ADVERTISEMENT

ಚಿಕ್ಕಬಳ್ಳಾಪುರ: ಸಂಧಾನಕ್ಕೆ ಸಿದ್ಧವಾಯಿತೇ ಸೂತ್ರ...?

ಮರಳುಕುಂಟೆ ಕೃಷ್ಣಮೂರ್ತಿ–ಕೆ.ವಿ.ನಾಗರಾಜ್ ನಡುವಿನ ಭಿನ್ನಾಭಿಪ್ರಾಯಕ್ಕೆ ತೇಪೆ ಹಾಕಲು ಮುಂದಾದ ಸುಧಾಕರ್

ಡಿ.ಎಂ.ಕುರ್ಕೆ ಪ್ರಶಾಂತ
Published 8 ಮೇ 2025, 5:10 IST
Last Updated 8 ಮೇ 2025, 5:10 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮತ್ತು ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ನಡುವೆ ಮೂಡಿರುವ ಬಿರುಕಿಗೆ ಸಂಸದ ಡಾ.ಕೆ.ಸುಧಾಕರ್ ತೇಪ ಹಚ್ಚಲು ಮುಂದಾಗಿದ್ದಾರೆ ಎನ್ನುತ್ತವೆ ಬಿಜೆಪಿ ಮತ್ತು ಸಂಸದರ ಆಪ್ತ ಮೂಲಗಳು.

ಇತ್ತೀಚೆಗೆ ಸಂಸದ ಡಾ.ಕೆ.ಸುಧಾಕರ್ ಅವರ ಬೆಂಗಳೂರು ನಿವಾಸಕ್ಕೆ ಕೃಷ್ಣಮೂರ್ತಿ ಮತ್ತು ಅವರ 50ಕ್ಕೂ ಹೆಚ್ಚು ಬೆಂಬಲಿಗರು ತೆರಳಿದ್ದರು. ಈ ವೇಳೆ ಕೆ.ವಿ.ನಾಗರಾಜ್ ಅವರ ವಿರುದ್ಧ ಈ ತಂಡ ಅಸಮಾಧಾನ ವ್ಯಕ್ತಪಡಿಸಿ‌ತ್ತು. ಒಂದು ಹಂತದಲ್ಲಿ ‘ಪಕ್ಷದಲ್ಲಿ ನಾವು ಇರಬೇಕು ಇಲ್ಲ ಅವರು ಇರಬೇಕು’ ಎನ್ನುವ ಮಾತುಗಳನ್ನೂ ಆಡಿದ್ದಾರೆ. 

ಶನಿವಾರ (ಮೇ 10) ಚಿಕ್ಕಬಳ್ಳಾಪುರದಲ್ಲಿ ಮಾತುಕತೆ ನಡೆಸುವುದಾಗಿ ಸುಧಾಕರ್ ಭರವಸೆ ನೀಡಿದ ಕಾರಣ ಕೃಷ್ಣಮೂರ್ತಿ ತಂಡ ತಣ್ಣಗಾಗಿದೆ. ಈಗ ಸುಧಾಕರ್ ಈ ಇಬ್ಬರು ನಾಯಕರ ನಡುವೆ ಯಾವ ಸಂಧಾನ ಸೂತ್ರ ಹೆಣೆಯುತ್ತಾರೆ ಎನ್ನುವ ಕುತೂಹಲವಿದೆ. 

ADVERTISEMENT

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಮುಖ ಮುಖಂಡರಾಗಿರುವ ಈ ಇಬ್ಬರೂ ಸಂಸದರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.  

ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ಚುನಾವಣೆ ನಂತರ ಇಬ್ಬರ ಮುಖಂಡರ ನಡುವಿನ ಶೀತಲ ಸಮರ ಹೆಚ್ಚಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಜಯ ಸಾಧಿಸಿದರೂ ಮರಳುಕುಂಟೆ ಕೃಷ್ಣಮೂರ್ತಿ ಅವರ ಸೋಲು ಪಕ್ಷದಲ್ಲಿ ಆಂತರಿಕವಾಗಿ ಬಿರುಸಿನ ಚರ್ಚೆಗೆ ಕಾರಣವಾಗಿತ್ತು.  

ತಮ್ಮ ಸೋಲಿನಲ್ಲಿ ಕೆ.ವಿ.ನಾಗರಾಜ್ ಅವರ ಪಾತ್ರವಿದೆ ಎಂದು ಸುಧಾಕರ್ ಅವರ ಬಳಿ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿಂದೆ ನಡೆದ ಕೋಚಿಮುಲ್ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರು ಕೆ.ವಿ.ನಾಗರಾಜ್ ಅವರ ಸೋಲಿನಲ್ಲಿ ಪಾತ್ರವಹಿಸಿದ್ದರು. ಆದ ಕಾರಣ ನಾಗರಾಜ್ ಈಗ ಆ ಸೇಡು ತೀರಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಕೇಳಿ ಬಂದಿದ್ದವು. ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿಯೂ ಈ ಇಬ್ಬರು ನಾಯಕರ ನಡುವೆ ಚಕಮಕಿ ನಡೆದಿತ್ತು.

ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಇದೆ. ಈ ಕಾರಣದಿಂದ ಸಣ್ಣ ಭಿನ್ನಾಭಿಪ್ರಾಯಗಳು, ನಾಯಕರ ನಡುವಿನ ವೈಮನಸ್ಸುಗಳು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ಈ ಕಾರಣದಿಂದ ನಾಯಕರ ನಡುವೆ ಮೂಡಿರುವ ವೈಮನಸ್ಸುಗಳನ್ನು ಸರಿಪಡಿಸಲೇಬೇಕಾಗಿದೆ. ಮುಂದಿನ ದಿನಗಳಲ್ಲಿ ಕೆ.ವಿ.ನಾಗರಾಜ್ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ಮತ್ತು ಮರಳುಕುಂಟೆ ಕೃಷ್ಣಮೂರ್ತಿ ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೆ ದೃಷ್ಟಿ ಇಟ್ಟಿದ್ದಾರೆ. ಈ ಎಲ್ಲ ಕಾರಣದಿಂದ ಸುಧಾಕರ್ ಯಾವ ಸಂಧಾನ ಸೂತ್ರ ಹೆಣೆಯುವರು, ಇಬ್ಬರು ಮುಖಂಡ ನಡುವೆ ಮೂಡಿರುವ ಭಿನ್ನಮತ ಶಮನ ಆಗುತ್ತದೆಯೇ ಎನ್ನುವ ಕುತೂಹಲ ಪಕ್ಷದ ನಾಯಕರಲ್ಲಿದೆ. 

ಮರಳುಕುಂಟೆ ಕೃಷ್ಣಮೂರ್ತಿ

ಕೆ.ವಿ.ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.