ADVERTISEMENT

ಬಾಂಗ್ಲಾದವರು ನೆಲೆಸಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯ: ಜಮೀರ್ ಅಹಮದ್ ಖಾನ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 5:38 IST
Last Updated 10 ಜನವರಿ 2026, 5:38 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಸತಿ ಖಾತೆ ಸಚಿವ ಜಮೀರ್ ಅಹಮದ್‌ ಖಾನ್‌ ಮಾತನಾಡಿದರು
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಸತಿ ಖಾತೆ ಸಚಿವ ಜಮೀರ್ ಅಹಮದ್‌ ಖಾನ್‌ ಮಾತನಾಡಿದರು   

ಚಿಂತಾಮಣಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಬಾಂಗ್ಲಾ, ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ಇತರೆ ದೇಶಗಳ ಪ್ರಜೆಗಳು ಬಂದು ನೆಲೆಸಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯವಾಗುತ್ತದೆ ಎಂದು ರಾಜ್ಯದ ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್‌ ಖಾನ್‌ ಹೇಳಿದರು.‌

ತಾಲ್ಲೂಕಿನ ಕೈವಾರದಲ್ಲಿ ಶುಕ್ರವಾರ ಮುಸ್ಲಿಂ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಸಹಾಯಧನ ವಿತರಿಸಿ ಮಾತನಾಡಿದರು.

ಕೋಗಿಲುನಲ್ಲಿ ಮನೆಗಳ ತೆರವುಗೊಳಿಸಿದ ಬಗ್ಗೆ ಮಾತನಾಡಿ, ದೇಶಕ್ಕೆ ಯಾರೇ ಅಗಮಿಸಿದರೂ ವೀಸಾ ತೆಗೆದುಕೊಂಡು ಬರಬೇಕು. ವೀಸಾ ಮುಗಿದ ಕೂಡಲೇ ಹೊರಡಬೇಕು. ಎಷ್ಟು ಜನ ಆಗಮಿಸಿದ್ದರು, ಎಷ್ಟು ಜನ ವಾಪಸ್ ಹೋಗಿದ್ದಾರೆ ಎಂಬ ವಿವರಗಳು ರಾಜ್ಯ ಸರ್ಕಾರದಲ್ಲಿ ಇರುವುದಿಲ್ಲ. ಅದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ವೀಸಾ ಮೂಲಕ ಬಂದಿರಲಿ ಅಥವಾ ಕಳ್ಳದಾರಿಯಲ್ಲಿ ಬಂದಿರಲಿ, ನಿಯಂತ್ರಿಸಬೇಕಾಗಿರುವುದು ಕೇಂದ್ರ ಸರ್ಕಾರ. ಅವರು ಬಂದು ನೆಲೆಸಿದ್ದರೆ ಕೇಂದ್ರ ಸರ್ಕಾರದ ವಿಫಲತೆಯನ್ನು ತೋರಿಸುತ್ತದೆ ಎಂದರು.

ADVERTISEMENT

ಬಾಂಗ್ಲಾದಿಂದ ಬಂದವರಿಗೆ ಮನೆ ನೀಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಅಶೋಕ್ ಹೇಳುತ್ತಾರೆ. ಅದು ಹೇಗೆ ಸಾಧ್ಯ? ಆಧಾರ್ ಕಾರ್ಡ್ ಮತ್ತಿತರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ರಾಜ್ಯದವರಿಗೆ ಮಾತ್ರ ಮನೆ ವಿತರಿಸಲಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಪಡೆದುಕೊಳ್ಳಬಹುದು. ವಿರೋಧ ಪಕ್ಷದ ನಾಯಕರಿಗೆ ವಿಷಯ ಗೊತ್ತಿಲ್ಲವೆ? ಬಿಜೆಪಿಯವರು ಕೇವಲ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಳೆದ 2 ವರ್ಷಗಳಿಂದ ಖಾಲಿ ಮಾಡುವಂತೆ ಅವರಿಗೆ ಸಾಕಷ್ಟು ಬಾರಿ ಕೃಷ್ಣಬೈರೇಗೌಡರು ಹೇಳಿದ್ದರು. ನೋಟಿಸ್ ನೀಡಲಾಗಿತ್ತು. ಏನಾದರೂ ಬೆಂಕಿ ಅನಾಹುತ ಆದರೆ ಅಪಾಯವಾಗುತ್ತದೆ. ಆದರೂ ಖಾಲಿ ಮಾಡದಿದ್ದಾಗ ಎಲ್ಲ ಸಿದ್ಧತೆ ಮಾಡಿಕೊಂಡು ತೆರವುಗೊಳಿಸಲಾಯಿತು. ನಿರಾಶ್ರಿತರ ಊಟ, ವಸತಿಗೂ ಛತ್ರಗಳಲ್ಲಿ ಏರ್ಪಾಡು ಮಾಡಲಾಗಿತ್ತು. ಹೊರಟುಬಿಟ್ಟರೆ ಮನೆ ದೊರೆಯುವುದಿಲ್ಲ ಎಂದು ಅವರು ಅಲ್ಲಿಗೆ ತೆರಳಲಿಲ್ಲ ಎಂದು ತಿಳಿಸಿದರು.

ನಿರಾಶ್ರಿತರಾದ ರಾಜ್ಯದ ವಾಸಿಗಳಿಗೆ ಒಂದು ಲಕ್ಷ ಮನೆ ವಿತರಣೆ ಯೋಜನೆಯಲ್ಲಿ ಮನೆ ನೀಡಲು ಮುಖ್ಯಮಂತ್ರಿ ತೀರ್ಮಾನ ಮಾಡಿದರು. ಆ ಯೋಜನೆಯಲ್ಲಿ ಒಂದು ಮನೆಗೆ ₹11.20 ಲಕ್ಷ ವೆಚ್ಚವಾಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಲಾ ₹1.5 ಲಕ್ಷ ನೀಡುತ್ತವೆ. ನಿರಾಶ್ರಿತರಾದವರಿಗೆ ₹5 ಲಕ್ಷ ನೀಡಲಾಗುತ್ತದೆ. ಸಾಮಾನ್ಯ ವರ್ಗದವರು ₹2.5 ಲಕ್ಷ ಹಾಗೂ ಪರಿಶಿಷ್ಟ ವರ್ಗದವರು ₹1.75 ಲಕ್ಷ ನೀಡಬೇಕು. ಅವರು ನಿರಾಶ್ರಿತರಾಗಿರುವುದರಿಂದ ಬ್ಯಾಂಕ್‌ನಿಂದ ಸಾಲದ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕಿನ ಮುರುಗಮಲ್ಲ ದರ್ಗಾ ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಶ್ರಮವಹಿಸಿ ₹34 ಕೋಟಿ ಮಂಜೂರು ಮಾಡಿಸಿ ಇತಿಹಾಸ ನಿರ್ಮಿಸಿದ್ದಾರೆ. ರಾಜ್ಯದ ಯಾವ ಭಾಗದಲ್ಲೂ ದರ್ಗಾ ಅಭಿವೃದ್ಧಿಗೆ ಇಷ್ಟೊಂದು ಹಣ ನೀಡಿಲ್ಲ. ವಕ್ಫ್ ಖಾತೆ ಸಚಿವನಾಗಿ ನನ್ನ ಕೈಯಲ್ಲೂ ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿ, ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಅನೇಕ ಬಾರಿ ಮತನಾಡಿ ಅನುದಾನ ಮಂಜೂರು ಮಾಡಿಸಿದ್ದಾರೆ. ಈ ತಿಂಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.

ಡಾ.ಬಾಲಾಜಿರೆಡ್ಡಿ, ಅಲ್ತಾಫ್ ಖಾನ್, ಜಬ್ಬಾರ್ ಖಾನ್, ಅನ್ವರ್ ಪಾಷಾ ಭಾಗವಹಿಸಿದ್ದರು.

ಕುಮಾರಸ್ವಾಮಿಗೆ ಏಕೆ ಅಸೂಯೆ ?

ಬಳ್ಳಾರಿ ಜಿಲ್ಲೆಯಲ್ಲಿ ಬ್ಯಾನರ್ ವಿಚಾರಕ್ಕೆ ಒಬ್ಬ ಬಡವ ತೀರಿಕೊಂಡ. ಒಂದು ಸಣ್ಣ ಮನೆಯಲ್ಲಿ 5 ಜನ ವಾಸ ಮಾಡುತ್ತಿದ್ದರು. ಅವರ ಮನೆಗೆ ಭೇಟಿ ನೀಡಿ ಒಂದು ಸಣ್ಣ ಕಾಣಿಕೆ ನೀಡಿದೆ. ಅದು ₹25 ಲಕ್ಷ ಎಂದೂ ಹೇಳಿಲ್ಲ. ಒಂದು ವೇಳೆ ₹25 ಲಕ್ಷ ನೀಡಿದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಏಕೆ ಅಸೂಯೆ? ಅವರು ಕೊಡುವುದಿಲ್ಲ ಕೊಡುವವರ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಾರೆ. ಬಡವರಿಗೆ ಸಹಾಯ ಮಾಡುವುದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.