ADVERTISEMENT

ಆಕರ್ಷಕ ಬ್ಯಾಸ್ಕೆಟ್‌ಬಾಲ್ ಕೋರ್ಟ್

ಅಪ್ಪೇಗೌಡನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ

ಡಿ.ಜಿ.ಮಲ್ಲಿಕಾರ್ಜುನ
Published 24 ಫೆಬ್ರುವರಿ 2021, 4:05 IST
Last Updated 24 ಫೆಬ್ರುವರಿ 2021, 4:05 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಬ್ಯಾಸ್ಕೆಟ್‌ಬಾಲ್ ಕೋರ್ಟ್
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಬ್ಯಾಸ್ಕೆಟ್‌ಬಾಲ್ ಕೋರ್ಟ್   

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಗೊಂಡಿದೆ.

ಈ ಹಿಂದೆ ನರೇಗಾ ಯೋಜನೆಯಡಿ ಆಟದ ಮೈದಾನದ ಅಭಿವೃದ್ಧಿಗೆ ಹಣ ನೀಡುತ್ತಿರಲಿಲ್ಲ. ಹೊಸದಾಗಿ ಅದನ್ನು ಪರಿಚಯಿಸಲಾಯಿತು. ಅಪ್ಪೇಗೌಡನಹಳ್ಳಿಯಲ್ಲಿ ‘ನಮ್ಮ ಮಕ್ಕಳು ಕಬಡ್ಡಿ, ಕೊಕ್ಕೊ ಮುಂತಾದ ಆಟಗಳ ಜೊತೆ ಬ್ಯಾಸ್ಕೆಟ್ ಬಾಲ್ ಆಟವನ್ನೂ ಕಲಿತು ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸಬೇಕು’ ಎಂಬ ಆಶಯದೊಂದಿಗೆ ವಿಶಿಷ್ಟವಾಗಿ ಕೋರ್ಟ್ ನಿರ್ಮಿಸಲಾಗಿದೆ. ಉದ್ದ 100 ಅಡಿ ಮತ್ತು ಅಗಲ 55 ಅಡಿ ಇರುವ ಈ ಕೋರ್ಟ್ ನಿರ್ಮಿಸಲು ₹ 8 ಲಕ್ಷ ವೆಚ್ಚವಾಗಿದೆ.

‘ನಮ್ಮ ಶಾಲೆಯ ಆವರಣದಲ್ಲಿ ಬಹುಕಾಲ ಬಾಳಿಕೆ ಬರುವ ಹಾಗೂ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಬೇಕೆಂದು ನಾವು ಹೊಸಕೋಟೆಗೆ ಹೋಗಿ ನೋಡಿಕೊಂಡು ಬಂದೆವು. ಸಂಪೂರ್ಣ ಕಾಂಕ್ರೀಟ್‌ನಲ್ಲಿ ಮಾಡಿದ ಕೋರ್ಟ್ ಮೇಲೆ ವಿಜಯ್ ಅವರಿಂದ ಬಣ್ಣವನ್ನು ಬಳಿಸಿದ್ದೇವೆ. ಈ ಹಿಂದೆ ಅವರೇ ನಮ್ಮ ಶಾಲೆಯ ಗೋಡೆಗಳ ಮೇಲೆ ರೈಲು, ಬಸ್ಸು, ವಿಮಾನ ಮತ್ತು ಹಡಗನ್ನು ಚಿತ್ರಿಸಿದ್ದರು. ಇದಕ್ಕಾಗಿ ಬಳಸಿರುವ ಬಣ್ಣ ಮತ್ತು ಅದನ್ನು ಬಳಿಯಲು ನೀಡಿದ ಹಣವೇ ಸುಮಾರು ₹90 ಸಾವಿರ. ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳದೆ ನಾವು ಕೆಲಸ ಮಾಡಿಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.

ADVERTISEMENT

‘ಕೋರ್ಟ್ ನಿರ್ಮಿಸಿದ್ದಾಗಿದೆ. ಈಗ ನಮ್ಮ ಮಕ್ಕಳಿಗೆ ತರಬೇತಿಯನ್ನು ನೀಡಲು ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಶಿಡ್ಲಘಟ್ಟದ ಮುನಿಕೃಷ್ಣ ಅವರನ್ನು ಮಾತನಾಡಿದ್ದೇವೆ. ಅವರು ವಾರಕ್ಕೆರಡು ಬಾರಿ ಬಂದು ತರಬೇತಿ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.