ಶಿಡ್ಲಘಟ್ಟ: ಬಯಲು ಸೀಮೆ ಭಾಗದಲ್ಲಿ ಮಳೆ ಆಶ್ರಯದ ಬೆಳೆಗಳಿಗೆ ವಕ್ರದೃಷ್ಟಿ(ಕಣ್ ಕಿಸ್ರು) ಬೀಳದೆ ಇರಲೆಂದು ಆಚರಿಸುವ ‘ಅತ್ತೆ ಮಳೆ ಹೊಂಗಲು’ ಹಬ್ಬವನ್ನು ದೇವರಮಳ್ಳೂರು ಗ್ರಾಮದಲ್ಲಿ ಕೃಷಿಕರು ಅದ್ದೂರಿಯಾಗಿ ಆಚರಿಸಿ, ಸಂಭ್ರಮಿಸಿದರು. ಅತ್ತೆ ಮಳೆ ನಂತರ ಚಿತ್ತೆ ಮಳೆ ಬೀಳುತ್ತದೆ. ಅತ್ತೆ ಚಿತ್ತೆ ಮಳೆ ಅವಧಿಯಲ್ಲಿ ಈ ಭಾಗದಲ್ಲಿ ಅತ್ತೆ ಮಳೆ ಹೊಂಗಲು ಹಬ್ಬ ಅಚರಿಸುವುದು ವಾಡಿಕೆ.
ಮುಂಗಾರು ಸಮಯದಲ್ಲಿ ಬಿತ್ತಿದ ರಾಗಿ, ಅವರೆ, ಅಲಸಂದಿ, ಜೋಳ, ಸೂರ್ಯಕಾಂತಿ, ನೆಲಗಡಲೆ ಸೇರಿದಂತೆ ಇನ್ನಿತರ ಬೆಳೆಗಳು ಮೊಣಕಾಲು ಉದ್ದದಷ್ಟು ಬೆಳೆದು, ನಳನಳಿಸುತ್ತಿರುತ್ತವೆ. ಈ ವೇಳೆ ಬೆಳೆಗಳಿಗೆ ಯಾರ ವಕ್ರದೃಷ್ಟಿಯೂ ಬೀಳದಿರಲಿ, ಕಣ್ ಕಿಸ್ರು ಆಗಿ ಬೆಳೆ ಹಾಳಾಗದೆ ಇರಲೆಂದು ಈ ಆಚರಣೆ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸುವರು.
ಅತ್ತೆ ಮಳೆ ಹೊಂಗಲು, ಅತ್ತಾನ ಫೊಂಗಲಿ... ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಕರೆಯುವ ಈ ಸಂಪ್ರದಾಯವು ಕೃಷಿಕರ ಪಾಲಿಗೆ ಹಬ್ಬ ಮತ್ತು ಸಡಗರ ಸಂಭ್ರಮದ ಸಂಕೇತ. ಜೊತೆಗೆ ಬೆಳೆಯನ್ನು ರಕ್ಷಿಸುವ ಪದ್ಧತಿಯೂ ಹೌದು.
ಅತ್ತೆ ಮಳೆ ಹೊಂಗಲು ಹಬ್ಬ ಆಚರಿಸಲು ಗ್ರಾಮದ ಹಿರಿಯರು ನಿರ್ಧರಿಸುತ್ತಿದ್ದಂತೆ ಊರ ತಳವಾರ ಮನೆ ಮನೆಗೂ ಸುದ್ದಿ ಮುಟ್ಟಿಸುತ್ತಾನೆ. ಗ್ರಾಮದಲ್ಲಿ ಮನೆ ಮನೆಯಿಂದಲೂ ಚಂದಾ ವಸೂಲಿ ಮಾಡಿ ಬಂದ ಹಣದಲ್ಲಿ ಪೂಜೆ ಸಾಮಾನು, ಒಂದು ಟಗರು ಖರೀದಿಸುತ್ತಾರೆ.
ಕೆಲವು ಊರಿನಲ್ಲಿ ಊರ ಮುಂದೆ, ಇನ್ನು ಕೆಲ ಊರಿನಲ್ಲಿ ಗಂಗಮ್ಮನ ಗುಡಿ, ಛಾವಡಿ ಬಳಿ ಇದ್ದಿಲು ಬೂದಿ ಬಳಸಿ ಕೆರೆ ಬಂಟ (ರಾಕ್ಷಸ ರೂಪ)ನ ಚಿತ್ರ ಬಿಡಿಸುತ್ತಾರೆ. ಹೊಸ ಮಡಿಕೆಯಲ್ಲಿ ಅನ್ನ ಬೇಯಿಸಿ ಲಕ್ಕಲಿ ಸೊಪ್ಪು ಹೊಂಗೆ, ಅಲಸಂ, ತೊಗರಿ, ಬೇವಿನ ಸೊಪ್ಪು ಸೇರಿದಂತೆ ವಿವಿಧ ಒಂಭತ್ತು ರೀತಿಯ ಸೊಪ್ಪುಗಳನ್ನು ಹಾಕಿ ಬೇಯಿಸುತ್ತಾರೆ.
ಕುರಿ ಬಲಿ ಕೊಟ್ಟು ರಕ್ತವನ್ನು ಅನ್ನದಲ್ಲಿ ಬೆರೆಸುತ್ತಾರೆ. ಹೀಗೆ ಬೆರೆಸಿದ ವಿವಿಧ ರೀತಿಯ ಸೊಪ್ಪು ಅನ್ನವನ್ನು ಎಲ್ಲ ಹೊಲಗಳ ಮೇಲೆ ಚೆಲ್ಲಿಕೊಂಡು ಬರುತ್ತಾರೆ. ಇದರಿಂದ ಬೆಳೆದು ನಿಂತ ಬೆಳೆಗಳಿಗೆ ವಕ್ರದೃಷ್ಟಿ ಬೀಳುವುದಿಲ್ಲ ಎಂಬುದು ಗ್ರಾಮೀಣ ಭಾಗದ ಜನರ ನಂಬಿಕೆ.
‘ಬಲಿ ನೀಡಿದ ಕುರಿಯನ್ನು ಕತ್ತರಿಸಿ ಮಾಂಸವನ್ನು ಗುಡ್ಡೆಹಾಕಿ ಚಂದಾ ನೀಡಿದ ಮನೆ ಮನೆಗೂ ವಿತರಣೆ ಮಾಡಲಾಗುತ್ತದೆ. ಮನೆಗಳಲ್ಲಿ ಮಾಂಸಾಹಾರದ ಅಡುಗೆ ತಯಾರಿಸಿ ಸೇವಿಸುತ್ತೇವೆ. ಇದರಿಂದ ನಮ್ಮ ಬೆಳೆಗಳು ಚೆನ್ನಾಗಿ ಆಗಲಿ. ಗ್ರಾಮ ದೇವತೆಯ ಆಶೀರ್ವಾದ ಸಿಗಲಿ ಎನ್ನುವುದು ಈ ಆಚರಣೆ ಹಿಂದಿನ ಉದ್ದೇಶ’ ಎನ್ನುತ್ತಾರೆ ಗ್ರಾಮದ ಹಿರಿಯ ಅಕ್ಕಲರೆಡ್ಡಿ.
ಗ್ರಾಮದ ಹಿರಿಯರಾದ ಅಕ್ಕಲಪ್ಪ, ಬಚ್ಚಪ್ಪ, ಮುನಿರೆಡ್ಡಿ, ಈರಪ್ಪ, ಚಂದ್ರಪ್ಪ, ಶ್ರೀನಿವಾಸ್, ಕೃಷ್ಣಪ್ಪ, ನಂಜುಂಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ವೆಂಕಟೇಶ್, ಮಂಜುನಾಥ್, ಶ್ರೀರಾಮ, ವೆಂಕಟೇಶ್ ಮುಂದೆ ನಿಂತು ಸಂಪ್ರದಾಯ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.