ADVERTISEMENT

ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

ಚಿಂತಾಮಣಿಯಲ್ಲಿ ಸಾಂಕ್ರಾಮಿಕ ರೋಗದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:16 IST
Last Updated 2 ಡಿಸೆಂಬರ್ 2022, 4:16 IST
ಚಿಂತಾಮಣಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಗೆ ಜೆಎಂಎಫ್ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ. ಪ್ರಕಾಶ್ ಚಾಲನೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಾರೆಡ್ಡಿ ಇದ್ದರು
ಚಿಂತಾಮಣಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಗೆ ಜೆಎಂಎಫ್ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ. ಪ್ರಕಾಶ್ ಚಾಲನೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಾರೆಡ್ಡಿ ಇದ್ದರು   

ಚಿಂತಾಮಣಿ: ವಿಶ್ವ ಏಡ್ಸ್ ದಿನದ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ಏಡ್ಸ್ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ತಾಲ್ಲೂಕು ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಾನೂನುಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರರೆಡ್ಡಿ ಮಾತನಾಡಿ, ‘ಏಡ್ಸ್‌ನಿಂದ ಮರಣ ಹೊಂದಿದ ವ್ಯಕ್ತಿಗಳ ಸ್ಮರಣೆ ಹಾಗೂ ಏಡ್ಸ್ ವಿರುದ್ಧ ಹೋರಾಟದ ಅರಿವು ಮೂಡಿಸಲು ಪ್ರತಿ ಡಿಸೆಂಬರ್ 1ರಂದು ವಿಶ್ವದಾದ್ಯಂತ ಏಡ್ಸ್ ದಿನಾಚರಣೆ ಆಚರಿಲಾಗುತ್ತಿದೆ’ ಎಂದರು.

ಸಮಾನತೆ ಕಾಪಾಡುವುದು, ಪ್ರಾಮಾಣಿಕತೆಯಿಂದ ಅಸಮಾನತೆ ತೊಡೆದು ಹಾಕುವುದು ಈ ವರ್ಷದ ಘೋಷ ವಾಕ್ಯವಾಗಿದೆ. ತಾಲ್ಲೂಕಿನಲ್ಲಿ 1,114 ಏಡ್ಸ್ ರೋಗದ ಪ್ರಕರಣಗಳು ನೋಂದಣಿಯಾಗಿದ್ದು, ಅದರಲ್ಲಿ 680 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಲೈಂಗಿಕ ಸಂಪರ್ಕ, ತಾಯಿಯಿಂದ ಮಗುವಿಗೆ ಬರುವುದು, ಉಪಯೋಗಿಸಿದ ಸಿರೆಂಜ್, ಶೇವಿಂಗ್ ಬ್ಲೇಡುಗಳಿಂದ ಈ ರೋಗ ಹರಡುತ್ತದೆ ಎಂದರು.

ADVERTISEMENT

ಲೈಂಗಿಕ ಕಾರ್ಯಕರ್ತೆಯರಿಗೆ ಕಾಂಡೋಮ್ ವಿತರಣೆ, ರೋಗ ಹರಡುವ ಹಾಗೂ ಈ ಕಾಯಿಲೆ ಹರಡದಂತೆ ಯಾವ ರೀತಿ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಜಾಗೃತಿ ಅಗತ್ಯ ಎಂದು ತಿಳಿಸಿದರು. ಏಡ್ಸ್ ರೋಗಿಗಳಿಗೆ ಧೈರ್ಯ ತುಂಬಬೇಕು. ಅವರಿಗೆ ಅಗತ್ಯ ನೆರವು ನೀಡಬೇಕು ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ನಗರದ ಪ್ರಮುಖ ರಸ್ತೆಗಳಲ್ಲಿ ಏಡ್ಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು.

ಆಸ್ಪತ್ರೆಯ ಮುಂಭಾಗ ಮತ್ತು ಮುಖ್ಯ ವೃತ್ತಗಳಲ್ಲಿ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.