ADVERTISEMENT

ಆಯುಷ್ಮಾನ್ ಭಾರತ: ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಶೇ 26ರಷ್ಟೇ ಸಾಧನೆ!

ಜಿಲ್ಲೆಯಲ್ಲಿ ಕುಂಟುತ್ತ ಸಾಗಿದೆ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಮೇ 2022, 6:46 IST
Last Updated 10 ಮೇ 2022, 6:46 IST
   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆ. ಈ ಹಿಂದೆ ಅವರೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಇಂತಿಪ್ಪ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯ ಸಾಧನೆ ಕುಂಟುತ್ತ ಸಾಗಿದೆ.

ರಾಜ್ಯದ ಎಲ್ಲ ನಿವಾಸಿಗಳಿಗೆ ಆರೋಗ್ಯ ಕರ್ನಾಟಕ ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ರಾಜ್ಯ ಸರ್ಕಾರ 2018ರ ಮಾರ್ಚ್‌ನಲ್ಲಿ ಅನುಷ್ಠಾನಗೊಳಿಸಿತ್ತು. ಈ ವೇಳೆಗೆ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿತ್ತು. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಸಾಮ್ಯತೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಯೋಜನೆ ಜಾರಿಗೆ ಬಂದಿತು.

ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ವಾರ್ಷಿಕ ₹ 5 ಲಕ್ಷದವರೆಗೆ, ಎಪಿಎಲ್ ಪಡಿತರ ಚೀಟಿ ಹೊಂದಿರುವವರು ವಾರ್ಷಿಕ ₹ 1.50 ಲಕ್ಷ ವೆಚ್ಚದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಇದು ಸರ್ಕಾರದ ಪ್ರಮುಖ ಯೋಜನೆಯಾಗಿದೆ.

ADVERTISEMENT

ಯೋಜನೆಯಡಿ ಜಿಲ್ಲೆಯಲ್ಲಿ ಯೋಜಿತ ಜನಸಂಖ್ಯೆ 10,62,790 ಇದೆ. ಇವರಲ್ಲಿ2,77,020 ಮಂದಿ ಮಾತ್ರ ಯೋಜನೆಯ ಕಾರ್ಡ್ ಪಡೆದಿದ್ದಾರೆ. ರಾಜ್ಯ ಮಟ್ಟದಲ್ಲಿ ನೋಡುವುದಾದರೆ ಜಿಲ್ಲೆಯ ಸಾಧನೆ ಶೇ 26ರಷ್ಟಿದೆ. ಯೋಜನೆ ಜಾರಿಯಾಗಿ ಮೂರು ವರ್ಷಗಳು ದಾಟಿದರೂ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆಯ ಕಾರ್ಡ್ ವಿತರಣೆ ಚಿಕ್ಕಬಳ್ಳಾಪುರದಲ್ಲಿ ಆಮೆಗತಿಯಲ್ಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗಿಂತ ಹೆಚ್ಚು ಯೋಜಿತ ಜನಸಂಖ್ಯೆ ಹೊಂದಿರುವ ಮೈಸೂರು, ಬೆಂಗಳೂರು ನಗರ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಗುರಿ ಸಾಧನೆಯಲ್ಲಿ ಚಿಕ್ಕಬಳ್ಳಾಪುರಕ್ಕಿಂತ ಮುಂದಿವೆ.ಚಿಕ್ಕಬಳ್ಳಾಪುರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡಗು, ರಾಮನಗರ ಜಿಲ್ಲೆಗಳು ಚಿಕ್ಕಬಳ್ಳಾಪುರಕ್ಕಿಂತ ಹೆಚ್ಚು ಕಾರ್ಡ್ ವಿತರಿಸಿದ ಜಿಲ್ಲೆಗಳ ಪಟ್ಟಿಯಲ್ಲಿವೆ.

ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ 12 ಕಡೆಗಳಲ್ಲಿ ಈ ಯೋಜನೆಯಡಿ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಹಿಂದೆ ಸೇವಾ ಸಿಂಧು ಯೋಜನೆಯ ಕೇಂದ್ರಗಳಲ್ಲಿಯೂ ಕಾರ್ಡ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈಗ ಈ ಕೇಂದ್ರಗಳಲ್ಲಿ ಕಾರ್ಡ್ ವಿತರಣೆ ಆಗುತ್ತಿಲ್ಲ. ಇದೂ ಸಹ ಯೋಜನೆಗೆ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಒಂದು. ಒಂದು ಕೇಂದ್ರದಲ್ಲಿ ನಿತ್ಯ ಕನಿಷ್ಠ 100 ಕಾರ್ಡ್ ವಿತರಿಸಿದರೂ ದಿನಕ್ಕೆ 1,200 ಕಾರ್ಡ್‌ಗಳನ್ನು ನೀಡಲಷ್ಟೇ ಸಾಧ್ಯ.

ಆರೋಗ್ಯ ಮೇಳದಲ್ಲಿಯೂ ಕಾರ್ಡ್ ವಿತರಣೆ: ಸರ್ಕಾರದಿಂದ ಜಿಲ್ಲೆಯಲ್ಲಿ ನಡೆಯುವು ಆರೋಗ್ಯ ಮೇಳಗಳಲ್ಲಿ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆ ಕಾರ್ಡ್‌ಗಳನ್ನು ಜನರಿಗೆ ವಿತರಿಸಲಾಗುತ್ತಿದೆ. ಈ ಮೂಲಕ ಹೆಚ್ಚಿನ ಗುರಿ ಸಾಧನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.