ಬಾಗೇಪಲ್ಲಿ: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು, ವಿವಿಧ ಸಂಘಟನೆಗಳ, ಪ್ರಗತಿಪರ ಚಿಂತರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜುಲೈ 4ರಂದು ಹಮ್ಮಿಕೊಂಡಿರುವ ‘ನಮ್ಮ ಭೂಮಿ ನಮ್ಮ ಹಕ್ಕು’ ರೈತರ ಹೋರಾಟಕ್ಕೆ ತಾಲ್ಲೂಕಿನ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ಪಟ್ಟಣದ ಸಿಪಿಐ(ಎಂ) ಪಕ್ಷದ ಸುಂದರಯ್ಯ ಭವನದಲ್ಲಿ ಬುಧವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ), ಕೆಪಿಆರ್‌ಎಸ್, ಪ್ರಾಂತ ಕೃಷಿಕೂಲಿಕಾರರ ಸಂಘ, ಡಿಎಚ್‍ಎಸ್, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‍ಐ, ಎಸ್‍ಎಫ್‍ಐ ಸೇರಿದಂತೆ ವಿವಿಧ ಸಾಮೂಹಿಕ ಸಂಘಟನೆಗಳ ಮುಖಂಡರು ಬೆಂಬಲ ಘೋಷಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ದೇವನಹಳ್ಳಿಯ ವ್ಯಾಪ್ತಿಯ ರೈತರ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದಾಗ ರೈತ ಹೋರಾಟ ಆರಂಭವಾಗಿತು. ಪ್ರತಿಭಟನೆನಿರತ ರೈತರನ್ನು ಭೇಟಿ ನೀಡಿದ ಅಂದಿನ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಎರಡೂವರೆ ವರ್ಷ ಪೂರೈಸಿದರೂ ಭರವಸೆ ಈಡೇರಿಸಿಲ್ಲ. ಇದರ ನಡುವೆ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಭೂಮಿ, ನಮ್ಮ ಹಕ್ಕು ಅಲ್ಲವೇ. ಸರ್ಕಾರದ ಕೈಗಾರಿಕಾ ನೀತಿ ಬದಲಾಗಬೇಕು. ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರು ನಮಗೆ ಪರ್ಯಾಯವಾಗಿ ಭೂಮಿ ಕೊಡಿ ಎಂದು ಅರ್ಜಿ ಸಲ್ಲಿಸಿದರೂ, ಇದುವರಿಗೂ ಭೂಮಿ ಹಂಚಿಕೆ ಮಾಡಿಲ್ಲ. ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಏಜೆಂಟರಂತೆ ವರ್ತನೆ ಮಾಡಿದೆ ಎಂದು ದೂರಿದರು.
ಕೃಷಿ ಆಧಾರಿತ ಕೈಗಾರಿಕೆಗಳು ಆರಂಭ ಆಗಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಮಾತಾಡಲ್ಲ. ಭೂಮಿ ನೀಡಿದ ರೈತರಿಗೆ ಪರ್ಯಾಯವಾಗಿ ಭೂಮಿ ನೀಡುವ ಬಗ್ಗೆ ಮಾತಾಡದೇ, ಏಕಾಏಕಿ ರೈತರ ಭೂಮಿಗಳು ಭೂಸ್ವಾಧೀನ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದರು.
ರೈತರ ಹೋರಾಟದ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ? ಈ ಸರ್ಕಾರಕ್ಕೆ ಕಿವಿಯಿದ್ದು ಕಿವುಡರಂತೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ.ಎಂ.ಪಿ.ಮುನಿವೆಂಕಟಪ್, ಸಿಪಿಐ(ಎಂ)
ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸಹಕಾರ್ಯದರ್ಶಿ ಬಿಳ್ಳೂರುನಾಗರಾಜ್, ಭೂಮಿ ಕೊಡಿ ಎಂದು ಅರ್ಜಿ ಸಲ್ಲಿಸುವ ರೈತರ ಕೂಗು ಸರ್ಕಾರಕ್ಕೆ ಕೇಳುವುದಿಲ್ಲ. ಆದರೆ ಕಾರ್ಪೋರೇಟ್ ಕಂಪನಿಗಳು, ಮಾಲ್‍ಗಳು, ಶ್ರೀಮಂತರ ಕೈಗಾರಿಕಾ ಪ್ರದೇಶಕ್ಕಾಗಿ ಕೆಐಎಡಿಬಿ ಮೂಲಕ ರೈತರ ಭೂಮಿ ಭೂಸ್ವಾಧೀನ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಡಿ.ಟಿ.ಮುನಿಸ್ವಾಮಿ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ಜಿ.ಮುಸ್ತಾಫ, ಬಿ.ಎಚ್.ರಫೀಕ್, ಕೆ.ಮುನಿಯಪ್ಪ, ನರಸಿಂಹರೆಡ್ಡಿ ಇದ್ದರು.
ಶಾಸಕರ ಹೇಳಿಕೆಗೆ ಖಂಡನೆ
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಚನ್ನರಾಯಪ್ಪ ಕೈಗಾರಿಕಾ ಪ್ರದೇಶ ಆರಂಭಿಸಲು ರೈತರು ಭೂಮಿ ಭೂಸ್ವಾಧೀನ ಮಾಡಲು ಅವಕಾಶ ನೀಡಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿಕೆ ಖಂಡನೀಯ ಆಗಿದೆ. ರೈತರ ಫಲವತ್ತಾದ ಭೂಮಿಗಳನ್ನು ಸರ್ಕಾರ ಭೂಸ್ವಾಧೀನ ಮಾಡಿದರೆ ರೈತರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.