ಚಿಕ್ಕಬಳ್ಳಾಪುರ: ‘ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅಭಿವೃದ್ಧಿಯ ಮತ್ತು ಜನರ ಪರವಾದ ಇಚ್ಛಾಶಕ್ತಿಯ ಕೊರತೆಯೇ ರಸ್ತೆಯ ಎರಡೂ ಬದಿಗಳಲ್ಲಿನ ಅಧ್ವಾನಕ್ಕೆ ಕಾರಣ. ನಾವು ನಗರಕ್ಕೆ ಬರುವಾಗ ಮತ್ತು ವಾಪಸ್ ಹೋಗುವಾಗ ನಮ್ಮ ಬಟ್ಟೆಗಳು ಕೊಳೆ ಆಗುತ್ತವೆಯೇ ಇಲ್ಲವೆ ಎನ್ನುವ ಬಗ್ಗೆ ಎಚ್ಚರವಹಿಸಬೇಕಾದ ಸ್ಥಿತಿ ಇದೆ’–ಹೀಗೆ ನಗರದ ಬಿ.ಬಿ. ರಸ್ತೆಯ ಎರಡೂ ಬದಿಗಳ ಅಧ್ವಾನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಯಲುವಳ್ಳಿಯ ಮಂಜುನಾಥ್.
ಚಿಕ್ಕಬಳ್ಳಾಪುರದ ವಿಶಾಲ್ ಮಾರ್ಟ್ ಮುಂಭಾಗದಿಂದ ಶನೈಶ್ವರ ದೇಗುಲದವರೆಗಿನ ಬಿ.ಬಿ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ಬಂದರೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ರಸ್ತೆ ಎರಡೂ ಬದಿಗಳಲ್ಲಿರುವ ಗುಂಡಿಗಳು ಅಲ್ಲಿನ ನೀರು ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿಗೊಂದು ನಿದರ್ಶನ ಎನ್ನುವ ಅಪಹಾಸ್ಯಕ್ಕೂ ಕಾರಣವಾಗಿದೆ.
ಸ್ವಲ್ಪ ಮಳೆ ಬಂದರೂ ಗುಂಡಿಗಳಲ್ಲಿ ಎರಡು ದಿನ ನೀರು ತುಂಬಿರುತ್ತದೆ. ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದರೆ ಮೂರ್ನಾಲ್ಕು ದಿನಗಳವರೆಗೂ ನೀರು ಇರುತ್ತದೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ಸಂಗ್ರಹ ಸಾಮಾನ್ಯ.
ಹೀಗೆ ರಸ್ತೆಯ ಎರಡೂ ಬದಿಗಳಲ್ಲಿ ನೀರು ಸಂಗ್ರಹವಾಗುವುದರಿಂದ ಬೈಕ್ ಸವಾರರು, ಪಾದಚಾರಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅನನುಕೂಲ. ರಸ್ತೆಯಿಂದ ವಾಹನಗಳು ಕೆಳಕ್ಕೆ ಇಳಿಯುವುದೇ ಇಲ್ಲ. ಇಳಿದರೆ ರಸ್ತೆ ಬದಿಯ ಗುಂಡಿಯಲ್ಲಿ ತುಂಬಿರುವ ಮಳೆ ನೀರು ಪಿಚಕ್ಕನೆ ಮೇಲೆ ಎಗರುತ್ತದೆ. ಮಳೆಗಾಲದ ದಿನಗಳಲ್ಲಿ ಈ ದಾರಿಯಲ್ಲಿ ಸಾಹಸದಿಂದಲೇ ಸಾಗಬೇಕು.
ಪಾದಚಾರಿ ಮಾರ್ಗದಲ್ಲಿ ಸಾಗುವವರೂ ಸಹ ಮಳೆ ನೀರು ತುಂಬಿರುವ ಕಾರಣ ರಸ್ತೆಯಲ್ಲಿಯೇ ಸಂಚರಿಸುವರು. ವೃದ್ಧರಿಗೆ ವೇಗವಾಗಿ ನಡೆಯಲು ಕಷ್ಟ. ಈ ದಾರಿಯಲ್ಲಿ ನಿಧಾನದ ನಡಿಗೆಗೆ ಮುಂದಾದ ವೇಳೆ ಹಿಂಬದಿಯಿಂದ ವಾಹನಗಳ ಹಾರ್ನ್ ಸದ್ದು!
ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯವೂ ಇದೇ ರಸ್ತೆಯಲ್ಲಿ ಓಡಾಡುವರು. ಆದರೆ ಇಲ್ಲಿನ ಅಧ್ವಾನಗಳ ಬಗ್ಗೆ ಮಾತ್ರ ಜಾಣ ಕುರುಡರು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುವರು.
‘ಚರಂಡಿ ನಿರ್ಮಿಸಿ ನೀರು ನಿಲ್ಲದಂತೆ ಕ್ರಮವಹಿಸಿ’
ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಇಲ್ಲವೆ ಗುಂಡಿಗಳನ್ನು ಮುಚ್ಚಿಸಬೇಕು. ಕೆಲವು ಕಡೆ ವಾಣಿಜ್ಯ ಸಂಕೀರ್ಣಗಳ ಮುಂಭಾಗ ಎತ್ತರಕ್ಕೆ ಮಣ್ಣು ಹರಡಿದ್ದಾರೆ. ಅಲ್ಲಿ ಬಿದ್ದ ಮಳೆ ನೀರು ರಸ್ತೆಯ ಬದಿ ಸೇರುತ್ತಿದೆ ಎಂದು ಮಂಜುನಾಥ್ ತಿಳಿಸುವರು. ಕಾರುಗಳು ಬಸ್ ಲಾರಿಗಳು ಸ್ವಲ್ಪ ರಸ್ತೆಯಿಂದ ಕೆಳಕ್ಕೆ ಇಳಿದರೂ ಕೆಸರು ನೀರು ಪಾದಚಾರಿಗಳಿಗೆ ಸಿಡಿಯುತ್ತದೆ. ನಾವೇ ಇಂತಹ ಪರಿಸ್ಥಿತಿ ಎದುರಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.