
ಬಾಗೇಪಲ್ಲಿ: ಆಂಧ್ರಪ್ರದೇಶದಿಂದ ಬಂದು ಇಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ನಿವಾಸಗಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಾಲ್ಲೂಕು ಸಮಿತಿ ಸದಸ್ಯ ಎ.ಜಿ. ಸುಧಾಕರ್ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ಮಾಡಿದರು.
‘ವಲಸೆ ಕಾರ್ಮಿಕರ ಬದುಕು ದುಸ್ತರ, ಬೀದಿಯಲ್ಲೇ ಕಮರಿದ ಬಾಲ್ಯ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಇದೇ 8ರಂದು ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಪಟ್ಟಣದ ಹೊರವಲಯದ ಶಿರಡಿ ಸಾಯಿಬಾಬಾ ಮಂದಿರದ ಮುಂದೆ ವಲಸೆ ಕಾರ್ಮಿಕರು ವಾಸಿಸುತ್ತಿದ್ದು, ಅವರು ಪೈಪ್‌ಲೈನ್ ಕಾಮಗಾರಿಯ ಗುಂಡಿ ತೆಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರ ಮಕ್ಕಳು ಅಂಗನವಾಡಿ ಅಥವಾ ಶಾಲೆಗಳಿಗೆ ಬರುತ್ತಿರಲಿಲ್ಲ. ಹೀಗಾಗಿ, ಆ ಮಕ್ಕಳನ್ನು ಸರ್ಕಾರಿ ಶಾಲೆ ಅಥವಾ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಅವರಿಗೆ ಬುದ್ಧಿವಾದ ಹೇಳಲಾಗಿದೆ ಎಂದು ತಿಳಿಸಿದರು.
ವಲಸೆ ಕಾರ್ಮಿಕರ ಮಕ್ಕಳಿಗೆ ಊಟ, ವಸತಿ, ವಿದ್ಯುತ್ ಮತ್ತು ಶೌಚಾಲಯಗಳೇ ಇಲ್ಲ. ಮಕ್ಕಳು ಪೋಷಕರ ಜೊತೆಗಿದ್ದಾರೆ. ಸ್ಥಳೀಯ ಅಂಗನವಾಡಿ ಅಥವಾ ಶಾಲೆಗೆ ಸೇರಿಸಲು ಮನವಿ ಮಾಡಿದ್ದೇವೆ. ಕಾರ್ಮಿಕರನ್ನು ಇಲ್ಲಿಗೆ ಕರೆತಂದಿರುವ ಮೇಲ್ವಿಚಾರಕರ ಜೊತೆಗೂ ಮಾತನಾಡಿದ್ದೇನೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ತಾಲ್ಲೂಕು ಅಧ್ಯಕ್ಷ ಎ.ಜಿ. ಸುಧಾಕರ್ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.