ಶಿಡ್ಲಘಟ್ಟ: ದ್ರಾಕ್ಷಿ, ದಾಳಿಂಬೆ, ಆಲೂಗಡ್ಡೆ, ಟೊಮೆಟೊ ಬೆಳೆಗಳೊಂದಿಗೆ ಮೇಲೂರಿನ ರೈತ ಸಚಿನ್ ಅವರು ಬೆಣ್ಣೆ ಹಣ್ಣು (ಆವಕಾಡೊ ಅಥವಾ ಬಟರ್ ಫ್ರೂಟ್) ಕೂಡ ಬೆಳೆದು ಬಯಲು ಸೀಮೆಯ ರೈತರಿಗೆ ಹೊಸ ದಾರಿ ತೋರಿಸಿದ್ದಾರೆ.
ಮೇಲೂರಿನ ರೈತ ಸಚಿನ್ ಬೆಳೆದ ಬೆಣ್ಣೆ ಹಣ್ಣಿನ ಒಂದೊಂದು ಮರದಲ್ಲೂ ನೂರಕ್ಕಿಂತ ಹೆಚ್ಚು ಹಣ್ಣುಗಳು ಸಿಕ್ಕಿವೆ. ಒಂದೊಂದು ಹಣ್ಣೂ 500 ಗ್ರಾಂ ನಿಂದ 900 ಗ್ರಾಂ ತೂಗುತ್ತಿವೆ. ಹಣ್ಣಿನ ಗುಣಮಟ್ಟವನ್ನು ನೋಡಿ ಕಳೆದೆರಡು ವರ್ಷಗಳಿಂದ ಬೆಂಗಳೂರಿನಿಂದ ವ್ಯಾಪಾರಿಗಳು ಬಂದು ತೋಟದಿಂದಲೇ ಹಣ್ಣು ಕೊಂಡೊಯ್ಯುತ್ತಿದ್ದಾರೆ.
ಬೆಣ್ಣೆಹಣ್ಣಿನಲ್ಲಿ ಹಲವು ತಳಿಗಳಿವೆ. ಈ ಹಣ್ಣಿಗೆ ಆರೋಗ್ಯದ ದೃಷ್ಟಿಯಿಂದ ಬೇಡಿಕೆ ಇದೆ. ಬಯಲುಸೀಮೆಗೆ ಹೇಳಿ ಮಾಡಿಸಿದ ಬೆಳೆಯಿದು. ಇದಕ್ಕೆ ನೀರು ಹೆಚ್ಚಿಗೆ ಬೇಕಿಲ್ಲ ಮತ್ತು ಔಷಧಿ ಸಿಂಪಡನೆಯೂ ಬಹಳ ಕಡಿಮೆ. ಮಾರ್ಚ್– ಏಪ್ರಿಲ್ ತಿಂಗಳಲ್ಲಿ ಮಳೆ ಆಗದಿದ್ದರೆ ಸಾಕು. ಹೂವು ಪಿಂದೆ ಆದ ನಂತರ ನೀರು ಕೊಟ್ಟರೆ ಸಾಕು. ಒಳ್ಳೆಯ ಫಸಲು ಕೊಡುತ್ತದೆ. ಸಮಗ್ರ ಕೃಷಿ ಅಳವಡಿಸಿಕೊಂಡಿರುವ ಎಲ್ಲರೂ ಬೆಣ್ಣೆಹಣ್ಣನ್ನು ಬೆಳೆಯಬೇಕು ಎನ್ನುತ್ತಾರೆ ರೈತ ಸಚಿನ್.
‘ಸುಮಾರು 130 ಬೆಣ್ಣೆಹಣ್ಣಿನ ಮರ ಬೆಳೆಸಿರುವೆ. ಮೊದಲು ಸುಮಾರು ಆರೇಳು ವರ್ಷಗಳ ಹಿಂದೆ ಎರಡು ಗಿಡಗಳನ್ನು ಪ್ರಾಯೋಗಿಕವಾಗಿ ಹಾಕಿ ನೋಡಿದೆ. ನಂತರ 130 ಗಿಡ ನೆಟ್ಟು ಬೆಳೆಸಿದೆ. ನಾಟಿ ಗಿಡವನ್ನು ನೆಟ್ಟು ಸೂಕ್ತ ತಳಿಯ ಕಡ್ಡಿಗಳನ್ನು ತಂದು ಕಸಿ ಮಾಡುವುದು ಉತ್ತಮ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇದಕ್ಕೆ ನೆರವಾಗುವರು. 28 ಅಡಿ ಮತ್ತು 28 ಅಡಿ ಅಂತರದಲ್ಲಿ ಒಂದು ಎಕರೆಗೆ ಒಂದು ನೂರು ಗಿಡ ನೆಡಬಹುದು. ಎರಡು ಅಡಿ ಗುಂಡಿ ತೋಡಿ, 2 ಮಕ್ಕರಿ ಕೊಟ್ಟಿಗೆ ಗೊಬ್ಬರ, 100 ಗ್ರಾಂ ಡಿಎಪಿ, 300 ಗ್ರಾಂ ಸೂಪರ್ ಫಾಸ್ಪೈಟ್ ಮತ್ತು ಬೇವಿನ ಹಿಂಡಿ ಮಿಶ್ರಣ ಮಾಡಿ ಹಾಕಬೇಕು. ಕಳೆ ತೆಗೆದು ಆರೈಕೆ ಮಾಡಿದಲ್ಲಿ ಉತ್ತಮ ಫಸಲು ದೊರೆಯುತ್ತದೆ’ ಎಂದು ಅವರು ವಿವರಿಸಿದರು.
‘ಹೆಚ್ಚಿನ ಗೊಬ್ಬರ ಬೇಡದೆ ಇರುವ ಬೆಳೆ ಇದಾಗಿದೆ. ವರ್ಷದಲ್ಲಿ ಎರಡು ಫಲ ನೀಡುವ ಮತ್ತು ಯಾವುದೇ ರೋಗವಿಲ್ಲದಂತೆ ಬೆಳೆಯುವ ಉತ್ತಮ ಬೆಳೆಯಿದು. ಒಳ್ಳೆಯ ವಾಣಿಜ್ಯ ಬೆಳೆ ಇದಾಗಿದ್ದು, ರೈತರು ಉತ್ತಮ ಆದಾಯ ಗಳಿಸಬಹುದು’ ಎಂದು ಮಾಹಿತಿ ನೀಡಿದರು.
ಸಮಗ್ರ ಕೃಷಿಗೆ ಒತ್ತು: ರೈತ ಸಚಿನ್ ಅವರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಅಧ್ಯಯನಕ್ಕಾಗಿ ಇವರ ತೋಟಕ್ಕೆ ರಾಜ್ಯ ಹಾಗೂ ವಿವಿಧ ರಾಜ್ಯಗಳಿಂದ ಬರುವ ರೈತರಿಗೂ ಸಮಗ್ರ ಕೃಷಿಯನ್ನು ಅಳವಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ದ್ರಾಕ್ಷಿ, ದಾಳಿಂಬೆ, ಮಾವು, ಹಲಸು, ಬಾಳೆ, ಬೆಣ್ಣೆಹಣ್ಣು, ನೇರಳೆ, ತೆಂಗು ಮುಂತಾದ ಬೆಳೆಗಳಿವೆ. ಜೊತೆಯಲ್ಲಿ ಹಳ್ಳಿಕಾರ್ ಎತ್ತು, ನಾಟಿ ಹಸು, ಸೀಮೆ ಹಸು, ಎಮ್ಮೆ, ಡಾರ್ಪರ್ ಕುರಿ, ರ‍್ಯಾಂಬುಲೇಟ್ ಕುರಿಗಳನ್ನೂ ಸಾಕಿದ್ದಾರೆ.
ಪ್ರಶಸ್ತಿ: ರೈತ ಸಚಿನ್ ಅವರ ಕೃಷಿಯ ಸಾಧನೆಗಾಗಿ ಇತ್ತೀಚೆಗಷ್ಟೇ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತೂಕ ಇಳಿಸಲು ಸಹಾಯ: ಬೆಣ್ಣೆ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶ ಮೂಳೆಗಳನ್ನು ಬಲಪಡಿಸುತ್ತವೆ. ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತವೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತವೆ. ಬಯಲುಸೀಮೆ ರೈತರಿಗೆ ಇದು ಹೇಳಿ ಮಾಡಿಸಿದ ಬೆಳೆ.ಡಾ. ಹಿತ್ತಲಮನಿ ತೋಟಗಾರಿಕಾ ಇಲಾಖೆ ನಿವೃತ್ತ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.