
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಪೆರೇಸಂದ್ರ ಕ್ಷೇತ್ರಕ್ಕೆ ಕೆ.ವಿ.ನಾಗರಾಜ್, ಮಂಚೇನಹಳ್ಳಿ ಕ್ಷೇತ್ರಕ್ಕೆ ಶ್ರೀನಾಥ್ ಬಾಬು
ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರಕ್ಕೆ ಸುನಂದಮ್ಮ ಮತ್ತು ಗುಡಿಬಂಡೆ ಕ್ಷೇತ್ರದಿಂದ ಭೈರರೆಡ್ಡಿ ಎನ್‌ಡಿಎ ಅಭ್ಯರ್ಥಿಗಳಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಚಿಮುಲ್) ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪೆರೇಸಂದ್ರ ಕ್ಷೇತ್ರದಿಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಿರಿಯ ಸಹಕಾರ ಧುರೀಣ ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಪೆರೇಸಂದ್ರ ಕ್ಷೇತ್ರದಲ್ಲಿ ಸಂಸದ ಡಾ. ಕೆ. ಸುಧಾಕರ್ ಅವರ ಸಂಬಂಧಿಕ ಗರಗಿರೆಡ್ಡಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಒಕ್ಕೂಟದ ಹಿತದೃಷ್ಟಿಯಿಂದ ಅನುಭವಿ ನಾಯಕ ಕೆ.ವಿ. ನಾಗರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿರುವ ಗರಗಿರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ನೀಡಿ, ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ಸಂಸದರು ನೀಡಿದ್ದಾರೆ ಎನ್ನುವ ಮಾತುಗಳಿವೆ.
ಮತ್ತೊಬ್ಬ ಹಿರಿಯ ಮುಖಂಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ಅವರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸೂಕ್ತ ಸ್ಥಾನಮಾನ ಕೊಡಿಸುವ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಆ ಮೂಲಕ ಕ್ಷೇತ್ರದಲ್ಲಿ ಉಂಟಾಗಬಹುದಾಗಿದ್ದ ಬಂಡಾಯದ ಶಮನಕ್ಕೆ ಸಂಸದರು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ ನಂದಿ ಕ್ಷೇತ್ರದಲ್ಲಿ ಬಿಜೆಪಿಯ ಕೆಲವು ಸ್ಥಳೀಯ ಮುಖಂಡರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎನ್‌ಡಿಎ ವರಿಷ್ಠರ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ನಡೆಯುವವರ ಬಗ್ಗೆ ಸಂಸದರು ತೀವ್ರ ಬೇಸರ ವ್ಯಕ್ತಪಡಿಸಿದ್ದು ಮೈತ್ರಿಕೂಟದ ಶಿಸ್ತನ್ನು ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಪೆರೇಸಂದ್ರದಿಂದ ಕೆ.ವಿ.ನಾಗರಾಜ್ ಕಣಕ್ಕೆ ಅಸಮಾಧಾನ ತಣಿಸಲು ಮುಂದಾದ ಸುಧಾಕರ್ ಕಾವೇರುತ್ತಿದೆ ಚಿಮುಲ್ ಚುನಾವಣೆ
ವಿಭಜನೆಯ ಕ್ರೆಡಿಟ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ‘ಚಿಮುಲ್’ ಒಕ್ಕೂಟವನ್ನು ತರುವಲ್ಲಿ ಸಂಸದ ಡಾ. ಕೆ. ಸುಧಾಕರ್ ಹೋರಾಟ ನಡೆಸಿದ್ದರು. ಈ ವಿಚಾರವನ್ನು ಮತದಾರರ ಮುಂದೆ ಕೊಂಡೊಯ್ಯಲು ಎನ್‌ಡಿಎ ಮೈತ್ರಿಕೂಟ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.