ADVERTISEMENT

ಚಿಕ್ಕಬಳ್ಳಾಪುರ | ಒಂದು ವರ್ಷದೊಳಗೆ ಬಾಲ್ಯವಿವಾಹ ಮುಕ್ತ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:58 IST
Last Updated 28 ನವೆಂಬರ್ 2025, 4:58 IST
ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ  ಪ್ರೌಢಶಾಲೆಯಲ್ಲಿ ರಿಹ್ಯಾಬಿಲಿಟೇಶನ್ ಎಜುಕೇಶನ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಅಭಿಯಾನದ ಜಾಗೃತಿ ನಡೆಯಿತು 
ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ  ಪ್ರೌಢಶಾಲೆಯಲ್ಲಿ ರಿಹ್ಯಾಬಿಲಿಟೇಶನ್ ಎಜುಕೇಶನ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಅಭಿಯಾನದ ಜಾಗೃತಿ ನಡೆಯಿತು    

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಪ್ರೌಢಶಾಲೆಯಲ್ಲಿ ರಿಹ್ಯಾಬಿಲಿಟೇಶನ್ ಎಜುಕೇಶನ್ ಆ್ಯಂಡ್ ಡೆವಲಪ್‌ಮೆಂಟ್ (ಆರ್‌ಇಎಡಿ) ಸಂಸ್ಥೆ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಅಭಿಯಾನದ ಜಾಗೃತಿ ಕಾರ್ಯಕ್ರಮವು ಗುರುವಾರ ನಡೆಯಿತು.

ಸಂಸ್ಥೆ ನಿರ್ದೇಶಕ ಸ್ಯಾಮ್ ಚೆಲ್ಲದುರೈ ಮಾತನಾಡಿ, ಹೆಣ್ಣು ಮಕ್ಕಳು ಬಾಲ್ಯ ವಿವಾಹದ ಹೆಸರಿನಲ್ಲಿ ಶೋಷಣೆ, ದೌರ್ಜನ್ಯ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ದೃಢಸಂಕಲ್ಪದಿಂದ ಒಂದು ವರ್ಷದೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸುತ್ತೇವೆ ಎನ್ನುವ ನಂಬಿಕೆ ನಮಗಿದೆ. ಬಾಲ್ಯವಿವಾಹ ಎಂಬ ಅಪರಾಧವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದರು.

ಬಾಲ್ಯ ವಿವಾಹದ ವಿರುದ್ಧ ಮೂರು ಹಂತದಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ. 2026ರ ಮಾ.8ರ ಅಂತರರಾಷ್ಟ್ರೀಯ ಮಹಿಳಾ ದಿನದಂದು ಅಭಿಯಾನ  ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ADVERTISEMENT

ಮೊದಲ ಹಂತವು ಡಿ.31ರ ವರೆಗೆ ನಡೆಯಲಿದ್ದು, ಇದರಲ್ಲಿ ಶಾಲೆಗಳು, ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲಾಗುವುದು.
ಎರಡನೇ ಹಂತವು ಜ.1ರಿಂದ 31ರವರೆಗೆ ನಡೆಯಲಿದ್ದು ದೇವಾಲಯಗಳು, ಮಸೀದಿಗಳು, ಚರ್ಚುಗಳು, ಗುರುದ್ವಾರಗಳು, ಕಲ್ಯಾಣ ಮಂಟಪಗಳು ಹಾಗೂ ವಿವಾಹ ಸಂಬಂಧಿತ ಸೇವಾ ಪೂರೈಕೆದಾರರನ್ನು ಕೇಂದ್ರೀಕರಿಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. 

ಮೂರನೇ ಹಂತವು ಮಾರ್ಚ್ 8ರವರೆಗೆ ನಡೆಯಲಿದೆ. ಗ್ರಾಮ ಪಂಚಾಯಿತಿ ಮತ್ತು ನಗರದ ವಾರ್ಡ್‌ಗಳಲ್ಲಿ ಅಭಿಯಾನ ನಡೆಯಲಿದೆ ಎಂದರು.

ಜಿಲ್ಲೆಯನ್ನು ಒಂದು ವರ್ಷದೊಳಗೆ ಬಾಲ್ಯವಿವಾಹ ಮುಕ್ತ ಜಿಲ್ಲೆ ಎಂದು ಘೋಷಿಸುವ ಗುರಿ ಇದೆ. ಸಂಸ್ಥೆಯು ದೇಶದ 451 ಜಿಲ್ಲೆಗಳಲ್ಲಿ ಬಾಲ್ಯವಿವಾಹ ನಿರ್ಮೂಲನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 250ಕ್ಕೂ ಅಧಿಕ ಸಂಸ್ಥೆಗಳಿರುವ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಜಾಲದ ಸಹಭಾಗಿಯಾಗಿದೆ. ಕಳೆದ ಒಂದು ವರ್ಷದಲ್ಲೇ ಈ ಜಾಲವು ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ತಡೆದಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.