
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಆರು, ಬಿಜೆಪಿ ಜೆಡಿಎಸ್‌ನ ಮೈತ್ರಿಕೂಟ ಬೆಂಬಲಿತ ಐದು ಮತ್ತು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈಗ ಯಾರು ಚಿಮುಲ್ ಅಧ್ಯಕ್ಷರಾಗುವರು ಎನ್ನುವ ಚರ್ಚೆ ಜಿಲ್ಲೆಯ ಸಹಕಾರ ಮತ್ತು ರಾಜಕೀಯ ವಲಯದಲ್ಲಿ ಜೋರಾಗಿದೆ. ವಿಶೇಷವಾಗಿ ಬಾಗೇಪಲ್ಲಿ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರತ್ತ ಕಾಂಗ್ರೆಸ್ ನಿರ್ದೇಶಕರು ಪ್ರಮುಖವಾಗಿ ಚಿತ್ತ ಹರಿಸಿದ್ದಾರೆ.
ಬಾಗೇಪಲ್ಲಿಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಮಂಜುನಾಥ ರೆಡ್ಡಿ ಮತ್ತು ಚಿಂತಾಮಣಿಯಿಂದ ಗೆಲುವು ಸಾಧಿಸಿರುವ ಅಶ್ವತ್ಥನಾರಾಯಣ ಬಾಬು ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಮಂಜುನಾಥ ರೆಡ್ಡಿ ನಾಲ್ಕು ಮತ್ತು ಅಶ್ವತ್ಥನಾರಾಯಣ ಬಾಬು ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಈ ಇಬ್ಬರು ನಾಯಕರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರ ಕೃಪಾದೃಷ್ಟಿ ಯಾರ ಮೇಲಿದೆ ಎನ್ನುವುದು ಬಹಿರಂಗವಾಗಿಲ್ಲ. ಇದಲ್ಲದೆ ಐದು ಸ್ಥಾನಗಳಿಗೆ ನಾಮನಿರ್ದೇಶನ ಸಹ ನಡೆಯಲಿದೆ. ಸರ್ಕಾರದ ನಾಮನಿರ್ದೇಶಕರು, ಎನ್‌ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿಯು ಚಿಮುಲ್ ನಿರ್ದೇಶಕರಾಗುವರು. ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಕಾರಣ ನಾಮನಿರ್ದೇಶಿತ ಐದು ಸ್ಥಾನಗಳು ಕಾಂಗ್ರೆಸ್ ಪರವಾಗಿರಲಿವೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಅಧ್ಯಕ್ಷರಾಗುವುದು ಖಚಿತ.
ಮಂಚೇನಹಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂತರಾಜು ಸಹ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಜೊತೆಗಿದ್ದ ಅವರು ಈಗ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರ ಜೊತೆಯಲ್ಲಿದ್ದಾರೆ. ಕಾಂತರಾಜು ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಚಾಲ್ತಿಗೆ ಬಂದರೆ ಅದಕ್ಕೆ ಶಿವಶಂಕರ ರೆಡ್ಡಿ ಒಪ್ಪುವುದಿಲ್ಲ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.