ADVERTISEMENT

ಚೇಳೂರು | ಹೊಸ ತಾಲ್ಲೂಕು ಅಭಿವೃದ್ಧಿಗೆ ಅನುದಾನದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 5:24 IST
Last Updated 1 ಮಾರ್ಚ್ 2026, 5:24 IST
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಚೇಳೂರು ತಾಲ್ಲೂಕು ಕಚೇರಿ
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಚೇಳೂರು ತಾಲ್ಲೂಕು ಕಚೇರಿ   

ಚೇಳೂರು: ಪ್ರಸಕ್ತ ಬಜೆಟ್‌ನಲ್ಲಿ ಚೇಳೂರು ತಾಲ್ಲೂಕಿನ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೃಷಿ ಪ್ರಧಾನವಾದ ಹಾಗೂ ಸದಾ ಬರಗಾಲದ ನೆರಳಿನಲ್ಲಿರುವ ಈ ಭಾಗಕ್ಕೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಆಗಲಿದೆಯೇ ಎನ್ನುವ ನಿರೀಕ್ಷೆ ಇದೆ. ಹೊಸ ತಾಲ್ಲೂಕಿನ ಹಣೆಪಟ್ಟಿಯ ಕಾರಣ ಭರಪೂರ ಅನುದಾನದ ನಿರೀಕ್ಷೆಯನ್ನೂ ಇಲ್ಲಿನ ಜನರು ಹೊಂದಿದ್ದಾರೆ.

ಚೇಳೂರು ತಾಲ್ಲೂಕು ಅಸ್ತಿತ್ವಕ್ಕೆ ಬಂದು ವರ್ಷಗಳೇ ಕಳೆದರೂ ಇನ್ನೂ ಅನೇಕ ಪ್ರಮುಖ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜನಸಾಮಾನ್ಯರು ಒಂದು ಸಣ್ಣ ಕೆಲಸಕ್ಕೂ ಹತ್ತಿರದ ಬಾಗೇಪಲ್ಲಿ ತಾಲ್ಲೂಕಿಗೆ ಅಲೆಯುವಂತಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸುಸಜ್ಜಿತ ಮಿನಿ ವಿಧಾನ ಸೌಧ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ಮೀಸಲಿಡಬೇಕು ಎನ್ನುವುದು ಸಾರ್ವಜನಿಕರ ಪ್ರಬಲ ಹಕ್ಕೊತ್ತಾಯ.

ತಾಲ್ಲೂಕು ಕೃಷಿ ಪ್ರಧಾನ ಪ್ರದೇಶವಾಗಿದೆ. ಶೇ 80ರಷ್ಟು ಜನರು ಭೂಮಿ ನಂಬಿ ಬದುಕುತ್ತಿದ್ದಾರೆ. ಆದರೆ, ಸತತ ಮಳೆ ಕೊರತೆ ಮತ್ತು ಅಂತರ್ಜಲ ಕುಸಿತ ರೈತರನ್ನು ಕಂಗಾಲಾಗಿಸಿದೆ. ಎಚ್.ಎನ್. ವ್ಯಾಲಿ ಅಥವಾ ಕೆ.ಸಿ. ವ್ಯಾಲಿ ಯೋಜನೆಯಡಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ.

ADVERTISEMENT

ತಾಲ್ಲೂಕಿನ 70ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಯೋಜನೆಗೆ ವೇಗ ನೀಡಲು ವಿಶೇಷ ಅನುದಾನ ಹಾಗೂ ಅಂತರ್ಜಲ ವೃದ್ಧಿಗೆ ಕಿರು ಜಲಾನಯನ ಯೋಜನೆಗಳ ಅನುಷ್ಠಾನ ಕುರಿತ ನಿರೀಕ್ಷೆಗಳು ಗರಿಗೆದರಿವೆ.

ಈ ಭಾಗದಲ್ಲಿ ಮಾವು, ಟೊಮೆಟೊ ಮತ್ತು ರೇಷ್ಮೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಬೆಲೆ ಕುಸಿದಾಗ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಕೋಲ್ಡ್ ಸ್ಟೋರೇಜ್ (ಶೀತಲೀಕರಣ ಕೇಂದ್ರ) ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆ ಅನಿವಾರ್ಯವಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ ಘೋಷಣೆ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ರೈತರು.

ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಅವಶ್ಯಕತೆ ಇದೆ. ಸದ್ಯದ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿದೆ. ಇಲ್ಲಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪಕ್ಕದ ಬಾಗೇಪಲ್ಲಿ ಅಥವಾ ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಚೇಳೂರಿನಲ್ಲಿ ಹೊಸದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥವಾ ತಾಂತ್ರಿಕ ಶಿಕ್ಷಣ ಸಂಸ್ಥೆ ಘೋಷಣೆ ಮಾಡಬೇಕಿದೆ.

ಸದ್ಯ ಈ ಭಾಗದ ಯುವಜನರು ಉದ್ಯೋಗ ಅರಸಿ ಬೆಂಗಳೂರು ಅಥವಾ ನೆರೆಯ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಣ್ಣ ಕೈಗಾರಿಕೆಗಳು ಆರಂಭವಾದರೆ ಸ್ಥಳೀಯ ಯುವಕರಿಗೆ ಮತ್ತು ಮಹಿಳೆಯರಿಗೆ ಕೆಲಸ ದೊರೆಯಲಿದೆ.  

ತಾಲೂಕು ಕೇಂದ್ರವಾದರೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಕೊರತೆಯಿದೆ. ಹಣದ ಠೇವಣಿ, ಸಾಲದ ಸೌಲಭ್ಯ ಅಥವಾ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಜನರು ಬಾಗೇಪಲ್ಲಿಗೆ ಅಲೆಯುವಂತಾಗಿದೆ. ಹಣಕಾಸಿನ ವಹಿವಾಟಿಗೆ ಪೂರಕವಾಗಿ ಹೆಚ್ಚಿನ ಬ್ಯಾಂಕ್ ಶಾಖೆಗಳ ಅವಶ್ಯಕತೆಯಿದೆ.

ಪಟ್ಟಣ ಪಂಚಾಯಿತಿ ಸ್ಥಾನ: ಚೇಳೂರು ತಾಲ್ಲೂಕು ಕೇಂದ್ರವಾದರೂ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯಾಗಿಯೇ ಮುಂದುವರಿದಿದೆ. ಬಜೆಟ್‌ನಲ್ಲಿ ಚೇಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವ ನಿರೀಕ್ಷೆಗಳು ಹೆಚ್ಚಿವೆ. ಇಲ್ಲಿನ ಜನಸಂಖ್ಯೆ ಮತ್ತು ವಾಣಿಜ್ಯ ಚಟುವಟಿಕೆಗಳು ಗಣನೀಯವಾಗಿ ಏರಿಕೆಯಾಗಿವೆ.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೆ ಸರ್ಕಾರದ ಅನುದಾನದ ಪ್ರಮಾಣ ಹೆಚ್ಚಾಗುತ್ತದೆ. ಸುಸಜ್ಜಿತ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಮತ್ತು ಬೀದಿ ದೀಪಗಳ ನಿರ್ವಹಣೆಗೆ ಹೆಚ್ಚಿನ ವೇಗ ಸಿಗಲಿದೆ.

ಚೇಳೂರಿಗೆ ಈಗಲೂ ಸುಸಜ್ಜಿತ ಬಸ್ ನಿಲ್ದಾಣವಿಲ್ಲ. ಪ್ರತಿದಿನ ನೂರಾರು ಬಸ್‌ಗಳು ಚೇಳೂರು ಮಾರ್ಗವಾಗಿ ಸಂಚರಿಸುತ್ತವೆ. ನೆರೆರಾಜ್ಯ ಆಂಧ್ರಪ್ರದೇಶ ಹಾಗೂ  ಬೆಂಗಳೂರು, ಚಿಂತಾಮಣಿ, ಬಾಗೇಪಲ್ಲಿಗೆ ಹೋಗುವ ಸಾವಿರಾರು ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಂತು ಬಸ್ ಕಾಯಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆ ಮುಕ್ತಿಗೆ ಬಜೆಟ್ ಮೇಲೆ ಜನರು ನಿರೀಕ್ಷೆ ಹೊಂದಿದ್ದಾರೆ.

ಈ ಬಾರಿಯ ಬಜೆಟ್ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೋಗಲಾಡಿಸಿ ‘ಮಾದರಿ ತಾಲ್ಲೂಕು’ ಆಗಲು ಅಡಿಪಾಯ ಹಾಕಲಿ ಎನ್ನುವುದು ಜನರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.