ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿಕ್ಕಬಳ್ಳಾಪುರ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶನಿವಾರ ನಡೆದ ‘ಭಕ್ತ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಡಳಿತಾತ್ಮಕವಾಗಿ ಮಾದಿಗ ಸಮಾಜ ಮುಂದೆ ಬರಬೇಕು ಎಂದು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಮಾದಿಗ ಸಮಾಜದವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಸ್ವಾತಂತ್ರ್ಯ ನಂತರ ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯನ್ನು ಮಾದಿಗ ಸಮಾಜವು ಪಡೆದಿರಲಿಲ್ಲ. ಹುದ್ದೆ ನೀಡುವ ಮೂಲಕ ಶೋಷಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದ್ದು ದೇವೇಗೌಡರ ಕುಟುಂಬ ಎಂದು ಬಣ್ಣಿಸಿದರು.
ಮಧ್ಯ ಕರ್ನಾಟಕದ ಸಾಮಾನ್ಯ ಕುಟುಂಬದ ಮಾದಿಗ ಸಮುದಾಯದ ಡಿ.ಮಂಜುನಾಥ್ ಅವರನ್ನು ಹಂತ ಹಂತವಾಗಿ ರಾಜಕೀಯವಾಗಿ ದೇವೇಗೌಡರು ಬೆಳೆಸಿದರು. ಮಾದಿಗ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಭಾಷಣ ಮಾಡಲಿಲ್ಲ. ಈ ಕುಟುಂಬ ಇದನ್ನು ಕೃತಿಯಲ್ಲಿ ಮಾಡಿ ತೋರಿಸಿತು ಎಂದು ಶ್ಲಾಘಿಸಿದರು.
ಮಾದಾರ ಗುರುಪೀಠಕ್ಕೆ ಮೊದಲ ಕಾಣಿಕೆ ನೀಡಿದ್ದು ಎಚ್.ಡಿ.ಕುಮಾರಸ್ವಾಮಿ, ಆಶೀರ್ವದಿಸಿದ್ದು ಬಾಲಗಂಗಾಧರನಾಥ ಸ್ವಾಮೀಜಿ ಎಂದರು.
ಮಧ್ಯಕರ್ನಾಟಕದಲ್ಲಿ ಮಡಿವಾಳ, ಬಂಜಾರ, ಭೋವಿ ಸೇರಿದಂತೆ ಶೋಷಿತ ಸಮುದಾಯದ ಹಲವು ಮಠ, ಪೀಠಗಳು ಇವೆ. ಈ ಎಲ್ಲ ಮಠ ಪೀಠಗಳು ಒಕ್ಕಲಿಗ ಸಮುದಾಯ, ಆದಿಚುಂಚನಗಿರಿ ಮಠವನ್ನು ಮರೆಯುವ ಸ್ಥಿತಿಯಲ್ಲಿ ಇಲ್ಲ. ಶೋಷಿತ ಸಮುದಾಯಗಳನ್ನು ಆಶೀರ್ವದಿಸುವ ಮೂಲಕ ಸಾಮಾಜಿಕ ನ್ಯಾಯ, ಅಂಬೇಡ್ಕರ್ ಅವರ ತತ್ವಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಿಗಿಲಾಗಿ ಆದಿಚುಂಚನಗಿರಿ ಮಠ ಕೆಲಸ ಮಾಡುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.