ADVERTISEMENT

ಚಿಕ್ಕಬಳ್ಳಾಪುರ | ಗಾಂಜಾ ಘಾಟು; 5 ವರ್ಷದಲ್ಲಿ 192 ಪ್ರಕರಣ

ಡಿ.ಎಂ.ಕುರ್ಕೆ ಪ್ರಶಾಂತ
Published 31 ಡಿಸೆಂಬರ್ 2025, 3:49 IST
Last Updated 31 ಡಿಸೆಂಬರ್ 2025, 3:49 IST
ಒಂಟೂರು ಗ್ರಾಮದಲ್ಲಿ ಗಾಂಜಾ ಗಿಡ ವಶಪಡಿಸಿಕೊಳ್ಳುತ್ತಿರುವ ಪೊಲೀಸರು (ಸಂಗ್ರಹ ಚಿತ್ರ)
ಒಂಟೂರು ಗ್ರಾಮದಲ್ಲಿ ಗಾಂಜಾ ಗಿಡ ವಶಪಡಿಸಿಕೊಳ್ಳುತ್ತಿರುವ ಪೊಲೀಸರು (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಗಾಂಜಾ ಘಾಟು ಜೋರಾಗಿಯೇ ಇದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಗಾಂಜಾಗೆ ಸಂಬಂಧಿಸಿದಂತೆ 192 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಪೊಲೀಸ್ ಇಲಾಖೆ ₹2.16 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದೆ.

ಇತ್ತೀಚೆಗಷ್ಟೇ ಗಾಂಜಾ ಸಾಗಾಣೆ ಮತ್ತು ಮಾರಾಟದ ಪ್ರಕರಣದ ಆರೋಪಿಯೊಬ್ಬನಿಗೆ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿದೆ. ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರಿನಲ್ಲಿ ಆಗಾಗ್ಗೆ ಗಾಂಜಾ ಮಾರಾಟ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಪ್ರಕರಣಗಳೂ ದಾಖಲಾಗಿವೆ.

2023ರಲ್ಲಿ ₹ 37.60 ಲಕ್ಷ ಮೌಲ್ಯದ 119 ಕೆ.ಜಿ 409 ಗ್ರಾಂ ಮಾದಕ ವಸ್ತುಗಳನ್ನು 50 ಪ್ರಕರಣಗಳಲ್ಲಿ ನಾಶಪಡಿಸಲಾಗಿದೆ. 2024ರಲ್ಲಿ ₹56.78 ಲಕ್ಷ ಮೌಲ್ಯದ 176 ಕೆ.ಜಿ 757 ಗ್ರಾಂ ಮಾದಕ ವಸ್ತುಗಳನ್ನು 22 ಪ್ರಕರಣಗಳಲ್ಲಿ ನಾಶಪಡಿಸಲಾಗಿದೆ. 2025ರಲ್ಲಿಯೂ 33 ಪ್ರಕರಣಗಳಲ್ಲಿ 133 ಕೆ.ಜಿ 759 ಗ್ರಾಂ ಮಾದಕವನ್ನು ಜಿಲ್ಲೆಯ ಪೊಲೀಸರು ನಾಶಗೊಳಿಸಿದ್ದಾರೆ. 

ADVERTISEMENT

ವಿಶೇಷವಾಗಿ ಜಿಲ್ಲೆಯು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕಾರಣ ಆ ರಾಜ್ಯದಿಂದ ಗಾಂಜಾ ಜಿಲ್ಲೆಗೆ ಪೂರೈಕೆ ಆಗುವ ಸಾಧ್ಯತೆ ಹೆಚ್ಚಿದೆ. ಗಾಂಜಾ ನಶೆಯಲ್ಲಿ ಚಿಕ್ಕಬಳ್ಳಾಪುರದ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಚಾಕು ಇರಿತದ ಪ್ರಕರಣಗಳು ಸಹ ಈ ಹಿಂದೆ ನಡೆದಿವೆ.

ಜಿಲ್ಲೆಯ ನಗರ, ಹಳ್ಳಿಗಳಲ್ಲಿಯೂ ಗಾಂಜಾ ಘಾಟು ಅಡರಿದೆ. ಒಂದೆಡೆ ಪೊಲೀಸರು ಆರೋಪಿಗಳನ್ನು ಹಿಡಿದು ಗಾಂಜಾ ವಶಕ್ಕೆ ಪಡೆಯುತ್ತಿದ್ದಾರೆ. ಹೀಗಿದ್ದರೂ ಪೂರ್ಣ ವಿರಾಮ ಹಾಕಲು ಸಾಧ್ಯವಾಗಿಲ್ಲ.

ಜಿಲ್ಲಾ ಪೊಲೀಸ್ ಇಲಾಖೆಯು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್‌) ಕುರಿತು ಶಾಲಾ, ಕಾಲೇಜುಗಳಲ್ಲಿ ನಿರಂತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಪೆಡ್ಲರ್‌ಗಳು ಯುವ ಸಮುದಾಯವನ್ನೇ ಮುಖ್ಯವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಮತ್ತು ಯುವ ಸಮುದಾಯವನ್ನು ದುಶ್ಚಟದಿಂದ ದೂರ ಮಾಡಲು ಪೊಲೀಸ್ ಇಲಾಖೆ ಎನ್‌ಡಿಪಿಎಸ್‌ ಜಾಗೃತಿ ಕಾರ್ಯಕ್ರಮಗಳನ್ನು ಆಂದೋಲನದ ರೂಪದಲ್ಲಿ ನಡೆಸುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಪಿಎಸ್‌ಐವರೆಗಿನ ಅಧಿಕಾರಿಗಳು ಈ ಜಾಗೃತಿ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಒಂದೂಕಾಲು ವರ್ಷದಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಈ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಈ ಅವಧಿಯಲ್ಲಿ 7,552 ವಿದ್ಯಾರ್ಥಿಗಳನ್ನು ಜಾಗೃತಿ ಕಾರ್ಯಕ್ರಮಗಳು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.