ADVERTISEMENT

ಚೇಳೂರು | ಕನಿಷ್ಠ ಸೌಲಭ್ಯಗಳೂ ಇಲ್ಲದ ಬದುಕು!

ಚೇಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿದ ಬಿಹಾರ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 3:07 IST
Last Updated 10 ಸೆಪ್ಟೆಂಬರ್ 2025, 3:07 IST
ಹಾವು ಕಡಿತದಿಂದ ಆಸ್ಪತ್ರೆ ಸೇರಿರುವ ಬಿಹಾರ ಕಾರ್ಮಿಕ
ಹಾವು ಕಡಿತದಿಂದ ಆಸ್ಪತ್ರೆ ಸೇರಿರುವ ಬಿಹಾರ ಕಾರ್ಮಿಕ   

ಚೇಳೂರು: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚೇಳೂರು ತಾಲ್ಲೂಕಿಗೆ ಈಗ ಬಿಹಾರ ಕಾರ್ಮಿಕರ ವಲಸೆ ಪರ್ವ ಜೋರಾಗಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶಗಳತ್ತ ಕಣ್ಣು ಹಾಯಿಸಿದರೆ ಬಿಹಾರ ಮೂಲದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವರು.

ಇಂತಹ ಕಾರ್ಮಿಕರು ಎಲ್ಲಿ ವಾಸಿಸುತ್ತಿದ್ದಾರೆ, ಕನಿಷ್ಠ ಮಟ್ಟದಲ್ಲಿ ಸೌಲಭ್ಯಗಳು ದೊರೆಯುತ್ತಿವೆಯೇ ಎಂದು ನೋಡಿದರೆ ನರಕ ಸದೃಶ್ಯ ಸನ್ನಿವೇಶವನ್ನು ಕಾಣಬಹುದು. ತಮ್ಮ ರಾಜ್ಯದಲ್ಲಿ ಯಾವುದೇ ಕೆಲಸ ಸಿಗದೆ ಜೀವನ ನಿರ್ವಹಣೆಗಾಗಿ ಚೇಳೂರಿನ ಹಳ್ಳಿಗಳಲ್ಲಿ ಕೆಲಸಕ್ಕೆ ಬಂದಿರುವ ಈ ಬಿಹಾರ ಕಾರ್ಮಿಕರಿಗೆ ಇಲ್ಲಿನ ಮಾಲೀಕರು ಸಹ ಕನಿಷ್ಠ ಮಟ್ಟದ ಸೌಲಭ್ಯಗಳನ್ನು ದೊರೆಕಿಸಿಕೊಡುತ್ತಿಲ್ಲ.

ಇಟ್ಟಿಗೆ ಕಾರ್ಖಾನೆಗಳು, ಇದ್ದಿಲು ಸಂಗ್ರಹದ ಕೆಲಸಗಳಲ್ಲಿ ಈ ಕಾರ್ಮಿಕರು ತೊಡಗಿದ್ದಾರೆ. ಗ್ರಾಮಗಳ ಹೊರವಲಯಗಳಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

ADVERTISEMENT

ವಿದ್ಯುತ್, ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳ ವ್ಯವಸ್ಥೆಯೂ ಇಲ್ಲ. ಕಾರ್ಮಿಕರುಗದ್ದೆಗಳಲ್ಲಿ ಮತ್ತು ಪಾಳು ಬಿದ್ದಿರುವ ಜಮೀನುಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ಕಡಿದು, ಸುಟ್ಟು, ಇದ್ದಿಲು ತಯಾರಿಸುವರು.

ಮುಳ್ಳಿನ ಗಿಡಗಳು ಉರಿಯುವಾಗ ಬರುವ ಹೊಗೆಯ ಉಸಿರಾಟದ ಸಮಸ್ಯೆಗೂ ಕಾರಣವಾಗುತ್ತದೆ. ಜೊತೆಗೆ, ಕಾಡು ಅಥವಾ ಪೊದೆಗಳ ನಡುವೆ ಕೆಲಸ ಮಾಡುವಾಗ ಹಾವು, ಚೇಳುಗಳು ಕಚ್ಚಿದ ನಿದರ್ಶನವಿದೆ. 

ನಾರೆಮದ್ದೆಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಿವಾರಪಲ್ಲಿ ಹಾಗೂ ಕುರುಬರಹಳ್ಳಿ ಗ್ರಾಮದ ನಡುವಿನ ಮುಳ್ಳಿನ ಗಿಡಗಳನ್ನು ಕಡಿಯುವಾಗ ಕೊಳಕು ಮಂಡಳ ಹಾವು ಕಚ್ಚಿ ಬಿಹಾರ ಕಾರ್ಮಿಕ ರಮೇಶ್ ಆಸ್ಪತ್ರೆ ಸೇರಿದ್ದಾರೆ.

ರಮೇಶ್ ಮತ್ತು ಇವರ ಸ್ನೇಹಿತರು ಇದ್ದಿಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಕಡಿದು ಸುಟ್ಟಿದ್ದ ಮುಳ್ಳಿನ ಗಿಡಗಳ ಇದ್ದಿಲು ಸಂಗ್ರಹಿಸಿ, ಅವುಗಳನ್ನು ಚೀಲಗಳಲ್ಲಿ ತುಂಬಿಸುತ್ತಿರುವಾಗ ಕೊಳಕು ಮಂಡಲ ಹಾವು ರಮೇಶ್ ಕಾಲಿಗೆ ಕಚ್ಚಿದೆ. ಅವರು ತಕ್ಷಣವೇ ಚೀರಿಕೊಂಡರು. ರಮೇಶ್ ಈಗ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.