಳ ಅಟಿಕೆಗಳ ವ್ಯವಸ್ಥೆ ಮಾಡಲಾಗಿದೆ. ಸಾಮೂಹಿಕ ಸೀಮಂತ, ಪೋಷಣ ಅಭಿಯಾನ, ಮಕ್ಕಳ ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮ ಆಚರಿಸಲಾಗುತ್ತದೆ. ಆದರೆ ಇಂತಹ ಕೇಂದ್ರಗಳ ಸಂಖ್ಯೆ ತುಂಬಾ ಕಡಿಮೆ.
ಮಕ್ಕಳು, ಗರ್ಭಿಣಿಯರಿಗೆ ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪ್ರತಿನಿತ್ಯ ದಾಖಲಿಸಬೇಕು. ಇಲಾಖೆ ನೀಡಿರುವ ಮೊಬೈಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಗ್ಯಾಸ್ ಸಿಲಿಂಡರ್ ಸಾಗಾಣಿಕೆ ಹಣವನ್ನು ಸಹ ಕಾರ್ಯಕರ್ತೆಯರು ಭರಿಸಬೇಕಾಗಿದೆ. ಕೋಳಿ ಮೊಟ್ಟೆಯನ್ನು ಕಾರ್ಯಕರ್ತೆಯರು ಸ್ವಂತ ಹಣದಿಂದ ಖರೀದಿಸಬೇಕು. ಅದರ ಹಣವನ್ನು 2-3 ತಿಂಗಳಿಗೆ ನೀಡುತ್ತಾರೆ. ಅದನ್ನು ನೇರವಾಗಿ ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡುವುದಿಲ್ಲ. ಬಾಲ ವಿಕಾಸ ಸಮಿತಿ ಖಾತೆಗೆ ಜಮಾ ಮಾಡುತ್ತಾರೆ. ಸಮಿತಿಗಳು ಕೆಲವು ಕಡೆ ಚೆನ್ನಾಗಿ ಕೆಲಸ ಮಾಡುತ್ತಿವೆ. ಕೆಲವು ಕಡೆ ಆ ಹಣವನ್ನು ಪೂರ್ಣವಾಗಿ ನೀಡುವುದಿಲ್ಲ ಎಂದು ಕಾರ್ಯಕರ್ತೆಯೊಬ್ಬರು ತಿಳಿಸಿದರು.
ನಿರ್ಮಾಣ ಕಾಮಗಾರಿ ಪ್ರಗತಿ
ಅಂಗನವಾಡಿಗಳಿಗೆ ಅಗತ್ಯವಿರುವ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಹಂತ ಹಂತವಾಗಿ ಪ್ರತಿ ವರ್ಷ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುತ್ತಿದೆ. ಕಳೆದ ವರ್ಷ 15 ಹೊಸ ಕಟ್ಟಡಗಳಿಗೆ ಮಂಜೂರಾತಿ ದೊರೆತಿದ್ದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಹೇಶ್ಬಾಬು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಡಿಕೆಗಳು ಈಡೇರುತ್ತಿಲ್ಲ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಯ ಅನುದಾನವನ್ನು ಕಡಿತಗೊಳಿಸುತ್ತಿದೆ. ದಶಕಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳು ಈಡೇರಿಸುತ್ತಿಲ್ಲ. ರಾಜ್ಯ ಸರ್ಕಾರವೂ ಸ್ಪಂದಿಸುತ್ತಿಲ್ಲ. ಲಕ್ಷ್ಮಿ ಅಂಗನವಾಡಿ ಕಾರ್ಯಕರ್ತೆ ಕಲಿಕೆಗೆ ಮಾತ್ರ ಸೀಮಿತಗೊಳಿಸಿ ಬಡಕುಟುಂಬಗಳಿಗೆ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಆರ್ಥಿಕ ಶಕ್ತಿ ಇಲ್ಲ. ಅನಿವಾರ್ಯವಾಗಿ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ಕೂಲಿಗೆ ಹೋಗುತ್ತೇವೆ. ಅಂಗನವಾಡಿಗಳಿಗೆ ಸರ್ಕಾರ ಮೂಲ ಸೌಲಭ್ಯ ಒದಗಿಸಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು. ಕಾರ್ಯಕರ್ತೆಯರನ್ನು ಇತರೆ ಕೆಲಸಗಳಲ್ಲಿ ತೊಡಗಿಸದೇ ಕಲಿಕೆಗೆ ಮಾತ್ರ ಸೀಮಿತಗೊಳಿಸಬೇಕು. ವಿಜಯಮ್ಮ ಪೋಷಕಿ ಇತರೆ ಕೆಲಸದ ಜವಾಬ್ದಾರಿ ಬೇಡ ಅಂಗನವಾಡಿ ಕಾರ್ಯಕರ್ತೆಯರಿಗೆ ಇತರೆ ಕೆಲಸಗಳ ಜವಾಬ್ದಾರಿ ನೀಡದೆ ಅಂಗನವಾಡಿಗಳಲ್ಲೇ ಕೆಲಸ ಮಾಡುವಂತೆ ಕ್ರಮಕೈಗೊಳ್ಳಬೇಕು. ಕಾರ್ಯಕರ್ತೆಯರು ಪ್ರತಿನಿತ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಿದರೆ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಬಹುದು. ಪಲ್ಲವಿ ಅಂಗನವಾಡಿ ಕಾರ್ಯಕರ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.