ADVERTISEMENT

ಚಿಕ್ಕಬಳ್ಳಾಪುರ: ಖಾಸಗಿ ಬಸ್‌ಗಳಿಗೆ ಹೆಚ್ಚಿದ ಪ್ರಯಾಣಿಕರು

ಆಂಧ್ರಪ್ರದೇಶ ಸಾರಿಗೆಗಳತ್ತಲೂ ಮುಖ; ಬಿಕೋ ಎಂದ ಕೆಎಸ್‌ಆರ್‌ಟಿಸಿ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 13:30 IST
Last Updated 8 ಏಪ್ರಿಲ್ 2021, 13:30 IST
ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಬಸ್ ಏರಲು ಸಿದ್ಧವಾಗಿರುವ ಪ್ರಯಾಣಿಕರು
ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಬಸ್ ಏರಲು ಸಿದ್ಧವಾಗಿರುವ ಪ್ರಯಾಣಿಕರು   

ಚಿಕ್ಕಬಳ್ಳಾಪುರ: ಆರನೇ ವೇತನ ಅಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿರುವ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಎರಡನೇ ದಿನವಾದ ಗುರುವಾರವೂ ಮುಂದುವರಿದಿದ್ದು ಜನರು ಪ್ರಯಾಣಕ್ಕೆ ಖಾಸಗಿ ಬಸ್‌ಗಳನ್ನು ಹೆಚ್ಚು ಅವಲಂಬಿಸಿದರು.

ಬುಧವಾರ ನಗರದ ಖಾಸಗಿ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲೇನೂ ಪ್ರಯಾಣಿಕರು ಇರಲಿಲ್ಲ. ಆದರೆ ಮುಷ್ಕರ ಮುಂದುವರಿಯುತ್ತದೆ ಎನ್ನುವುದು ತಿಳಿದ ನಂತರ ಜನರು ಖಾಸಗಿ ಬಸ್‌ಗಳಲ್ಲಿ ತೆರಳು ಮುಂದಾದರು. ಬೆಳಿಗ್ಗೆಯಿಂದಲೂ ಖಾಸಗಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು.

ಹೊರರಾಜ್ಯಗಳಿಗೆ ಓಡಾಟ ನಡೆಸುತ್ತಿದ್ದ ಕೆಲವು ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿಯೇ ಸಂಚರಿಸಿದವು. ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ, ಬೆಂಗಳೂರು, ದೊಡ್ಡಬಳ್ಳಾಪುರಕ್ಕೆ ಖಾಸಗಿ ಬಸ್‌ಗಳು ಸಂಚರಿಸಿದವು.

ADVERTISEMENT

ಆಂಧ್ರಸಾರಿಗೆಗೆ ಬೇಡಿಕೆ: ಬೆಂಗಳೂರಿಗೆ ತೆರಳುತ್ತಿದ್ದ ಆಂಧ್ರಪ್ರದೇಶದ ಸಾರಿಗೆ ಬಸ್‌ಗಳಲ್ಲಿಯೂ ಜನರು ಪ್ರಯಾಣಿಸಿದರು. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶದಕ್ಕೆ ಸಾಗುವ ಬಸ್‌ಗಳಲ್ಲಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಪೊಲೀಸರು ಮಾತ್ರ ಭದ್ರತೆಗೆ ಇದ್ದರು.

ಬೆಳಿಗ್ಗೆ ಬಾಗೇಪಲ್ಲಿಗೆ ಪ್ರಯಾಣಿಸಲು ಮುಂದಾಗಿದ್ದ ಕೆಲವು ಶಿಕ್ಷಕರಿಗೆ ಬಸ್ ಇಲ್ಲದೆ ಸಮಸ್ಯೆ ಆಯಿತು. ಬಹಳಷ್ಟು ಸಮಯದ ನಂತರ ಅವರು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಿದರು.

ನಗರದ ಹೊರವಲಯದ ಹಳ್ಳಿಗಳ ಜನರು ಪಟ್ಟಣಕ್ಕೆ ಬರಲು ಆಟೊಗಳನ್ನು ಅವಲಂಬಿಸಿದ್ದರು. ಸೀಟ್ ಆಟೊಗಳಲ್ಲಿ ಜನ ಜಂಗುಳಿಯಿತ್ತು.

ಬಸ್ ಮೇಲೆ ಕಲ್ಲು ತೂರಾಟ

ಬೆಂಗಳೂರಿನಿಂದ ಸಿಕಂದರಾಬಾದ್ ಕಡೆಗೆ ಸಾಗುತ್ತಿದ್ದ ಬೆಂಗಳೂರು ಕೇಂದ್ರ ವಿಭಾಗ ಘಟಕ-2ರ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಗುಡಿಬಂಡೆ ತಾಲ್ಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿ ಕಲ್ಲು ತೂರಲಾಗಿದೆ. ಬುಧವಾರ ನಡುರಾತ್ರಿ ಬಸ್ ಬೆಂಗಳೂರಿನಿಂದ ಹೊರಟಿತ್ತು. ಗುರುವಾರ ಬೆಳಗಿನ ಜಾವ 5ರ ಸುಮಾರಿನಲ್ಲಿ ಬಸ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬಸ್‌ನಲ್ಲಿ 30 ಜನ ಪ್ರಯಾಣಿಕರು ಇದ್ದರು. ಯಾರಿಗೂ ಅಪಾಯವಾಗಿಲ್ಲ. ಈ ಸಂಬಂಧ ಗುಡಿಬಂಡೆ ಠಾಣೆಗೆ ಬಸ್ ಚಾಲಕ ಮತ್ತು ನಿರ್ವಾಹಕ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.