ಬಾಗೇಪಲ್ಲಿ: ಪಟ್ಟಣದ ಸಂತೆಮೈದಾನದ ರಸ್ತೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿಯೇ 4 ತಿಂಗಳಿಂದ ಮನೆಗಳ ಸಂಪ್‍ಗಳಿಗೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಜನರಿಗೆ ಶುದ್ಧ ಕುಡಿವ ನೀರು ಸಿಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಬೀದಿಯ ಪೈಪ್ ಒಡೆದಿದೆ. ಕುಡಿಯುವ ನೀರಿನ ಪೈಪ್ ಪಕ್ಕದಲ್ಲಿಯೇ ಮಲಮೂತ್ರದ ಗುಂಡಿ ಇವೆ. ಕಲುಷಿತ ನೀರು ಪೈಪ್ ಮೂಲಕ ಮನೆಗಳ ಸಂಪ್‍ಗೆ ನೇರವಾಗಿ ಹರಿಯುತ್ತಿದೆ. ಈ ಸಂಬಂಧ ಪುರಸಭೆ ಅಧಿಕಾರಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕುಡಿಯುವ ಹಾಗೂ ಬಳಕೆಗೆ ನೀರು ಸಿಗದೇ ವಾರ್ಡ್‍ನ ಜನರು ಸಂಕಷ್ಟ ಪಡುತ್ತಿದ್ದಾರೆ.
ಕಲುಷಿತ ನೀರು ಸಂಪ್‍ಗೆ ಸರಬರಾಜು ಆಗಿದೆ. ನೀರು ದುರ್ವಾಸನೆಯಿಂದ ಕೂಡಿದೆ. ಶುದ್ಧ ಕುಡಿಯುವ ನೀರನ್ನು ಖರೀದಿ ಮಾಡಿ ಕುಡಿಯಲು ಬಳಕೆ ಮಾಡಲಾಗುತ್ತಿದೆ. ಮನೆ ಬಳಕೆಗೆ ಟ್ಯಾಂಕರ್ ನೀರು ತರಿಸಲಾಗುತ್ತಿದೆ ಎಂದು ವಾರ್ಡ್‍ನ ನಿವಾಸಿಗಳು ತಿಳಿಸಿದ್ದಾರೆ.
ನೀರಿನ ಕರ ಕಟ್ಟಿಸುವ ಪುರಸಭೆ ಅಧಿಕಾರಿಗಳು, ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡಬೇಕು. ಸಂಪ್‍ಗಳಿಗೆ ಕಲುಷಿತ ನೀರು ಹರಿಯುತ್ತಿದೆ. ಸಮಸ್ಯೆಯ ಬಗ್ಗೆ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ವಾರ್ಡ್‍ನ ನಿವಾಸಿ ಗೋವಿಂದ ಆರೋಪಿಸಿದರು.
ಪುರಸಭೆ ಕಚೇರಿಯಲ್ಲಿ ಕಾಯಂ ಎಂಜಿನಿಯರ್ ಇಲ್ಲ. ಹೊರಗುತ್ತಿಗೆ ನೌಕರರೇ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಇಂಜಿನಿಯರ್ ನೇಮಕ ಮಾಡಬೇಕು. ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಪುರಸಭಾ ಮಾಜಿ ಸದಸ್ಯ ಜಿ.ಕೃಷ್ಣಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.